ಬೆಳಗಾವಿ :
ಇಲ್ಲಿಯ ಶಾಹುನಗರದಲ್ಲಿ ವಿದ್ಯುತ್ ಅವಘಡಕ್ಕೆ ಒಂದೇ ಕುಟುಂಬದ ಮೂವರು ಬಲಿಯಾಗಿರುವ ಘಟನೆ ಶನಿವಾರ ನಡೆದಿದೆ.
ಈರಪ್ಪ ರಾಠೋಡ (53), ಶಾಂತವ್ವ ರಾಠೋಡ (45)ಮತ್ತು 13 ವರ್ಷದ ಅನ್ನಪೂರ್ಣ ರಾಠೋಡ ಮೃತಪಟ್ಟವರು. ಮೃತಪಟ್ಟವರು ರಾಮದುರ್ಗ ತಾಲೂಕು ಅರಬೆಂಚಿ ತಾಂಡಾದವರು. ನಿರ್ಮಾಣ ಹಂತದ ಕಟ್ಟಡದಲ್ಲಿ ವಾಚ್ ಮನ್ ಆಗಿ ಕೆಲಸ ಮಾಡುತ್ತಿದ್ದ ಈರಪ್ಪ ರಾಥೋಡ ಕುಟುಂಬ ಈ ಅಘಾತಕ್ಕೆ ಒಳಗಾಗಿದೆ. ವಾಚ್ ಮನ್ ಈರಪ್ಪ ಶನಿವಾರ ಬೆಳಗ್ಗೆ ಕಟ್ಟಡಕ್ಕೆ ನೀರು ಹೊಡೆಯಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ದುರಂತ ಸಂಭವಿಸಿದೆ.
ದುರಂತಕ್ಕೆ ಕಾರಣ ಏನು ?ರಾಮದುರ್ಗ ತಾಲೂಕಿನ ಅರಬೆಂಚಿ ತಾಂಡದವರಾದ ಈರಪ್ಪ, ಶಾಂತವ್ವ ಮತ್ತು ಅವರ ಮೊಮ್ಮಗಳು ಅನ್ನಪೂರ್ಣ ವಿದ್ಯುತ್ ಸ್ಪರ್ಶಕ್ಕೆ ಬಲಿಯಾದ ಕಾರಣ ನೆರೆದವರ ಮನ ಕದಡಿತು. ಈರಪ್ಪ ವಾಚ್ ಮನ್. ಇವರ ಕುಟುಂಬ ಕೆಲ ವರ್ಷಗಳಿಂದ ಬೆಳಗಾವಿಯಲ್ಲಿ ನೆಲೆಸಿದೆ. ನಿರ್ಮಾಣ ಹಂತದ ಕಟ್ಟಡದ ಬಳಿ ಈರಪ್ಪ ಅವರಿಗೆ ತಗಡಿನ ಶೆಡ್ ನಿರ್ಮಿಸಲಾಗಿತ್ತು. ಚಾವಣಿಯ ಆಸರೆಗೆ ಕಬ್ಬಿಣದ ಕಂಬ ನಿಲ್ಲಿಸಲಾಗಿದೆ. ಅಲ್ಲಿ ಕರೆಂಟ್ ಕಾಯಿಲ್ ಹಾಕಿ ನೀರು ಕಾಯಿಸಲು ಇಟ್ಟಿದ್ದರು. ಕಂಬಕ್ಕೆ ವಿದ್ಯುತ್ ತಂತಿ ತಗುಲಿ ವಿದ್ಯುತ್ ಪ್ರವಹಿಸಿದೆ. ಕಂಬ ಸ್ಪರ್ಶಗೊಂಡ ಕಾರಣ ಮೂವರು ಸ್ಥಳದಲ್ಲೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.