ಬೆಂಗಳೂರು :
ಮಾಜಿ ಪ್ರಧಾನಿ
ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜೀವ ಗಾಂಧಿಯವರ ಕುರಿತು ಹೊಸ ವಿಷಯವನ್ನು ಬಹಿರಂಗ ಪಡಿಸಿದರು.
ರಾಜೀವ್ ಗಾಂಧಿ ಮತ್ತು ಗಾಂಧಿ ಕುಟುಂಬದ ಜತೆಗೆ ನನಗೆ ಇರುವ ಸಂಬಂಧ, ಭಕ್ತ ಹಾಗೂ ಭಗವಂತನ ನಡುವಣ ಸಂಬಂಧ.
ಕಳೆದ 20 ವರ್ಷಗಳಿಂದ ಪ್ರತಿ ವರ್ಷ ನಾನು ಪೆರಂಬೂರಿಗೆ ಹೋಗುತ್ತಿದ್ದೆ. ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ರಾಜೀವ್ ಗಾಂಧಿ ಅವರ ಸ್ಮಾರಕದ ಕುರಿತು ನನಗೆ ತಿಳಿಸಿದಾಗ, ಕನಕಪುರದಲ್ಲಿ ಸುರೇಶ್ ಅವರ ಹೆಸರಿನಲ್ಲಿರುವ ಕ್ವಾರಿಯಿಂದ ಕಲ್ಲನ್ನು ತೆಗೆದುಕೊಂಡು ರಾಜೀವ್ ಗಾಂಧಿ ಅವರ ಪಾರ್ಥೀವ ಶರೀರವಿದ್ದ ಜಾಗದಲ್ಲಿ ಸ್ಮಾರಕವಾಗಿ ಇಡಲಾಗಿದೆ. ಇದು ನಮಗೂ ಅವರಿಗೂ ಇದ್ದ ಬಾಂಧವ್ಯ. ಇದು ಕೇವಲ ಗಾಂಧಿ ಕುಟುಂಬಕ್ಕೆ ಹಾಗೂ ಕೆಲವರಿಗೆ ಮಾತ್ರ ಗೊತ್ತಿತ್ತು. ಇದುವರೆಗೂ ಯಾರಿಗೂ ಬಹಿರಂಗಪಡಿಸಿರಲಿಲ್ಲ.
ನಾನು, ಹರಿಪ್ರಸಾದ್, ಸಲೀಂ ಅಹ್ಮದ್, ನಜೀರ್ ಅವರೆಲ್ಲರೂ ರಾಜೀವ್ ಗಾಂಧಿ ಅವರ ಕಾಲದವರು. ನಮ್ಮ ನಾಯಕರು ನಮ್ಮನ್ನು ಗುರುತಿಸಿ ನಮಗೆ ಶಕ್ತಿ ತುಂಬಿದ್ದು ರಾಜೀವ್ ಗಾಂಧಿ ಅವರು. ಇಂದು ಅವರನ್ನು ಸ್ಮರಿಸುತ್ತಾ ಅವರಿಗೆ ಧನ್ಯವಾದ ಅರ್ಪಿಸುವ ಅವಕಾಶ ಸಿಕ್ಕಿರುವುದೇ ನನ್ನ ಭಾಗ್ಯ ಎಂದು ಭಾವಿಸಿದ್ದೇನೆ.
