ಬೆಳಗಾವಿ: ಮುಂಬೈ ಮತ್ತು ಪುಣೆ ಮಹಾನಗರಗಳ ಸಾರ್ವಜನಿಕ ಗಣಪತಿ ಉತ್ಸವಗಳ ಬಳಿಕ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಬೆಳಗಾವಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯುವ ಇತಿಹಾಸ ಇದೆ. ಈ ಸಲವು 10 ದಿನಗಳ ಕಾಲ ವೈಭವದಿಂದ ನಡೆದ ಗಣೇಶೋತ್ಸವದ ಮೆರವಣಿಗೆ ಬುಧವಾರ ರಾತ್ರಿ ಮತ್ತೊಂದು ಹೊಸ ಇತಿಹಾಸವನ್ನು ನಿರ್ಮಿಸಿದೆ. ಬಹುದೀರ್ಘಕಾಲ ಮೆರವಣಿಗೆ ನಡೆಯುವ ಮೂಲಕ ಬೆಳಗಾವಿ ಗಣೇಶೋತ್ಸವ ಈ ಬಾರಿ ಮತ್ತೆ ಗಮನ ಸೆಳೆದಿದೆ.
ಬೆಳಗಾವಿಯ ಸಾರ್ವಜನಿಕ ಗಣೇಶೋತ್ಸವ ಈ ಬಾರಿ ದಾಖಲೆ ಮೆರೆದಿದೆ. ಸತತ 32 ಗಂಟೆಗಳ ಕಾಲ ಮೆರವಣಿಗೆ ನಡೆದು ಒಟ್ಟು 386 ಸಾರ್ವಜನಿಕ ಗಣಪತಿಗಳ ವಿಸರ್ಜನೆಯಾಗಿದೆ.
ಸಾರ್ವಜನಿಕ ಗಣಪತಿ ಉತ್ಸವ ಎಂದರೆ ಬೆಳಗಾವಿ ಜನತೆಗೆ ಇನ್ನಿಲ್ಲದ ಉತ್ಸಾಹ. ಅದು ಈ ಸಲವು ಮತ್ತೆ ಸಾಬೀತುಗೊಂಡಿತು. ಮಂಗಳವಾರ ಸಂಜೆ 4:00 ಗಂಟೆಗೆ ಆರಂಭವಾದ ಸಾರ್ವಜನಿಕ ಗಣಪತಿಗಳ ಮೆರವಣಿಗೆ ಮರುದಿನ ಅಂದರೆ ಬುಧವಾರ ಮಧ್ಯರಾತ್ರಿ 12 ಗಂಟೆವರೆಗೂ ಸಾಗುವ ಮೂಲಕ ಬೆಳಗಾವಿಯ ಸಾರ್ವಜನಿಕ ಗಣೇಶೋತ್ಸವದಲ್ಲಿ ಬಹು ದೊಡ್ಡ ಇತಿಹಾಸ ಬರೆಯಿತು. ಕಪಿಲೇಶ್ವರದ ವಿಸರ್ಜನಾ ತಾಣಕ್ಕೆ ಸಾಗುವ ಮಾರ್ಗದಲ್ಲಿ ಸಾಲಾಗಿ ನಿಂತಿದ್ದ ಗಣಪತಿಗಳು ಒಂದಕ್ಕಿಂತ ಮತ್ತೊಂದು ನಯನ ಮನೋಹರವಾಗಿದ್ದವು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗಣಪತಿಗಳ ದರ್ಶನ ಪಡೆದು ಪುನೀತರಾದರು. ಸಾರ್ವಜನಿಕ ಗಣೇಶ ಮಂಡಳಿಗಳ ಪದಾಧಿಕಾರಿಗಳು ಎರಡು ದಿನಗಳ ಕಾಲ ಉತ್ಸಾಹದಿಂದ ಭಾಗವಹಿಸಿ ಭಕ್ತಿಯಿಂದ ಪೂಜಿಸಿದ್ದ ಗಣಪನನ್ನು ಬೀಳ್ಕೊಟ್ಟರು.
ಬೆಳಗಾವಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಪೊಲೀಸರು ಭದ್ರತೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಒಟ್ಟಾರೆ, ಈ ಸಲದ ಗಣೇಶೋತ್ಸವ ಉತ್ಸಾಹದಿಂದ ಸಂಪನ್ನಗೊಂಡಿದೆ.