ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ- ಮನಗೂರು ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವು ಅ-16 ರಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಶುಕ್ರವಾರ ಅ-11ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ದಸರಾ, ದೀಪಾವಳಿ, ಕ್ರಿಸ್ ಮಸ್, ಚಾಥ್, ಪೂಂಗಲ್ ಹಬ್ಬದ ಅಂಗವಾಗಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರಕ್ಕೆ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ ಎಂದರು.
ಬೆಳಗಾವಿ-ಮನಗೂರು (07335) ಎಕ್ಸ್ಪ್ರೆಸ್ ವಿಶೇಷ ರೈಲು ಸಂಚಾರ ಅಕ್ಟೋಬರ್ 16 ರಿಂದ ಆರಂಭವಾಗಲಿದ್ದು 30 ಮಾರ್ಚ್ 2025 ರವರೆಗೆ ವಾರದಲ್ಲಿ ನಾಲ್ಕು ಬಾರಿ (ರವಿವಾರ, ಮಂಗಳವಾರ ಬುಧವಾರ ಹಾಗೂ ಶನಿವಾರ) ಮತ್ತು ಮನಗೂರು-ಬೆಳಗಾವಿ (07336) ರೈಲು ಅಕ್ಟೋಬರ್ 17 ರಿಂದ ಆರಂಭವಾಗಲಿದ್ದು 31 ಮಾರ್ಚ್ 2025 ರವರೆಗೆ ವಾರದಲ್ಲಿ ನಾಲ್ಕು ಬಾರಿ (ಸೋಮವಾರ, ಬುಧವಾರ, ಗುರುವಾರ ಮತ್ತು ರವಿವಾರ) ಸಂಚರಿಸಲಿದೆ.
ಈ ಹಿಂದೆ ನನ್ನ ಮನವಿಯ ಮೇರೆಗೆ ಪ್ರತಿದಿನ ಬೆಳಗಾವಿ-ಮನಗೂರು ನೂತನ ರೈಲು ಸಂಚಾರವನ್ನು ಪ್ರಾರಂಭಿಸಲಾಗಿತ್ತು ಆದರೆ ಯಾವುದೋ ಕಾರಣದಿಂದ ಮತ್ತೆ ಅದನ್ನು ತಡೆಹಿಡಿಯಲಾಗಿತ್ತು. ಸತತ ನನ್ನ ಪ್ರಯತ್ನದ ಫಲವಾಗಿ ರೈಲ್ವೆ ಇಲಾಖೆ ಈಗ ಪುನಃ ಈ ರೈಲನ್ನು ವಾರದಲ್ಲಿ ನಾಲ್ಕು ದಿನ ಸಂಚರಿಸಲು ಆದೇಶ ನೀಡಿದ್ದಾರೆ. ಮುಂದೆ ಪ್ರಯಾಣಿಕರ ದಟ್ಟಣೆಯನ್ನು ಗಮನಿಸಿ ಈ ರೈಲುನ್ನು ಪ್ರತಿದಿನ ಸಂಚರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಪ್ರಯಾಣಿಕರು ಈ ರೈಲು ಸೇವೆಯ ಸದುಪಯೋಗ ಪಡಿಸಿಕೊಳ್ಳಲು ಸಂಸದ ಈರಣ್ಣ ಕಡಾಡಿ ವಿನಂತಿಸಿದ್ದಾರೆ.
ನನ್ನ ಮನವಿಗೆ ಸ್ಪಂದಿಸಿ ರೈಲಿನ ವ್ಯವಸ್ಥೆ ಮಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಹಾಗೂ ನೈರುತ್ಯ ರೈಲ್ವೆ ಮಹಾಪ್ರಬಂಧಕರಿಗೆ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲೆಯ ಜನತೆಯ ಪರವಾಗಿ ಈ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.
ಬೆಳಗಾವಿಯಿಂದ ಕೊನೆಗೂ ಆರಂಭವಾಗಲಿದೆ ಈ ರೈಲು
