ಬೆಳಗಾವಿ : ಬೆಳಗಾವಿಯಲ್ಲಿ ಹಣ ಲಪಟಾಯಿಸಿದ್ದ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ನಾಪತ್ತೆಯಾಗಿರುವ ಇನ್ನಿಬ್ಬರನ್ನು ಬಂಧಿಸಲು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಪರಾರಿಯಾದ ಇಬ್ಬರು ಆರೋಪಿಗಳ ಪತ್ತೆಗೆ ಪ್ರತ್ಯೇಕ ತಂಡ ರಚಿಸಲಾಗಿದೆ.
ಆರೋಪಿಗಳ ಪತ್ತೆಗಾಗಿ ಪೊಲೀಸ್ ಇನ್ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ, ಪಿಎಸ್ಐ ಶ್ರೀಶೈಲ ಹುಳಗೇರಿ ಮತ್ತು ಶಿವಾಜಿ ಚವ್ಹಾಣ ಅವರನ್ನು ಒಳಗೊಂಡ ತಂಡ ರಚಿಸಿ, ಉತ್ತರಪ್ರದೇಶ ಮತ್ತು ಬಿಹಾರಕ್ಕೆ ಕಳುಹಿಸಿದ್ದರು. ಕೊನೆಗೂ ಆರೋಪಿಗಳನ್ನು ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲಿಂದ ಬೆಳಗಾವಿಗೆ ಕರೆತಂದು ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಇನ್ನಿಬ್ಬರಿಗೆ ಶೋಧ ನಡೆಸಲಾಗಿದೆ.
ಪ್ರಕರಣವೇನು ? :
32 ಲಕ್ಷ ರೂ. ವಂಚನೆ ನಡೆಸಿದ ಪ್ರಕರಣದ ಬಗ್ಗೆ
ಮಹತ್ವದ ಕಾರ್ಯಾಚರಣೆ ನಡೆಸಿರುವ ಬೆಳಗಾವಿ ಮಾಳಮಾರುತಿ ಪೊಲೀಸರು ಮೂವರು ವಂಚಕರನ್ನು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿ ಅಟೋನಗರದ ಟಿಸಿಐ
ಖಾಸಗಿ ಕಂಪನಿ ಖಾತೆಗೆ ಜಮಾಗೊಳಿಸಬೇಕಿದ್ದ ₹ 32.08 ಲಕ್ಷ ಲಪಟಾಯಿಸಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಪ್ರದೀಪ ರಾಮದುಲಾರೆ ಸಿಂಗ್ (30), ಸಂಜಯಕುಮಾರ ಯಾದವ್ (43), ಬಿಹಾರದ ಕಮಲೇಶ ಯೋಗೇಂದ್ರ ಠಾಕೂರ್ (49) ಬಂಧಿತರಾಗಿದ್ದಾರೆ. ಬೆಳಗಾವಿಯ ಆಟೋ ನಗರದಲ್ಲಿರುವ ಟಿಸಿಐ ಕಂಪನಿಯಲ್ಲಿ ಪ್ರದೀಪ ಸಿಂಗ್, ಕಮಲೇಶ ಠಾಕೂರ್ ಕಾರ್ಯ ನಿರ್ವಹಿಸುತ್ತಿದ್ದರು. 2022 ರ ಫೆಬ್ರವರಿ 22 ರಿಂದ 2023ರ ಮಾರ್ಚ್ 31ರ ಅವಧಿಯಲ್ಲಿ ಪ್ರದೀಪ ₹32.08 ಲಕ್ಷ ಹಣವನ್ನು ಕಂಪನಿ ಖಾತೆ ಬದಲಿಗೆ ತನ್ನ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಅವರಿಗೆ ಇದೇ ಕಂಪನಿಯ ಬೆಳಗಾವಿ ಶಾಖೆಯ ಸಂಜಯಕುಮಾರ, ಹೊಸಪೇಟೆ ಶಾಖೆಯ ಸೌರಭ ಮಿಶ್ರಾ ಮತ್ತು ಕಲಬುರಗಿ ಶಾಖೆಯ ದೇವೇಂದ್ರ ದಾಲಬೀರ ಸಹಕರಿಸಿದ್ದರು. ನಂತರ ಎಲ್ಲರೂ ಪರಾರಿಯಾಗಿದ್ದರು. ಈ ಕುರಿತು ಬೆಂಗಳೂರಿನ ಲವಕೇಶಕುಮಾರ ಲಕ್ಷ್ಮಿನಾರಾಯಣ ಸ್ವಾಮಿ ಸಾಹು ಅವರು 2024ರ ಏಪ್ರಿಲ್ 4ರಂದು ಮಾಳಮಾರುತಿ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಬೆಳಗಾವಿ ಮಾಳಮಾರುತಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.