ಬೆಳಗಾವಿ :
ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ವಿಧಾನಪರಿಷತ್ನಲ್ಲಿ ಎರಡು ದಿನಗಳ ಕಾಲ ಮಹದಾಯಿ,ಕೃಷ್ಣಾ,ಬರಗಾಲದ ಸಮಸ್ಯೆ ಸೇರಿದಂತೆ ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಭಾನುವಾರ ಮಧ್ಯಾಹ್ನ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಯಾವುದೇ ಭಾಗದ ಶಾಸಕರು ಉತ್ತರ ಕರ್ನಾಟಕದ ವಿಷಯಗಳ ಕುರಿತು ಚರ್ಚೆಗೆ ಆಸಕ್ತಿ ತೋರಿದರೇ ಮೊದಲ ಆದ್ಯತೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ ಸಭಾಪತಿ ಹೊರಟ್ಟಿ ಅವರು ಈ ಬಾರಿ ಪ್ರತಿಭಟನೆಗಳ ಸಂಖ್ಯೆ ಕಡಿಮೆಗೊಳಿಸಲು ಸಂಬಂಧಿಸಿದ ಸಚಿವರು ಸಂಘ-ಸಂಸ್ಥೆಗಳು ಮತ್ತು ಹೋರಾಟಗಾರರೊಂದಿಗೆ ಚರ್ಚಿಸಿದ್ದಾರೆ.ಬೆಳಗಾವಿ ಅಧಿವೇಶನವೆಂದರೇ ಪ್ರತಿಭಟನೆಗಳ ಅಧಿವೇಶನವೆಂಬ ಹಣೆಪಟ್ಟಿ ಅಳಿಸಿಹಾಕಲು ಕ್ರಮವಹಿಸಬೇಕೆಂದು ಸೂಚಿಸಿ ತಾವು ಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ಪತ್ರ ಬರೆದಿದನ್ನು ಉಲ್ಲೇಖಿಸಿದ ಅವರು ಈ ಹಿನ್ನೆಲೆಯಲ್ಲಿ ಈ ಬಾರಿ ಪ್ರತಿಭಟನೆಗಳು ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇದೆ ಎಂದರು.
ವಿಧಾನಪರಿಷತ್ ಕಲಾಪಗಳಿಗೆ ಈವರೆಗೆ 1207 ಪ್ರಶ್ನೆಗಳು ಸ್ವೀಕೃತವಾಗಿವೆ;ಅವುಗಳಲ್ಲಿ 1057 ಚುಕ್ಕೆ ರಹಿತ ಪ್ರಶ್ನೆಗಳಾಗಿವೆ.ನಿಯಮ 72ರ ಅಡಿ 111 ಪತ್ರಗಳು ಸ್ವೀಕೃತವಾಗಿವೆ. ಕಲಾಪಸೂಚಿಗೆ ಸಾಕಷ್ಟು ವಿಷಯಗಳಿವೆ ಎಂದರು.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್,ವಿಧಾನಸಭಾ ಕಾರ್ಯದರ್ಶಿ ವಿಶಾಲಾಕ್ಷಿ,ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮತ್ತಿತರರು ಇದ್ದರು.