ದೆಹಲಿ:
ದೇಶದಲ್ಲಿ ಮುಂಗಾರು ಮಳೆಯ 4 ತಿಂಗಳ ಅವಧಿ ಪೂರ್ಣಗೊಂಡಿದ್ದು, ದೀರ್ಘಕಾಲೀನ ಸರಾಸರಿಯಲ್ಲಿ ಭಾರತದಲ್ಲಿ ಸಾಮಾನ್ಯ ಪ್ರಮಾಣದ ಮಳೆಯಾಗಿದೆ. ಹಿಂಗಾರು ಸಾಮಾನ್ಯವಾಗಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕರ್ನಾಟಕ ಸೇರಿ ದೇಶದ ದಕ್ಷಿಣ ಭಾಗದಲ್ಲಿ ಹಿಂಗಾರು ಮಳೆ ಸಾಮಾನ್ಯವಾಗಿಯೇ ಬೀಳಲಿದೆ. ಶೇ.88ರಿಂದ ಶೇ.112ರಷ್ಟು ಮಳೆ- ಅಂದರೆ 334 ಮಿ.ಮೀ. ಸರಾಸರಿ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಿದೆ. ಇದೇ ವೇಳೆ, ಶೇ.18ರಷ್ಟು ಪ್ರದೇಶದಲ್ಲಿ ಮುಂಗಾರು ಕೊರತೆ ಆಗಿದೆ ಎಂದು ಅದು ಮಾಹಿತಿ ನೀಡಿದೆ.
ಪೆಸಿಫಿಕ್ ಸಾಗರದಲ್ಲಿ ಉಂಟಾಗಿದ್ದ ಎಲ್ನಿನೋದ ಪರಿಣಾಮವಾಗಿ ಈ ಬಾರಿ ಮುಂಗಾರು ಆಗಮನ ವಿಳಂಬಗೊಂಡಿತ್ತು, ಆದರೂ ಇದರ ಪ್ರಭಾವ ಮೀರಿ ಸಾಮಾನ್ಯ ಪ್ರಮಾಣದಲ್ಲಿ ಮಳೆಯಾಗಿದೆ. ಆದರೆ ಇದರ ಅರ್ಥ ದೇಶಾದ್ಯಂತ ಎಲ್ಲಾ ಪ್ರದೇಶಗಳಲ್ಲೂ ಸರಿಯಾದ ಪ್ರಮಾಣದಲ್ಲಿ ಮಳೆಯಾಗಿದೆ ಎಂಬುದಲ್ಲ ಎಂದು ಐಎಂಡಿ ಸ್ಪಷ್ಟಪಡಿಸಿದೆ. ದೀರ್ಘಕಾಲೀನವಾಗಿ ಶೇ.94ರಿಂದ 106ರಷ್ಟು ಮಳೆಯಾದರೆ ಅದನ್ನು ಸಾಮಾನ್ಯ ಮಳೆ ಎಂದು ಪರಿಗಣಿಸಲಾಗುತ್ತದೆ.
ಭಾರತದಲ್ಲಿ ಮಾನ್ಸೂನ್ ಹಲವು ನೈಸರ್ಗಿಕ ವ್ಯತ್ಯಾಸಗಳನ್ನು ಹೊಂದಿರುತ್ತದೆ. ಹವಾಮಾನ ಬದಲಾವಣೆಯೂ ಸಹ ಭಾರತೀಯ ಮುಂಗಾರಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಆದರೂ ಈ ವರ್ಷ ಶೇ.94.4ರಷ್ಟು ಮಳೆಯಾಗಿದೆ. ದೇಶದ ಶೇ.73ರಷ್ಟು ಪ್ರದೇಶದಲ್ಲಿ ಸಾಮಾನ್ಯ ಮಳೆಯಾಗಿದ್ದು, ಶೇ.18ರಷ್ಟು ಪ್ರದೇಶ ಮಳೆ ಕೊರತೆ ಎದುರಿಸಿದೆ ಎಂದು ಐಎಂಡಿ ನಿರ್ದೇಶಕ ಮೃತ್ಯುಂಜಯ ಮೋಹಪಾತ್ರ ಅವರು ಹೇಳಿದ್ದಾರೆ.
ಈಶಾನ್ಯ ಮತ್ತು ಪೂರ್ವ ಭಾರತದಲ್ಲಿ 111.5 ಸೆಂ.ಮೀ. ಮಳೆಯಾಗಿದೆ. ಸಾಮಾನ್ಯವಾಗಿ ಇಲ್ಲಿ 113.6 ಸೆಂ.ಮೀ. ಮಳೆಯಾಗುತ್ತಿತ್ತು. ಅಲ್ಲದೇ ವಾಯುವ್ಯ ಭಾರತದಲ್ಲಿ ಸಾಮಾನ್ಯ 58 ಸೆಂ.ಮೀ. ಮಳೆಯ ಬದಲಿಗೆ 59 ಸೆಂ.ಮೀ. ಮಳೆಯಾಗಿದೆ. ಕೇಂದ್ರ ಭಾರತದಲ್ಲೂ ಸಹ ಸಾಮಾನ್ಯ 97 ಸೆಂ.ಮೀ. ಬದಲಿಗೆ 98 ಸೆಂ.ಮೀ ಮಳೆಯಾಗಿದೆ. ದಕ್ಷಿಣ ಪ್ರಸ್ಥಭೂಮಿಯಲ್ಲಿ ಶೇ.8ರಷ್ಟು ಮುಂಗಾರು ಕೊರತೆ ಉಂಟಾಗಿದೆ ಎಂದು ಐಎಂಡಿ ಹೇಳಿದೆ.