ಕಿತ್ತೂರು ಉತ್ಸವ ಪ್ರತಿವರ್ಷ ಒಂದಿಲ್ಲೊಂದು ವಿವಾದಗಳಿಗೆ ಕಾರಣವಾಗುತ್ತಿರುವುದು ಕಳವಳಕಾರಿ. ಈ ಬಾರಿಯೂ ಅದಕ್ಕೆ ಹೊರತಾಗಿಲ್ಲ. ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ದಿಗ್ಗಜರ ಸಾಹಿತಿಗಳಿದ್ದಾರೆ. ಅವರನ್ನು ಪರಿಗಣಿಸಬೇಕಾಗಿತ್ತು. ಪ್ರಖಂಡ ಪಂಡಿತರು, ಪಾಮರರು, ಶ್ರೇಷ್ಠ ಕವಿ-ಕೋವಿದರನ್ನು ಹೊಂದಿರುವ ಕನ್ನಡ ನಾಡಿನ ಘನತೆಗೆ ತಕ್ಕಂತೆ ಕಿತ್ತೂರು ಉತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಿ ಇದೊಂದು ಮಾದರಿ ಉತ್ಸವವನ್ನಾಗಿಸುವಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎನ್ನುವುದು ಕಿತ್ತೂರು ನಾಡ ಜನತೆಯ ಒತ್ತಾಸೆಯಾಗಿದೆ.
ಬೆಳಗಾವಿ :
ವೀರರಾಣಿ ಕಿತ್ತೂರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಗೆಲುವು ಸಾಧಿಸಿದ ಅವಿಸ್ಮರಣೀಯ ದಿನವಾದ ಅಕ್ಟೋಬರ್ 23 ರಂದು ಕಿತ್ತೂರು ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆದರೆ, ಪ್ರತಿ ವರ್ಷದಂತೆ ಈ ವರ್ಷವೂ ಕಿತ್ತೂರು ಉತ್ಸವ ಮತ್ತೆ ವಿವಾದಾಸ್ಪದಗೊಂಡಿದೆ. ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಕೆಲ ಪ್ರತಿಷ್ಠಿತ ಹೆಸರುಗಳು ನುಸುಳಿಕೊಂಡಿರುವುದು ವಿವಾದ ಸೃಷ್ಟಿಯ ಮೂಲ ಎನ್ನಬಹುದು.
ಕಿತ್ತೂರು ಉತ್ಸವದ ಅಂಗವಾಗಿ ನಡೆಯುವ ಮಹಿಳಾ ಉತ್ಸವದಲ್ಲಿ ಕಿತ್ತೂರು ಶಾಸಕ ಮಹಾಂತೇಶ ದೊಡಗೌಡ್ರ ಅವರ ಪತ್ನಿ ಗೌರವ ಉಪಸ್ಥಿತಿ ಎಂದು ಹೆಸರಿಸಲಾಗಿದೆ. ಆಮಂತ್ರಣ ಪತ್ರಿಕೆಯಲ್ಲಿರುವ ಈ ಹೆಸರು ಈಗ ಸಾಹಿತ್ಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ. ಯಾವ ಮಾನದಂಡದ ಮೇಲೆ ಅವರ ಹೆಸರನ್ನು ಸೇರಿಸಲಾಗಿದೆ ಎಂಬ ಸಾಹಿತಿಗಳ ಪ್ರಶ್ನೆಗೆ
ಕಾರ್ಯಕ್ರಮದ ಆಯೋಜಕರಾದ ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರ ಇಲ್ಲ.
ಒಟ್ಟಾರೆ, ಇದೀಗ ಸಾಹಿತ್ಯವಲಯದಲ್ಲೂ ರಾಜಕೀಯ ನುಸುಳಿದೆಯ ಎಂಬ ಅನುಮಾನ ವ್ಯಕ್ತವಾಗಿದೆ. ಶಾಸಕರು ತಮ್ಮ ಪತ್ನಿ ಹೆಸರನ್ನು ಸೇರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೋ ಅಥವಾ ಅಧಿಕಾರಿಗಳೇ ಶಾಸಕರನ್ನು ಓಲೈಕೆ ಮಾಡಲು ಶಾಸಕರ ಪತ್ನಿಯ ಹೆಸರನ್ನು ಸೇರಿಸಿದ್ದಾರೋ ಎಂಬ ಚರ್ಚೆ ನಡೆಯುತ್ತಿದೆ. ಪ್ರಧಾನವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅತ್ಯಂತ ಅಚ್ಚುಕಟ್ಟಾಗಿ, ಯಾವುದೇ ವಿವಾದ ಇಲ್ಲದಂತೆ ಕಿತ್ತೂರು ಉತ್ಸವವನ್ನು ಮುನ್ನಡೆಸಬೇಕಾಗಿತ್ತು. ಆದರೆ ಈ ಇಲಾಖೆಯೇ ಜಿಲ್ಲೆಯ ಅತ್ಯಂತ ಪ್ರತಿಷ್ಠಿತ ಉತ್ಸವದ ಬಗ್ಗೆ ಈ ಬಾರಿಯೂ ವಿವಾದ ಸೃಷ್ಟಿಗೆ ಎಡೆ ಮಾಡಿಕೊಟ್ಟಿರುವುದು ಕಿತ್ತೂರು ನಾಡಿನ ಜನತೆಯ ಸಿಟ್ಟಿಗೆ ಕಾರಣವಾಗಿದೆ. ಜತೆಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಮಂತ್ರಣದಲ್ಲಿ ಕಿತ್ತೂರು ಚೆನ್ನಮ್ಮಳ ಬಲಗೈ ಬಂಟ ವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರವನ್ನು ಹಾಕಿಲ್ಲ. ಇದೂ ಸಹ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಕಿತ್ತೂರು ಚನ್ನಮ್ಮಳ ಭಾವಚಿತ್ರದ ಜತೆ ವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರವನ್ನು ಹಾಕಬೇಕು ಎನ್ನುವುದು ಜನರ ಒತ್ತಾಯವಾಗಿದೆ.
ಒಟ್ಟಾರೆ, ಬೆಳಗಾವಿ ಜಿಲ್ಲೆಯ ಅದರಲ್ಲೂ ಉತ್ತರ ಕರ್ನಾಟಕದ ಅತ್ಯಂತ ಹಾಗೂ ಮಹತ್ವದ ಕಿತ್ತೂರು ಉತ್ಸವದ ಬಗ್ಗೆ ಸದ್ಯ ಆರಂಭವಾಗಿರುವ ಈ ವಿವಾದಗಳಿಗೆ ಆರಂಭದಲ್ಲೇ ಜಿಲ್ಲಾಡಳಿತ ಕೊನೆ ಹಾಡಬೇಕಿದೆ. ಈ ಮೂಲಕ ಕಿತ್ತೂರು ಉತ್ಸವವನ್ನು ಯಾವುದೇ ವಿವಾದ ಇಲ್ಲದಂತೆ ನೆರವೇರಿಸಲು ಆಡಳಿತ ಕ್ರಮ ಕೈಗೊಂಡು ಪ್ರತಿಯೊಬ್ಬರಿಗೂ ಸರ್ವ ಸಮ್ಮತ ರೀತಿಯಲ್ಲಿ ಒಪ್ಪಿಗೆಯಾಗುವಂತೆ ನಡೆಸಿ ಉತ್ಸವದ ಯಶಸ್ಸಿಗೆ ಕಾರಣವಾಗಬೇಕಿದೆ.