ಬೆಳಗಾವಿ :
ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿಯ ಸತೀಶಣ್ಣ ಕಲ್ಯಾಣ ಮಂಟಪದ ಸಮೀಪ ಸರ್ವಿಸ್ ರಸ್ತೆ ಪಕ್ಕ ನಿಲ್ಲಿಸಿದ್ದ ವಾಹನ ಮಾಲೀಕರಿಗೆ ಲಾಂಗ್ ತೋರಿಸಿದ ಕಳ್ಳರು ಅವರಲ್ಲಿದ್ದ ಹಣ ದೋಚಿಕೊಂಡು ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಣ ಕಳೆದುಕೊಂಡವರು ಯಮಕನಮರಡಿ ಗ್ರಾಮದವರು. ದೂರದ ಪ್ರಯಾಣ ಮಾಡಿ ಬೆಳಗಿನ ಜಾವ ನಿದ್ರೆಗೆ ಜಾರಿದ್ದರು. ಈ ಕಲ್ಯಾಣ ಮಂಟಪದ ಸರ್ವಿಸ್ ರಸ್ತೆಗೆ ಹೊಂದಿಕೊಂಡಿರುವ ಮುಖ್ಯದಾರರ ಬಳಿ ಮೇ 22 ರಂದು ಟ್ರ್ಯಾಕ್ಟರ್ ಮಾಲೀಕರು ಈ ಸ್ಥಳದಲ್ಲಿ ಸ್ವಲ್ಪ ಹೊತ್ತು ನಿದ್ದೆ ಮಾಡಿ ಪ್ರಯಾಣ ಮುಂದುವರಿಸಲು ಮುಂದಾಗಿದ್ದರು. ಇದನ್ನು ಗಮನಿಸಿದ ಕಳ್ಳರು ಲಾಂಗು ಮತ್ತು ಚಾಕು ತೋರಿಸಿ ಬೆದರಿಸಿದರು. ಅವರಲ್ಲಿದ್ದ ಸುಮಾರು 40 ಸಾವಿರ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಕಲ್ಯಾಣ ಮಂಟಪದ ಮಾಲಿಕ ಹಾಗೂ ಸಾಮಾಜಿಕ ಕಾರ್ಯಕರ್ತ ಹಬೀಬ ಶಿಲೇದಾರ ತಿಳಿಸಿದ್ದಾರೆ.
ಈ ಭಾಗದಲ್ಲಿ ಆಗಾಗ ಇಂತಹ ಹಲವು ಪ್ರಕರಣಗಳು ನಡೆದಿದೆ. ಕಿತ್ತೂರು ಪೊಲೀಸರ ಗಮನಕ್ಕೆ ಪ್ರಕರಣ ತಲುಪಿದ್ದರು ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ದೂರಿದ್ದಾರೆ. ಹೆದ್ದಾರಿ ಬಳಿ ಇಂತಹ ಪ್ರಕರಣ ನಡೆಯುತ್ತಿರುವುದರಿಂದ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುವಂತಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಪೊಲೀಸರು ಗಸ್ತು ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.