ಅರ್ಕಾನ್ಸಾಸ್ (ಅಮೆರಿಕ): ಕ್ರಿಸ್ಮಸ್ ಮುನ್ನಾದಿನದಂದು ನಡೆದ ಪವರ್ಬಾಲ್ ಲಾಟರಿ ಡ್ರಾದಲ್ಲಿ ಅರ್ಕಾನ್ಸಾಸ್ ರಾಜ್ಯದ ವ್ಯಕ್ತಿಯೊಬ್ಬರು ಬರೋಬ್ಬರಿ $1.817 ಶತಕೋಟಿ (ಸುಮಾರು 16,322 ಕೋಟಿ ರೂಪಾಯಿ) ಮೊತ್ತದ ಬೃಹತ್ ಜಾಕ್ಪಾಟ್ ಗೆದ್ದಿದ್ದಾರೆ. ಕಳೆದ ಮೂರು ತಿಂಗಳಿನಿಂದ ಯಾವುದೇ ವಿಜೇತರಿಲ್ಲದೆ ಬಾಕಿ ಉಳಿದಿದ್ದ ಈ ಲಾಟರಿ ಮೊತ್ತವು ಇದೀಗ ಒಬ್ಬ ವ್ಯಕ್ತಿಯ ಪಾಲಾಗಿದೆ.
ಬುಧವಾರ ರಾತ್ರಿ ನಡೆದ ಡ್ರಾದಲ್ಲಿ 04, 25, 31, 52, 59 ಸಂಖ್ಯೆಗಳು ಮತ್ತು ಪವರ್ಬಾಲ್ ಸಂಖ್ಯೆ 19 ಬಂದಿವೆ. ಲಿಟಲ್ ರಾಕ್ನ ಈಶಾನ್ಯಕ್ಕೆ 42 ಕಿಮೀ ದೂರದಲ್ಲಿರುವ ಕ್ಯಾಬೋಟ್ ಎಂಬ ಪಟ್ಟಣದಲ್ಲಿ ಈ ವಿಜೇತ ಟಿಕೆಟ್ ಮಾರಾಟವಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಇದು ಅಮೆರಿಕದ ಇತಿಹಾಸದಲ್ಲಿ ಎರಡನೇ ಅತಿದೊಡ್ಡ ಲಾಟರಿ ಮೊತ್ತವಾಗಿದೆ ಮತ್ತು 2025ನೇ ಸಾಲಿನ ಅತಿದೊಡ್ಡ ಪವರ್ಬಾಲ್ ಬಹುಮಾನವಾಗಿದೆ. ವಿಜೇತರು ಒಂದೇ ಬಾರಿ ಹಣ ಪಡೆಯಲು ಇಚ್ಛಿಸಿದರೆ ಅವರಿಗೆ $834.9 ಮಿಲಿಯನ್ (ಸುಮಾರು 7,000 ಕೋಟಿ ರೂಪಾಯಿ) ನಗದು ಪಾವತಿಯ ಆಯ್ಕೆ ನೀಡಲಾಗಿದೆ.
2010ರ ನಂತರ ಅರ್ಕಾನ್ಸಾಸ್ ರಾಜ್ಯದಲ್ಲಿ ಜಾಕ್ಪಾಟ್ ಗೆದ್ದಿರುವುದು ಇದು ಎರಡನೇ ಬಾರಿಯಾಗಿದೆ. “ಹೊಸ ಜಾಕ್ಪಾಟ್ ವಿಜೇತರಿಗೆ ಅಭಿನಂದನೆಗಳು! ಇದು ನಿಜಕ್ಕೂ ಜೀವನವನ್ನೇ ಬದಲಿಸಬಲ್ಲ ಅಸಾಮಾನ್ಯ ಬಹುಮಾನ” ಎಂದು ಪವರ್ಬಾಲ್ನ ಉತ್ಪನ್ನ ಸಮೂಹ ಅಧ್ಯಕ್ಷ ಮ್ಯಾಟ್ ಸ್ಟ್ರಾನ್ ತಿಳಿಸಿದ್ದಾರೆ. ಸತತ 46 ಡ್ರಾಗಳಲ್ಲಿ ಯಾರೂ ಆರೂ ಸಂಖ್ಯೆಗಳನ್ನು ಸರಿಯಾಗಿ ಗುರುತಿಸದ ಕಾರಣ ಈ ಮೊತ್ತ ಇಷ್ಟೊಂದು ಬೃಹತ್ತಾಗಿ ಬೆಳೆದಿತ್ತು.
ಇದಕ್ಕೂ ಮೊದಲು 2011ರಲ್ಲಿ ಕ್ರಿಸ್ಮಸ್ ಮುನ್ನಾದಿನದಂದು ಜಾಕ್ಪಾಟ್ ಗೆಲ್ಲಲಾಗಿತ್ತು. ಅಮೆರಿಕದ 45 ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ಈ ಲಾಟರಿಯಲ್ಲಿ ಗೆಲ್ಲುವ ಸಂಭವನೀಯತೆಯು 29.2 ಕೋಟಿಯಲ್ಲಿ ಒಬ್ಬರಿಗೆ ಮಾತ್ರ ಇರುತ್ತದೆ. ಆದರೂ ಕೋಟ್ಯಂತರ ಜನರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಾರೆ.