ರಾಮನಗರ, ಚನ್ನಪಟ್ಟಣದಲ್ಲಿ ಗಲಾಟೆ ನಡೆದ ಸಂದರ್ಭದಲ್ಲಿ ಅಲ್ಲಿ ಶಾಂತಿ ಸಭೆ ಮಾಡಿದಾಗ ರಾಜೀವ್ ಗಾಂಧಿ ಅವರು ಅಲ್ಲಿ ಶಾಂತಿ ಸಭೆ ಮಾಡಿದರು. ನಂತರ ನನ್ನ ಜತೆ ಮಾತನಾಡಿ ಇಲ್ಲಿ ಏನಾಗುತ್ತಿದೆ ಎಂದು ಕೇಳಿದರು. ಈ ಸಂದರ್ಭದಲ್ಲಿ ವೀರೇಂದ್ರ ಪಾಟೀಲ್ ಅವರ ಆರೋಗ್ಯದ ಬಗ್ಗೆ ನಾನು ರಾಜೀವ್ ಗಾಂಧಿ ಅವರಿಗೆ ತಿಳಿಸಿದೆ. ಆ ಸಂದರ್ಭದಲ್ಲಿ ವೀರೇಂದ್ರ ಪಾಟೀಲ್ ಅವರಿಗೆ ಪಾರ್ಶ್ವವಾಯುವಾಗಿ ಆರೋಗ್ಯ ಪರಿಸ್ಥಿತಿ ಹದಗೆಟ್ಟಿತ್ತು. ಮರುದಿನ ಕುಮಾರಕೃಪ ಅತಿಥಿ ಗೃಹದಲ್ಲಿ ಮುಂದೆ ಯಾರಿಗೆ ನಾಯಕತ್ವ ನೀಡಬೇಕು ಎಂದು ಚರ್ಚೆ ನಡೆದಾಗ, ನಾವು ಕೆಲವರು ಬಂಗಾರಪ್ಪನವರ ಹೆಸರನ್ನು ಪ್ರಸ್ತಾಪಿಸಿದೆವು. ನಂತರ ಬಂಗಾರಪ್ಪನವರ ಮನೆಗೆ ಹೋಗಿ ವಿಚಾರ ತಿಳಿಸಿದಾಗ ಬಂಗಾರಪ್ಪನವರು ನಮಗೆ ಬೈದರು. ಆಗ ನಾನು ನಾವು ವೀರೇಂದ್ರ ಪಾಟೀಲ್ ಅವರ ಆರೋಗ್ಯ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಈ ಸಲಹೆ ನೀಡಿದೆವು ಎಂದು ಹೇಳಿದೆ.
ವೀರೇಂದ್ರ ಪಾಟೀಲ್ ಅವರ ಆರೋಗ್ಯ ಪರಿಸ್ಥಿತಿ ನೋಡಿದ ಬಳಿಕ ರಾಜೀವ್ ಗಾಂಧಿ ಅವರು ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳಿಗೆ ಸದ್ಯದಲ್ಲೇ ನೂತನ ಮುಖ್ಯಮಂತ್ರಿ ನೇಮಿಸಲಾಗುವುದು ಎಂದು ಹೇಳಿ ಹೊರಟರು. ರಾಜೀವ್ ಗಾಂಧಿ ಅವರು ಯಾರಿಗೂ ತೊಂದರೆ ಕೊಡುವ ವ್ಯಕ್ತಿಯಲ್ಲ. ಕೆಲವರು ವೀರೇಂದ್ರ ಪಾಟೀಲರಿಗೆ ಅಪಮಾನ ಮಾಡಲಾಯಿತು ಎಂದು ಆರೋಪ ಮಾಡುತ್ತಾರೆ. ಆದರೆ ರಾಜೀವ್ ಗಾಂಧಿ ಅವರು ಅವರ ಆರೋಗ್ಯ ಪರಿಸ್ಥಿತಿ ನೋಡಿದ ಬಳಿಕ ರಾಜ್ಯದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಬದಲಾವಣೆ ಮಾಡಿದರು. ನಾವು ವೀರೇಂದ್ರ ಪಾಟೀಲ್ ಅವರನ್ನು ಅಧ್ಯಕ್ಷರಾನ್ನಾಗಿ ನೇಮಿಸಿದೆವು, ಅವರ ನಾಯಕತ್ವದಲ್ಲಿ 179 ಕ್ಷೇತ್ರಗಳಲ್ಲಿ ಗೆದ್ದೆವು. ನಂತರ ಅವರನ್ನೇ ಮುಖ್ಯಮಂತ್ರಿ ಮಾಡಿದೆವು. ಆದರೆ ಅವರ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟ ಹಿನ್ನೆಲೆಯಲ್ಲಿ ತೀರ್ಮಾನ ಮಾಡಲಾಯಿತು.
