ಬೆಳಗಾವಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೈಲಹೊಂಗಲ ತಾಲೂಕಿನ ಅನಿಗೋಳ ಗ್ರಾಮದಲ್ಲಿ ನಡೆದಿದೆ.
ಗೌರವ್ವ ನೀಲಪ್ಪ ಕೆಂಗಾನೂರು (36) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ಗುರುತಿಸಲಾಗಿದೆ. ಜೀವನ ನಿರ್ವಹಣೆಗಾಗಿ ಗೌರವ್ವ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ 7ರಿಂದ 10 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲ ತೀರಿಸುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಯಿಂದ ನಿರಂತರ ಕಿರುಕುಳ ನೀಡಲಾಗುತ್ತಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಮಾನಸಿಕ ಒತ್ತಡವನ್ನು ಸಹಿಸಲಾಗದೆ ಗೌರವ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಡೆತ್ ನೋಟ್ ನಲ್ಲಿ ಏನಿದೆ :
ಗೌರವ್ವ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಮನೆಯ ಗೋಡೆಯ ಮೇಲೆ ಆರೂಢ ತಂಗಿಯನ್ನು ಚೆನ್ನಾಗಿ ನೋಡಿಕೊ. ನನ್ನ ಸಾವಿಗೆ ಸಾಲ ಕಾರಣ. ಸುಮವ್ವ, ಮಂಜವ್ವಾ, ಕಸ್ತೂರಿ ಮಕ್ಕಳು ನಿಮ್ಮ ಜವಾಬ್ದಾರಿ. ಸಿದ್ದಪ್ಪಾ ಆರೂಢನನ್ನು 10ನೇ ತರಗತಿ ಪಾಸ ಮಾಡಿಸು. ಇದೆ ನನ್ನ ಕೊನೆಯ ಆಸೆ ಎಂದು ಬರೆದು ಮನೆಯ ಸಮೀಪ ಇರುವ ಕೆರೆಗೆ ಹಾರಿ ಪ್ರಾಣ ಕಳೆದಕೊಂಡಿದ್ದಾರೆ.
ಹಾಗೆಯೇ ಕೆರೆಯಿಂದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಜೊತೆಗೆ ಡೆತ್ ನೋಟ್ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜೊತೆಗೆ ಫೈನಾನ್ಸ್ ಕಂಪೆನಿಯವರು ಈ ರೀತಿಯ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಸ್ಥಳೀಯರು ಆಗ್ರಹ ಮಾಡಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ ಹನುಮಂತ ಶಿರಹಟ್ಟಿ, ಪಿಎಸ್ಐ ಗುರುರಾಜ ಕಲಬುರಗಿ ಭೇಟಿ ನೀಡಿ ಕುಟುಂಬಸ್ಥರಿಂದ, ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು.
ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


