ದುಬೈ : ಟಿ-20 ಕ್ರಿಕೆಟ್ ನಲ್ಲಿ ಇಂದು ಏಷ್ಯಾಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಪ್ಟೆಂಬರ್ 14 ರಂದು ದುಬೈನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಈ ಪಂದ್ಯದ ಬಗ್ಗೆ ಭಾರತದಲ್ಲಿ ಸಾಕಷ್ಟು ಪ್ರತಿಭಟನೆ ವ್ಯಕ್ತವಾಗುತ್ತಿದೆ. ಈ ಪಂದ್ಯವನ್ನು ರದ್ದುಗೊಳಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯ ಮಾಡಲಾಗುತ್ತಿದೆ.
ಈ ನಡುವೆ ಪಹಲ್ಗಾಮ್ ದಾಳಿಯಲ್ಲಿ ಸಾವನ್ನಪ್ಪಿದ್ದ ಶುಭಂ ದ್ವಿವೇದಿ ಅವರ ಪತ್ನಿ ಐಶಾನ್ಯಾ ದ್ವಿವೇದಿ ಅವರು, ಏಷ್ಯಾ ಕಪ್ ನಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಮತ್ತು ಬಿಸಿಸಿಐನ ಈ ನಡೆ ಖಂಡಿಸಿದರು.
ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನದ ವಿರುದ್ಧ ಆಡಲು ಒಪ್ಪಿಕೊಂಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯನ್ನು ಟೀಕಿಸಿದ ಐಶಾನ್ಯಾ, ಈ ವರ್ಷ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ 26 ಜನರ ತ್ಯಾಗವನ್ನು ಬಿಸಿಸಿಐ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಬಿಸಿಸಿಐ ಒಪ್ಪಿಕೊಳ್ಳಬಾರದಿತ್ತು. ಆ 26 ಕುಟುಂಬಗಳ ಬಗ್ಗೆ ಬಿಸಿಸಿಐ ಭಾವನಾತ್ಮಕವಾಗಿಲ್ಲ ಎಂದು ನಾನು ಭಾವಿಸುತ್ತೇನೆ. ನಮ್ಮ ಕ್ರಿಕೆಟಿಗರು ಏನು ಮಾಡುತ್ತಿದ್ದಾರೆ? ಕ್ರಿಕೆಟಿಗರನ್ನು ರಾಷ್ಟ್ರೀಯವಾದಿಗಳು ಎಂದು ಹೇಳಲಾಗುತ್ತದೆ. ಇದನ್ನು ನಮ್ಮ ರಾಷ್ಟ್ರೀಯ ಆಟವೆಂದು ನೋಡಲಾಗುತ್ತದೆ. 1-2 ಕ್ರಿಕೆಟ್ ಆಟಗಾರರನ್ನು ಹೊರತುಪಡಿಸಿ, ಉಳಿದವರು ಯಾರೂ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಬೇಕೆಂದು ಮುಂದೆ ಬರಲಿಲ್ಲ. ಬಿಸಿಸಿಐ ಸಹ ನಮ್ಮ ದೇಶದ ಪರವಾಗಿ ನಿಲುವು ತೆಗೆದುಕೊಳ್ಳಬೇಕು. ಆದರೆ ಅವರು ಹಾಗೆ ಮಾಡುತ್ತಿಲ್ಲಎಂದು ತಿಳಿಸಿದ್ದಾರೆ.
ಏ.22ರಂದು ಕಾಶ್ಮೀರದಲ್ಲಿ ನಡೆದ ಪಾಕ್ ಪ್ರೇರಿತ ಪಹಲ್ಗಾಮ್ ಉಗ್ರದಾಳಿಯ ಆಕ್ರೋಶ, ಆ ನೋವು-ಆಘಾತ ಇನ್ನೂ ಮಾಸದಿರುವಾಗಲೇ ನೆರೆಯ ಬದ್ಧ ಎದುರಾಳಿಯ ವಿರುದ್ಧ ಭಾರತೀಯ ತಂಡ ಏಷ್ಯಾ ಕಪ್ ಟಿ20 ಕ್ರಿಕೆಟ್ ಸೆಣಸಾಟಕ್ಕೆ ಅಣಿಯಾಗಿದೆ.
ಭಾನುವಾರ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಇತ್ತಂಡಗಳು ಕಣಕ್ಕಿಳಿಯಲಿವೆ. ಪಾಕಿಸ್ತಾನ ವಿರುದ್ಧದ ಈ ಪಂದ್ಯವನ್ನು ದೇಶಪ್ರೇಮಿಗಳು, ಪೆಹಲ್ಗಾಮ್ ಸಂತ್ರಸ್ತರು ವಿರೋಧಿಸುತ್ತಲೇ ಇದ್ದಾರೆ. ಆದರೆ ಇದು ಏಷ್ಯನ್ ಕ್ರಿಕೆಟ್ ಸಮಿತಿ (ಎಸಿಸಿ) ನಡೆಸುವ ಬಹು ತಂಡಗಳ ಸರಣಿಯಾದ್ದರಿಂದ ಇತ್ತಂಡಗಳು ಮುಖಾಮುಖೀ ನಡೆದೇ ಬಿಡಲಿ ಎಂದು ಕೇಂದ್ರ ಸರಕಾರ ಹಸಿರು ನಿಶಾನೆ ತೋರಿದೆ. ಹೀಗಾಗಿ ಎಂದಿಗಿಂತ ಹೆಚ್ಚಿನ ಬಿಗು ವಾತಾವರಣದಲ್ಲಿ ಈ ಪಂದ್ಯ ಸಾಗುವುದರಲ್ಲಿ ಅನುಮಾನವಿಲ್ಲ.
