ಬೆಳಗಾವಿ :
ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರಕ್ಕೆ ಇದೀಗ ಅಚ್ಚರಿ ಹೆಸರು ಕೇಳಿ ಬಂದಿದೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ)ದ ಮಾಜಿ ಅಧ್ಯಕ್ಷ ಗೂಳಪ್ಪ ಹೊಸಮನಿ ಅವರು ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆ ಜೋರಾಗಿ ಕೇಳಿ ಬಂದಿದೆ.
ಯಡಿಯೂರಪ್ಪ ಅವರ ಕೆಜೆಪಿಯಿಂದ ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದಿಂದ ಈ ಹಿಂದೆ ಸ್ಪರ್ಧೆ ನಡೆಸಿದ್ದ ಅವರು ಬೆಳಗಾವಿಯಲ್ಲಿ ಚಿರಪರಿಚಿತರಾಗಿದ್ದಾರೆ. ಹೀಗಾಗಿ ಇದೀಗ ಕೆಲವೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರೆ ಎಂಬ ಚರ್ಚೆ ಜೋರಾಗಿ ಶುರುವಾಗಿದೆ.
ಘೂಳಪ್ಪ ಹೊಸಮನಿ ಅವರು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಅಧ್ಯಕ್ಷರಾಗಿ ಕೈಗೊಂಡಿದ್ದ ಕೆಲಸ ಕಾರ್ಯಗಳಿಂದ ಬೆಳಗಾವಿಯ ಜನಮಾನಸದಲ್ಲಿ ನೆಲೆಯಾದವರು. ಹೀಗಾಗಿ ಅವರೇನು ಬೆಳಗಾವಿಗೆ ಹೊಸಬರಲ್ಲ. ಲಿಂಗಾಯತ ಸಮಾಜದ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿರುವ ಘೂಳಪ್ಪ ಹೊಸಮನಿ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ಕೃಪಾಶೀರ್ವಾದವಿದೆ. ಯಡಿಯೂರಪ್ಪ ಅವರ ಅತ್ಯಂತ ನಿಕಟವರ್ತಿ ಎಂದೇ ಘೂಳಪ್ಪ ಹೊಸಮನಿ ಮೊದಲಿನಿಂದಲೂ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಈ ಬಾರಿ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದಿಂದ ಲಿಂಗಾಯತ ಮತಗಳ ಆಧಾರದ ಮೇಲೆ ಬಿಜೆಪಿ ಟಿಕೆಟ್ ನೀಡಿದರು ಅಚ್ಚರಿ ಪಡಬೇಕಾಗಿಲ್ಲ.
ಒಟ್ಟಾರೆ ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಹೊಸಬರಿಗೆ ಟಿಕೆಟ್ ನೀಡುವ ನೀಡಿ ಗೆಲ್ಲಿಸುವ ಸವಾಲು ಹೊಂದಿರುವ ಬಿಜೆಪಿ ಗೂಳಪ್ಪ ಹೊಸಮನಿ ಅವರಂತಹ ಹಿರಿಯ ನಾಯಕರಿಗೆ ಮಣೆ ಹಾಕಿ ಲಿಂಗಾಯಿತ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಭಾರೀ ಲೆಕ್ಕಾಚಾರದಲ್ಲಿದೆ.