ನಂತರ ರಾಜೀವ್ ಗಾಂಧಿ ಅವರು ಹೈದರಾಬಾದಿನಲ್ಲಿ ಬಂಗಾರಪ್ಪನವರಿಗೆ ಒಂದು ಸೂಚನೆ ನೀಡಿದರು. ಏನಾದರೂ ಆಗಲಿ, ಎಲ್ಲಾ ಸಮುದಾಯಗಳಿಂದಲೂ ಒಬ್ಬೊಬ್ಬ ನಾಯಕರನ್ನು ಆರಿಸಬೇಕು ಎಂದು ಹೇಳಿದರು. ಈ ಕಾರಣದಿಂದಲೇ, ನಜೀರ್, ನಾಡಗೌಡ, ಡಿ.ಕೆ. ಶಿವಕುಮಾರ್, ಅಮರೇಶ್ ನಾಯಕ್, ರಮೇಶ್ ಅವರಿಗೆ ಅವಕಾಶ ನೀಡಿದರು. ಇದು ರಾಜೀವ್ ಗಾಂಧಿ ಅವರ ದೂರದೃಷ್ಟಿಯಾಗಿತ್ತು.
ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತಂದಾಗ ನಾನು ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದೆ. ಈ ಕುರಿತು ಚರ್ಚೆ ಬಂದಾಗ, ನಮ್ಮಲ್ಲಿ ಈ ವ್ಯವಸ್ಥೆ ಇದೆ. ಮತ್ತೆ ಈತಿದ್ದುಪಡಿ ಯಾಕೆ ಎಂದು ಕೇಳಿದೆ. ಅಷ್ಟು ದಿನ ವಿದ್ಯಾರ್ಥಿಗಳಿಂದ ನಾಯಕರನ್ನು ಆಯ್ಕೆ ಮಾಡಲಾಗುತ್ತಿತ್ತು. ಆದರೆ ಈಗ ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ನಾಯಕರ ಆಯ್ಕೆ ಆಗಬೇಕಿದೆ. ನಾಯಕರನ್ನು ತಯಾರು ಮಾಡುವವನೇ ನಿಜವಾದ ನಾಯಕ ಎಂದು ಹೇಳಿದ್ದರು. ಈ ಮೂಲಕ ಎಲ್ಲಾ ವರ್ಗದ ಜನರಿಗೆ ನಾಯಕತ್ವವನ್ನು ನೀಡಬೇಕು ಎಂದು ವಿವರಿಸಿದ್ದರು. ಅವರ ಈ ಮಾರ್ಗದರ್ಶನವನ್ನು ನನ್ನ ರಾಜಕೀಯ ಜೀವನದ ಪ್ರತಿ ಹಂತದಲ್ಲೂ ಪಾಲಿಸಿಕೊಂಡು ಬರುತ್ತಿದ್ದೇನೆ.
ಇನ್ನು ಮತದಾನದ ವಯಸ್ಸನ್ನು 21ರಿಂದ 18 ವಯಸ್ಸಿಗೆ ಇಳಿಸುವ ತೀರ್ಮಾನ ಮಾಡಿದಾಗ ಸಂಸತ್ತಿನಲ್ಲಿ ಕೇವಲ 2 ಬಿಜೆಪಿಗರು ಮಾತ್ರ ಇದ್ದರು. ಆಗ ಆಡುವ ಮಕ್ಕಳಿಗೆ ಮತದಾನದ ಹಕ್ಕು ನೀಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರಿಸಿದ ರಾಜೀವ್ ಗಾಂಧಿ ಅವರು ನಾವು 10ನೇ ತರಗತಿ ಓದಿರುವ 16 ವಯಸ್ಸಿನ ಯುವಕರ ಕೈಗೆ ಬಂದೂಕು ನೀಡಿ ದೇಶದ ಗಡಿ ಕಾಯಲು ಕಳುಹಿಸುತ್ತೇವೆ. ಅವರು ಸಮರ್ಥವಾಗಿ ದೇಶದ ಗಡಿ ಕಾಯುತ್ತಿದ್ದಾರೆ. ಅಂತಹ ಯುವಕರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಜನಪ್ರತಿನಿಧಿ ಆಯ್ಕೆ ಮಾಡುವ ಜವಾಬ್ದಾರಿ ನೀಡುವುದರಲ್ಲಿ ತಪ್ಪಿಲ್ಲ. ನಮ್ಮ ಯುವಕರ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳಿದ್ದರು. ಅಂತಹ ದೊಡ್ಡ ನಾಯಕ ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿಗಾಗಿ ತಮ್ಮ ಜೀವ ಬಲಿದಾನ ಮಾಡಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದ ಸದಸ್ಯರು ದೇಶಕ್ಕೆ ಮಾಡಿರುವ ತ್ಯಾಗ ಜಾಗತಿಕ ಇತಿಹಾಸದಲ್ಲಿ ಯಾರೂ ಮಾಡಲು ಸಾಧ್ಯವಿಲ್ಲ. ಇದೇ ಕಾಂಗ್ರೆಸ್ ಪಕ್ಷದ ಶಕ್ತಿ. ಅವರು ಕಾರ್ಯಕರ್ತರಿಗೆ ತೋರುವ ಪ್ರೀತಿ, ವಿಶ್ವಾಸಕ್ಕೆ ನಾವೆಲ್ಲರೂ ಬೆರಗಾಗಿದ್ದೇವೆ.
