ಅಥಣಿ; ಕನ್ನಡ ಭಾಷೆ, ಇತಿಹಾಸ, ಸಂಸ್ಕೃತಿ, ಅಭಿಮಾನಗಳಿಂದ ಇಂದಿನ ಯುವ ಪೀಳಿಗೆಯು ವಿಮುಖವಾಗುತ್ತಿರುವುದು ವಿಷಾದನೀಯವೆಂದು ಅಥಣಿಯ ಹಿರಿಯ ಸಾಹಿತಿ ಡಾ. ಬಾಳಾಸಾಹೇಬ ಲೋಕಾಪುರ ಕಳವಳ ವ್ಯಕ್ತಪಡಿಸಿದರು.
ನಗರದ ಐನಾಪುರ ರಸ್ತೆಯಲ್ಲಿರುವ ಅನ್ನಪೂರ್ಣಾ ಸಮೂಹದ ಶಿಕ್ಷಣ ಸಂಸ್ಥೆಗಳ ನೆಕ್ಸಸ್ ಸಭಾಭವನದಲ್ಲಿ ಸೋಮವಾರ ಕನ್ನಡ ವಿಭಾಗದ ಆಶ್ರಯದಲ್ಲಿ ಜರುಗಿದ ‘ಕನ್ನಡ ಹಬ್ಬ-2025 ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ-ಕನ್ನಡಿಗ-ಕರ್ನಾಟಕದ ಇತಿಹಾಸವನ್ನು ಎಳೆಎಳೆಯಾಗಿ ಬಿಚ್ಚಿಟ್ಟು, ಈ ನೆಲದಲ್ಲಿ ಹುಟ್ಟಿದ ಅನ್ಯಭಾಷಿಕರೂ ಸೇರಿದಂತೆ ಎಲ್ಲರೂ ಪ್ರೀತಿಯಿಂದ ಕನ್ನಡವನ್ನು ಕಟ್ಟಿ, ಉಳಿಸಿ, ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ. ಎ. ಎ. ಪಾಂಗಿ ಮಾತನಾಡಿ, ವೈದ್ಯಕೀಯ ಕ್ಷೇತ್ರ ಸೇರಿದಂತೆ ಇನ್ನಿತರೆ ಎಲ್ಲ ಕ್ಷೇತ್ರಗಳಲ್ಲೂ ಕನ್ನಡ ನುಡಿಯಲ್ಲಿಯೇ ಸೇವೆ, ಸಂಶೋಧನೆ, ಅಧ್ಯಯನ ಸಾಮಗ್ರಿಗಳು ದೊರೆಯುವಂತಾಗಬೇಕು. ಆ ನಿಟ್ಟಿನಲ್ಲಿ ಕನ್ನಡ ವೈದ್ಯ ಬರಹಗಾರರ ಒಕ್ಕೂಟವು ಕನ್ನಡ ಶಬ್ಧಕೋಶ ತಯಾರಿಸುತ್ತಿದ್ದು, ಈ ಕಾರ್ಯ ಎಲ್ಲ ಕ್ಷೇತ್ರಗಳಲ್ಲೂ ಆಗಬೇಕಿದೆ ಎಂದರಲ್ಲದೇ ಈ ನೆಲದಲ್ಲಿ ಹುಟ್ಟಿದ್ದರೂ ಕನ್ನಡ ಗೊತ್ತಿಲ್ಲವೆಂದರೆ ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ಇಲ್ಲಿ ಹುಟ್ಟಿದ ಪ್ರತಿಯೊಬ್ಬರು ಕನ್ನಡವನ್ನು ಕಲಿಯುವುದು ಅವರ ಆದ್ಯ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಗಣ್ಯರು ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಶಬಾನಾ ಮುಲ್ಲಾ ಕನ್ನಡಪರ ನುಡಿ ಹಂಚಿಕೊಂಡರು. ವಿದ್ಯಾರ್ಥಿಗಳು ಅಭಿನಯಿಸಿದ್ದ ವಿಶೇಷ ಕನ್ನಡಪರ ವಿಡಿಯೋವನ್ನು ಪ್ರದರ್ಶಿಸಲಾಯಿತು.
ಎಜಿಐ ಆಡಳಿತಾಧಿಕಾರಿ ಪ್ರೊ. ರಮೇಶ್ ಪೈರಾಸಿ, ಬಿಎಸ್ಸಿ ನರ್ಸಿಂಗ್ ಪ್ರಾಚಾರ್ಯ ಪ್ರೊ. ಮಹಾಂತೇಶ್ ಮಿರ್ಜಿ, ಪ್ಯಾರಾ ಮೆಡಿಕಲ್ ಪ್ರಾಚಾರ್ಯ ಪ್ರೊ. ಕಿರಣ ಕೆಂಪಿ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾವೇರಿ ಪಾಟೀಲ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕುಮಾರ ತಳವಾರ ಪರಿಚಯಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾ ಗೆಜ್ಜಿ ಮತ್ತು ಅಕ್ಷತಾ ಕೊಪ್ಪದ ನಿರೂಪಿಸಿದರು. ಪ್ರೀತಿ ಹೊಳಿಕಟ್ಟಿ ವಂದಿಸಿದರು.