ಭಾರತ ಈ ಪಂದ್ಯ ಗೆದ್ದರೆ ಎಲ್ಲರೂ ಖುಷಿಪಡುತ್ತಾರೆ, ಭರ್ಜರಿ ವಿಜಯೋತ್ಸವ ಆಚರಿಸುತ್ತಾರೆ, ಈ ಗೆಲುವು ಪಹಲ್ಗಾಮ್ನಲ್ಲಿ ಹತ್ಯೆಗೀಡಾದ ಕುಟುಂಬದವರಿಗೆ ಅರ್ಪಣೆಗೊಳ್ಳಲಿದೆ. ಇದು ವಾಸ್ತವ. ಅಕಸ್ಮಾತ್ ಸೋತರೆ? ಟೀಮ್ ಇಂಡಿಯಾ ಮತ್ತು ದೇಶದ ವಿರುದ್ಧ ದೊಡ್ಡ ಮಟ್ಟದ ಆಕ್ರೋಶ ಹೊರಹೊಮ್ಮುವ ಸಾಧ್ಯತೆ ಇದ್ದೇ ಇದೆ. ಪಾಕಿಸ್ತಾನದ ಜತೆ ಕ್ರಿಕೆಟ್ ಬೇಕಿತ್ತಾ ಎಂದು ಎಲ್ಲರೂ ಜರಿಯುವುದರಲ್ಲಿ ಅನುಮಾನವಿಲ್ಲ. ಸೂರ್ಯಕುಮಾರ್ ಪಡೆ ಇದಕ್ಕೆ ಅವಕಾಶ ಕೊಡದೆ ಪಂದ್ಯ ಗೆಲುವಿನ ನೆಲೆಯಲ್ಲಿ ಎದುರು ನೋಡುತ್ತಿದೆ.
ಭಾರತವೇ ಬಲಿಷ್ಠ. ಇದರಲ್ಲಿ ಎರಡು ಮಾತಿಲ್ಲ. ಅಭಿಷೇಕ್ ಶರ್ಮಾ, ಗಿಲ್, ಸೂರ್ಯಕುಮಾರ್, ಬುಮ್ರಾ, ಕುಲದೀಪ್, ಚಕ್ರವರ್ತಿ… ಹೀಗೆ ಅನೇಕರನ್ನು ಹೆಸರಿಸಬಹುದು. ಪಾಂಡ್ಯ, ಅಕ್ಷರ್ ಪಟೇಲ್, ತಿಲಕ್ ವರ್ಮ, ದುಬೆ, ಸ್ಯಾಮ್ಸನ್ ಕೂಡ ಆಕ್ರಮಣಕ್ಕೆ ಅಣಿಯಾಗಿದ್ದಾರೆ. ಪಾಕ್ ಪಾಲಿಗೆ ಇವರೆಲ್ಲರೂ ಅಪಾಯಕಾರಿಗಳೇ. ಭಾರತದ ಬ್ಯಾಟಿಂಗ್ ಸರದಿ ಪಾಕಿಸ್ತಾನಕ್ಕೆ ತಲೆನೋವು ತರುವುದರಲ್ಲಿ ಅನುಮಾನವಿಲ್ಲ ಎಂಬುದು ಅನೇಕರ ವಿಶ್ಲೇಷಣೆ.
ಪಾಕಿಸ್ತಾನ ಸೈಮ್ ಅಯೂಬ್, ಫಖರ್ ಜಮಾನ್, ಶಾಹಿಬ್ಜಾದಾ ಫರ್ಹಾನ್ ಹ್ಯಾರಿಸ್, ಅಫ್ರಿದಿ, ನವಾಜ್, ಅಬ್ರಾರ್, ಮುಖೀಂ, ಫಾಹಿಮ್ ಅಶ್ರಫ್ ಮೊದಲಾದ ಆಟಗಾರರ ಪಡೆಯನ್ನು ಕಟ್ಟಿಕೊಂಡು ಬಂದಿದೆ. ನಾಯಕ ಸಲ್ಮಾನ್ ಅಲಿ ಆಘಾ ಭಾರತದೆದುರು ಪಾಕ್ ತಂಡವನ್ನು ಮುನ್ನಡೆಸುತ್ತಿರುವುದು ಇದೇ ಮೊದಲು. ಭಾರತದೆದುರು ಸದಾ ಒತ್ತಡದಲ್ಲೇ ಆಡುವ ಪಾಕಿಸ್ತಾನ, ಆಘಾ ಸಾರಥ್ಯದಲ್ಲೂ ಇದಕ್ಕಿಂತ ಭಿನ್ನ ಪ್ರದರ್ಶನ ನೀಡುವ ಸಾಧ್ಯತೆ ಕಡಿಮೆ. ಆದರೆ ಟಿ20 ಪಂದ್ಯವಾದ್ದರಿಂದ ಏನೂ ಸಂಭವಿಸಬಹುದು ಎಂಬ ಎಚ್ಚರಿಕೆ ಅಗತ್ಯ.