ಹೀಗೆ ರಾಜೀವ್ ಗಾಂಧಿ ಅವರ ದೂರದೃಷ್ಟಿಯನ್ನು ನಾವು ಮರೆಯಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ನಾನು ರಾಜೀವ್ ಗಾಂಧಿ ಯುವಶಕ್ತಿ ಸಂಘ ಆರಂಭಿಸಿದ್ದೆ. ಆದರೆ ಆರ್ಥಿಕ ಕೊರತೆಯಿಂದ ಮುಂದೆ ಸಾಗಲಿಲ್ಲ. ಆ ನೋವು ಈಗಲೂ ನನ್ನಲ್ಲಿದೆ. ನಾನು ಅದನ್ನು ಗಮನದಲ್ಲಿಟ್ಟುಕೊಂಡೆ ನಾವು ಪ್ರತಿ ಪಂಚಾಯ್ತಿ ಕೇಂದ್ರಗಳಲ್ಲಿ ಭಾರತ ಜೋಡೋ ಕೇಂದ್ರಗಳನ್ನು ಆರಂಭಿಸುತ್ತೇವೆ. ಅದೇ ಮಾದರಿಯಲ್ಲಿ ಯುವಕರಿಗೆ ತರಬೇತಿ ನೀಡಲಾಗುವುದು. ಎಲ್ಲಾ ಜಾತಿ ಹಾಗೂ ಧರ್ಮದವರನ್ನು ಒಳಗೊಂಡಂತೆ ಕ್ರೀಡೆ, ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳಲು ಅವಕಾಶ ನೀಡಲಾಗುವುದು. 18 ರಿಂದ 35 ವಯೋಮಾನದ ಯುವಕರು ಈ ಸಮಿತಿಯ ಸದಸ್ಯರಾಗಿರುತ್ತಾರೆ. ಇದು ಭಾರತ ಜೋಡೋಗೆ ನನ್ನ ಕೊಡುಗೆ. ಇದೇ ಕಾರಣಕ್ಕೆ ಈ ಸಭಾಂಗಣಕ್ಕೆ ಭಾರತ ಜೋಡೋ ಸಭಾಂಗಣ ಎಂದು ನಾಮಕರಣ ಮಾಡಲಾಗಿದೆ.
ನನಗೆ, ಸಿದ್ದರಾಮಯ್ಯ ಅವರಿಗೆ ಅಧಿಕಾರ ಸಿಗುವುದು ಮುಖ್ಯವಲ್ಲ. ನಮ್ಮ ಮೇಲೆ ರಾಜ್ಯದ ಜನ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಂಡು ಹೋಗುವುದು ಮುಖ್ಯ. ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ನೀರ್ಮಾಣ ಮಾಡುವುದು ನಮ್ಮ ಗುರಿ. ನಾವು ಬಿಜೆಪಿ ಹಾಗೂ ಜೆಡಿಎಸ್ ಅವರ ವಿಚಾರಕ್ಕೆ ಹೋಗಿ ಸಮಯ ವ್ಯರ್ಥ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಅವರು ಟೀಕೆ ಮಾಡಿದರೆ ಮಾಡುತ್ತಲಿರಲಿ, ನಾವು ನಮ್ಮ ಕೆಲಸ ಮಾಡೋಣ. ಜನರ ನಂಬಿಕೆ ಉಳಿಸಿಕೊಂಡು ಭ್ರಷ್ಟಾಚಾರ ನಿರ್ಮೂಲನೆ ಮಾಡಿ, ರಾಜ್ಯದ ಅಬಿವೃದ್ಧಿ ಮಾಡೋಣ. ನಮಗೆ ದ್ವೇಷ ಅಸೂಯೆ ಬೇಡ. ನಾವು ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ ಎಂಬ ಸಂಕಲ್ಪ ಮಾಡಿದ್ದೆವು. ಅದನ್ನು ಸಾಕಾರ ಮಾಡೋಣ.
