ಬೆಳಗಾವಿ : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ಎರಡು ವಾರಗಳ ಕಾಲ ಚಳಿಗಾಲದ ವಿಶೇಷ ಅಧಿವೇಶನ ನಡೆಯಲಿದೆ. ಮೊದಲ ದಿನವಾದ ಸೋಮವಾರ ವಿಧಾನಸಭೆಯಲ್ಲಿ ಸಂತಾಪ ಸೂಚಕ ಸಭೆ ಮಾತ್ರ ನಡೆಯಲಿದೆ. ಮಂಗಳವಾರದಿಂದ ಅಧಿವೇಶನ ಕಾವೇರಲಿದೆ.
ಆಡಳಿತ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಈ ಬಾರಿ ಮತ್ತಷ್ಟು ಪ್ರಬಲವಾಗಿ ಕಾದಾಡಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರ ಹಸ್ತಾಂತರ ಕುರಿತು ಚರ್ಚೆ ಜೋರಾಗುವ ಸಾಧ್ಯತೆ ಇದೆ. ಬೆಳಗಾವಿ ಅಧಿವೇಶನದ ಕಾಲಕ್ಕೆ ಈ ವರ್ಷವೂ ಪ್ರತಿಭಟನೆಗಳ ಸಂಖ್ಯೆ ಹೆಚ್ಚಾಗಿದ್ದು ನೂರಕ್ಕೂ ಹೆಚ್ಚು ಪ್ರತಿಭಟನೆ ನಡೆಯಲಿದೆ. ಹಳೇ ಪಿಬಿ ರಸ್ತೆ ಮತ್ತು ಸುವರ್ಣ ವಿಧಾನಸೌಧದ ಖಾಲಿ ಜಾಗದಲ್ಲಿ ಪ್ರತಿಭಟನೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಹಿಂದೆ ಪ್ರತಿಭಟನೆ ಕಾಲಕ್ಕೆ ಗಲಾಟೆ ಜೋರಾಗಿದ್ದರಿಂದ ಈ ಸಲ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ಭದ್ರತೆ ಇರಲಿದೆ. ಪ್ರತಿಭಟನೆಯಲ್ಲಿ ಭಾಗವಹಿಸುವವರಿಗೆ ನೀರಿನ ವ್ಯವಸ್ಥೆ ಮುಂತಾದವುಗಳನ್ನು ಮಾಡಲಾಗಿದೆ.
ಸುವರ್ಣ ವಿಧಾನಸೌಧದ ಬಳಿಯ ಉದ್ಯಾನ ನಿರ್ವಹಣೆ, ಸ್ವಚ್ಛತೆ, ಅಡುಗೆ ಮುಂತಾದ ಕೆಲಸಗಳಿಗೆ 500 ಕ್ಕೂ ಹೆಚ್ಚು ಆಳುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಬೆಳಗಾವಿ ನಗರ ಸುವರ್ಣಸೌಧದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿದೆ. ಅಧಿಕಾರಿಗಳು, ಸಿಬ್ಬಂದಿಗಳನ್ನು ಕರೆದೊಯ್ಯಲು 500 ಕ್ಕೂ ಹೆಚ್ಚು ವಾಹನಗಳನ್ನು ಚಾಲಕರ ಸಮೇತ ಬಳಸಿಕೊಳ್ಳಲಾಗುತ್ತಿದೆ. ವಸತಿಗೆ 3000 ಕೊಠಡಿ ಕಾಯ್ದಿರಿಸಲಾಗಿದೆ. ಸರಕಾರಿ ವಸತಿಗೃಹ, ವಿಶ್ವವಿದ್ಯಾಲಯಗಳ ಕೊಠಡಿ, ಖಾಲಿ ಇರುವ ಸರಕಾರಿ ಕಟ್ಟಡ, ಲಾಡ್ಜ್, ಕಲ್ಯಾಣ ಮಂಟಪ ಮತ್ತು ಅಪಾರ್ಟ್ಮೆಂಟ್ ಗಳನ್ನು ಸುಮಾರು 12 ದಿನಗಳ ಅವಧಿಗೆ ಬಾಡಿಗೆಗೆ ಪಡೆಯಲಾಗಿದೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಇತ್ತೀಚಿಗೆ ಉಪಹಾರಕೂಟದಲ್ಲಿ ಭಾಗವಹಿಸಿದ್ದಾಗ 43 ಲಕ್ಷ ರೂ.ಐಷಾರಾಮಿ ಕೈ ಗಡಿಯಾರ ಧರಿಸಿದ್ದು ಚರ್ಚೆಯಾಗಲಿದೆ.
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ ಸೇರಿ ಸುಮಾರು 30 ಮಸೂದೆಗಳು ಮಂಡನೆಯಾಗಲಿವೆ. ಅಧಿವೇಶನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಿನಿಂದ ಹೋರಾಟ ನಡೆಸಲು ತೀರ್ಮಾನಿಸಿವೆ.


