ಚಾಮರಾಜನಗರ: ಎತ್ತುಗಳು ಜೋಳದ ಬೆಳೆಯನ್ನು ತಿಂದು
ನಾಶ ಮಾಡಿವೆ ಎಂದು ಅವುಗಳ ಕಾಲುಗಳನ್ನೇ ಕತ್ತರಿಸಿರುವ ಘಟನೆ ಚಾಮರಾಜನಗರದ ಹನೂರು ತಾಲೂಕಿನ ಒಡೆಯರ ಪಾಳ್ಯದ ಟಿಬೆಟಿಯನ್ ಕ್ಯಾಂಪ್ನ ದಿ ವಿಲೇಜ್ನಲ್ಲಿ ನಡೆದಿದೆ.
ದಿ ವಿಲೇಜ್ನಲ್ಲಿ ಟಿಬೆಟಿಯನ್ನರು ವ್ಯವಸಾಯ ಮಾಡಿಕೊಂಡು ವಾಸವಿದ್ದಾರೆ. ಎತ್ತುಗಳು ಜೋಳದ ಫಸಲನ್ನು ನಾಶ ಮಾಡಿವೆ ಎಂಬ ಕಾರಣಕ್ಕೆ ಮೂವರು ಟಿಬೆಟಿಯನ್ನರು ಈ ಕೃತ್ಯವನ್ನು ಎಸಗಿದ್ದಾರೆ.
ಗಡಿ ಜಿಲ್ಲೆ ರೈತರ ಮೇಲೆ ದರ್ಪ ಮೆರೆಯುತ್ತಿರುವ ಟಿಬೆಟಿಯನ್ನರು, 15ಕ್ಕೂ ಹೆಚ್ಚು ಎತ್ತುಗಳ ಕಾಲು, ಬಾಲ, ಕೊಂಬುಗಳನ್ನು ಕತ್ತರಿಸಿದ್ದಾರೆ. ಇದರಿಂದಾಗಿ ಎತ್ತುಗಳು ಬದುಕಿದ್ದು ಸತ್ತಂತೆ ಆಗಿವೆ. ಎತ್ತುಗಳ ಸ್ಥಿತಿ ಕಂಡು ಎತ್ತುಗಳ ಮಾಲೀಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕೃಷಿಗೆ ಈ ಎತ್ತುಗಳೇ ಆಧಾರವಾಗಿದ್ದವು. ಮನೆ ಮಕ್ಕಳಂತೆ ಜೋಪಾನ ಮಾಡಿದ್ದ ಎತ್ತುಗಳ ಕಾಲುಗಳನ್ನು ಕತ್ತರಿಸಿದ್ದಾರೆ. ನಮ್ಮ ಬದುಕು ಬೀದಿಗೆ ಬಂದಿದೆ ಎಂದು ಕೃಷಿಕರು ಬೇಸರ ವ್ಯಕ್ತಪಡಿಸಿದರು.