ನೀವು ನಾಯಕರ ಸುತ್ತ ಒಡಾಡಿಕೊಂಡಿರುವುದರಿಂದ ಪ್ರಯೋಜನವಿಲ್ಲ, ನಮ್ಮ ಮುಂದೆ ಲೋಕಸಭೆ, ಪಾಲಿಕೆ ಚುನಾವಣೆಯ ಮಹತ್ವ ಜವಾಬ್ದಾರಿ ಇದೆ. ಇಂದು ನಮಗೆ 135 ಕ್ಷೇತ್ರಗಳಲ್ಲಿ ಪಕ್ಷ ಗೆದ್ದಿರಬಹುದು ಆದರೂ ನನಗೆ ತೃಪ್ತಿ ಇಲ್ಲ. ಕಾರ್ಯಕರ್ತರು ಶಕ್ತಿಶಾಲಿ ಆಗಬೇಕು. ಬೂತ್ ಮಟ್ಟದ ಕಾರ್ಯಕರ್ತರ ಧ್ವನಿ ಗಟ್ಟಿಯಾಗಿದ್ದರೆ ಮಾತ್ರ ನೀವು ನಾಯಕರಾಗುತ್ತೀರ. ಇಲ್ಲಿ ಸಿದ್ದರಾಮಯ್ಯ ಅವರ ಮನೆ, ಡಿ.ಕೆ. ಶಿವಕುಮಾರ್ ಅವರ ಮನೆ ಸುತ್ತಿದರೆ ಪ್ರಯೋಜನವಿಲ್ಲ. ಸಿದ್ದರಾಮಯ್ಯ, ಎಂ.ಬಿ ಪಾಟೀಲ್ ಅಥವಾ ಬೇರೆ ನಾಯಕರು ಈರೀತಿ ಹೇಳುತ್ತಿದ್ದರು ಎಂದು ಚಾಡಿ ಹೇಳುವುದು ಬೇಡ. ನಮ್ಮ ನಡುವೆ ಯಾವ ಮಧ್ಯವರ್ತಿಯೂ ಬೇಡ. ನನಗೂ ಸುದೀರ್ಘ ಅನುಭವವಿದೆ. ನನಗೆ ಮುಂದಿನ ಐದು ವರ್ಷಗಳ ಸರ್ಕಾರ ನೆಮ್ಮದಿಯಿಂದ ಕೆಲಸ ಮಾಡುವಂತಾಗಬೇಕು. ಖರ್ಗೆ ಅವರು, ಗಾಂಧಿ ಕುಟುಂಬದವರು ನಮಗೆ ನೀಡಿರುವ ಸಲಹೆಯೇ ನಮಗೆ ವೇದವಾಕ್ಯ. ದೇಶವೇ ರಾಜ್ಯವನ್ನು ನೋಡುತ್ತಿದೆ. ಈ ಫಲಿತಾಂಶ ಇಡೀ ದೇಶಕ್ಕೆ ರವಾನೆಯಾಗಿರುವ ಸಂದೇಶ. ಈ ಗೆಲುವನ್ನು ಜಮ್ಮು ಕಾಶ್ಮೀರ, ಲಡಾಕ್, ಆಂಧ್ರ, ತೆಲಂಗಾಣದಲ್ಲಿ ಸಂಭ್ರಮಿಸುತ್ತಿದ್ದಾರೆ. ಇದನ್ನು ನಾವು ಉಳಿಸಿಕೊಳ್ಳಬೇಕು. ನೀವೆಲ್ಲರೂ ಮನೆ ಮನೆಗೆ ಹೋಗಿ ಲೋಕಸಭೆ ಚುನಾವಣೆಗೆ ಕೆಲಸ ಮಾಡಿ. ನೀವು ಹುಲ್ಲುಕಡ್ಡಿಯಂತಿದ್ದರೂ ನಿಮಗೆ ಅಧಿಕಾರ ಸಿಗಬೇಕಾದಾಗ ಸಿಕ್ಕೇ ಸಿಗುತ್ತದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.
