ಇಂದೋರ್ :
ಮಧ್ಯಪ್ರದೇಶದ ಇಂದೋರ್ನ ಪ್ರತಿಭಾನ್ವಿತ ವಿದ್ಯಾರ್ಥಿನಿ ತನಿಷ್ಕಾ ಸುಜಿತ್ 15 ನೇ ವಯಸ್ಸಿನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ (BA) ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಲು ಸಿದ್ಧರಾಗಿದ್ದಾರೆ. ಈ ಬಾಲಕಿ ಮುಂದೆ ಕಾನೂನು ಅಧ್ಯಯನ ಮಾಡಿ ದೇಶದ ಮುಖ್ಯ ನ್ಯಾಯಾಧೀಶರಾಗುವ ಗುರಿ ಹೊಂದಿದ್ದಾರೆ. 2020 ರಲ್ಲಿ ಕೋವಿಡ್ನಿಂದ ತನ್ನ ತಂದೆ ಮತ್ತು ಅಜ್ಜನನ್ನು ಕಳೆದುಕೊಂಡ ಹದಿಹರೆಯದ ಹುಡುಗಿ, ಕೆಲವು ದಿನಗಳ ಹಿಂದೆ ಭೋಪಾಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಅಲ್ಲಿ ಮೋದಿ ಅವರು ತನ್ನ ಕನಸನ್ನು ಮುಂದುವರಿಸಲು ಅವರು ಹೇಗೆ ಪ್ರೋತ್ಸಾಹಿಸಿದರು ಎಂಬುದನ್ನು ತನಿಷ್ಕಾ ಪಿಟಿಐ ಜತೆ ಹಂಚಿಕೊಂಡಿದ್ದಾರೆ.
ಇಂದೋರ್ನ ದೇವಿ ಅಹಲ್ಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ತನಿಷ್ಕಾ ಸುಜಿತ್ ಏಪ್ರಿಲ್ 19 ರಿಂದ 28 ರವರೆಗೆ ನಡೆಯಲಿರುವ ತನ್ನ ಬಿಎ (ಮನೋವಿಜ್ಞಾನ) ಅಂತಿಮ ವರ್ಷದ ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ.10 ನೇ ತರಗತಿಯನ್ನು ಮೊದಲ ದರ್ಜೆಯಲ್ಲಿ ಉತ್ತೀರ್ಣರಾದ ನಂತರ ಅವರು 13 ನೇ ವಯಸ್ಸಿನಲ್ಲಿ 12 ನೇ ತರಗತಿ ಪರೀಕ್ಷೆ ಪಾಸಾಗಿದ್ದರು.
ತನಿಷ್ಕಾ ಸುಜಿತ್ಗೆ 13 ನೇ ವಯಸ್ಸಿನಲ್ಲಿ ಬಿಎ (ಮನೋವಿಜ್ಞಾನ) ಮೊದಲ ವರ್ಷ ಪ್ರವೇಶ ನೀಡಲಾಗಿದ್ದು, ವಿಶ್ವವಿದ್ಯಾನಿಲಯವು ಆಕೆಗೆ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದರು ಎಂದು ದೇವಿ ಅಹಲ್ಯಾ ವಿಶ್ವವಿದ್ಯಾನಿಲಯದ ಸಮಾಜ ವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥೆ ರೇಖಾ ಆಚಾರ್ಯ ಹೇಳಿದ್ದಾರೆ.
ಸಂಯೋಜಿತ ಕಮಾಂಡರ್ಗಳ ಸಮ್ಮೇಳನಕ್ಕಾಗಿ ಏಪ್ರಿಲ್ 1 ರಂದು ರಾಜ್ಯದ ರಾಜಧಾನಿ ಭೋಪಾಲ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ತನಿಷ್ಕಾ ಸುಜಿತ್ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಸುಮಾರು 15 ನಿಮಿಷಗಳ ಕಾಲ ಬಾಲಕಿ ಮೋದಿ ಜತೆ ಮಾತುಕತೆ ನಡೆಸಿದ್ದರು. ತಾನು ಬಿಎ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಅಮೆರಿಕದಲ್ಲಿ ಕಾನೂನು ಕಲಿಯಲು ಬಯಸಿದ್ದೇನೆ. ಮುಂದೊಂದು ದಿನ ನಾನು ಭಾರತದ ಮುಖ್ಯ ನ್ಯಾಯಮೂರ್ತಿಯಾಗುವ ಕನಸು ಕಂಡಿದ್ದೇನೆ ಎಂದು ಪ್ರಧಾನಿಯವರಲ್ಲಿ ಹೇಳಿರುವುದಾಗಿ ತನಿಷ್ಕಾ ಹೇಳಿದ್ದಾರೆ.
ನನ್ನ ಗುರಿಯ ಬಗ್ಗೆ ಕೇಳಿದ ಪ್ರಧಾನಿ, ಸುಪ್ರೀಂಕೋರ್ಟ್ಗೆ ಹೋಗಿ ಅಲ್ಲಿನ ವಕೀಲರ ವಾದಗಳನ್ನು ವೀಕ್ಷಿಸಲು ಸಲಹೆ ನೀಡಿದರು, ಅದು ನನ್ನ ಗುರಿಯನ್ನು ಸಾಧಿಸಲು ನನಗೆ ಪ್ರೇರೇಪಿಸುತ್ತದೆ. ಪ್ರಧಾನಿಯವರನ್ನು ಭೇಟಿಯಾಗುವ ನನ್ನ ಕನಸು ನನಸಾಗಿದೆ ಎಂದು ಆಕೆ ಹೇಳಿದ್ದಾರೆ.
ನನ್ನ ಪತಿ ಮತ್ತು ಮಾವ 2020 ರಲ್ಲಿ ಕೊರೊನಾವೈರಸ್ ನಿಂದ ಸಾವನ್ನಪ್ಪಿದ್ದಾರೆ. ಮಗಳಿಗಾಗಿ ನಾನು ನನ್ನ ದುಃಖವನ್ನು ಅದುಮಿ, ಆಕೆಯ ಜತೆ ನಿಂತೆ. ಆಕೆ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದಳು ಎಂದು ತನಿಷ್ಕಾ ಅವರ ತಾಯಿ ಅನುಭಾ ಹೇಳಿದ್ದಾರೆ.
ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡ ನನಗೆ ದಿಕ್ಕೇ ತೋಚಲಿಲ್ಲ. ಎರಡು ಮೂರು ತಿಂಗಳ ನಂತರ, ನನ್ನ ಮಗಳ ಭವಿಷ್ಯದ ಹಿತದೃಷ್ಟಿಯಿಂದ ಆಕೆಯ ಶಿಕ್ಷಣದತ್ತ ಗಮನ ಹರಿಸಬೇಕು ಇದಕ್ಕಾಗಿ ಹೋರಾಡಬೇಕು ಎಂದು ನಾನು ನಿರ್ಧರಿಸಿದೆ ಎಂದಿದ್ದಾರೆ ಅನುಭಾ.