ನಾನು ಹಾಗೂ ಸಿದ್ದರಾಮಯ್ಯ ಅವರು ನಾಡ ದೇವತೆ ಚಾಮುಂಡೇಶ್ವರಿ ತಾಯಿ ದೇವಾಲಯಕ್ಕೆ ಹೋಗಿ ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಶಕ್ತಿ ನೀಡುವಂತೆ ಪ್ರಾರ್ಥನೆ ಮಾಡಿದ್ದೆವು. ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ರಾಜ್ಯದ ಜನರಿಗೆ ನಮನ ಸಲ್ಲಿಸುತ್ತೇನೆ.
ಬುದ್ಧ ಬಸವನು ಮನೆ ಬಿಟ್ಟ ಗಳಿಗೆಯಲ್ಲಿ, ಏಸು ಕ್ರಿಸ್ತನು ಶಿಲುಬೆಗೇರಿದ ಗಳಿಗೆಯಲ್ಲಿ, ಪ್ರವಾದಿ ಪೈಗಂಬರ್ ದಿವ್ಯವಾಣಿ ಕೇಳಿದ ಗಳಿಗೆಯಲ್ಲಿ, ಗಾಂಧಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿದ ಗಳಿಗೆಯಲ್ಲಿ, ಭೀಮಾಭಾಯಿ ಅವರು ಅಂಬೇಡ್ಕರ್ ಅವರಿಗೆ ಜನ್ಮ ನೀಡಿದ ಗಳಿಗೆಯಲ್ಲಿ, ಸೋನಿಯಾ ಗಾಂಧಿ ಅವರು ದೇಶಕ್ಕಾಗಿ ಪ್ರಧಾನಮಂತ್ರಿ ಹುದ್ದೆ ತ್ಯಾಗ ಮಾಡಿದ ಗಳಿಗೆಯಲ್ಲಿ ನಾವು ಸರ್ಕಾರವನ್ನು ರಚನೆ ಮಾಡಿದ್ದೇವೆ.
ಬಸವಣ್ಮ, ಅಂಬೇಡ್ಕರ್, ಗಾಂಧಿಜಿ, ಕುವೆಂಪು ಅವರ ತತ್ವ ಸಿದ್ಧಾಂತದ ಮೇಲೆ ಸರ್ಕಾರ ಆಡಳಿತ ಮಾಡಲಿದೆ. ದಲಿತರು, ಶೋಷಿತರು, ಬಡವರಿಗೆ ಸರ್ಕಾರ ಶಕ್ತಿ ತುಂಬಲಿದೆ. ಸಾಮಾಜಿಕ ನ್ಯಾಯ ನೀಡಿ, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯಲಿದೆ. ನಾವು ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆಗಳನ್ನು ಮೊದಲ ಸಚಿವ ಸಂಪುಟ ಸಭೆಯಲ್ಲಿ ಜಾರಿ ಮಾಡಿದ್ದು, ಮುಂದಿನ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ನೀಡುತ್ತೇವೆ. ಜಾತಿ, ಧರ್ಮಗಳ ನಡುವಣ ದ್ವೇಷ ಕಿತ್ತೊಗೆಯಲು ಕೆಲಸ ಮಾಡಬೇಕು. ನಾವು ಎಳ್ಲರಿಗೂ ಅಧಿಕಾರ ಹಂಚಿಕೆ ಮಾಡುತ್ತೇವೆ. ಹೀಗಾಗಿ ಎಲ್ಲರೂ ತಾಳ್ಮೆಯಿಂದ ಇರಿ.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ತ್ಯಾಗ, ನಾಯಕತ್ವ ನಾವು ಮರೆಯುವಂತಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ನಮಗೆ ಮಾರ್ಗದರ್ಶ ನೀಡಿದ್ದಾರೆ. ಅದರಂತೆ ನಾವು ನಡೆಯುತ್ತೇವೆ. ನಮಗೆ ಪಕ್ಷ ಮೊದಲು ನಂತರ ವೈಯಕ್ತಿಕ ವಿಚಾರದ ಬದ್ಧತೆಯಲ್ಲಿ ನಾವು ಕೆಲಸ ಮಾಡೋಣ ಎಂದು ಹೇಳಿದರು.