ರಾಮನಗರ : ತನ್ನನ್ನು ಪ್ರೀತಿಯಿಂದ ಸಲಹುತ್ತಿದ್ದ ವೃದ್ಧೆಯೊಬ್ಬರ ಅಗಲಿಕೆಗೆ ಮಂಗವೊಂದು ಮರುಗಿದ ರೀತಿಗೆ ಗ್ರಾಮಸ್ಥರು ಕಣ್ಣಿರಾಗಿದ್ದಾರೆ.
ತನಗೆ ಪ್ರತಿದಿನ ಹಣ್ಣುಹಂಪಲು ನೀಡುತ್ತಿದ್ದ ವೃದ್ಧೆಯೊಬ್ಬರ ಸಾವಿಗೆ ಮಂಗ ದುಃಖಿಸಿದೆ. ಹಾಗೂ ತನ್ನ ಸಲಹುತ್ತಿದ್ದ ಅಜ್ಜಿಯ ಮೃತದೇಹದ ಮೇಲೆ ಮಲಗಿ ದುಃಖಿಸಿದ ಅಸಾಮಾನ್ಯ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಗ್ರಾಮದ ನಿವಾಸಿ 80 ವರ್ಷದ ಪಾರ್ವತಮ್ಮ ಎಂಬವರ ಸಾವಿಗೆ ಮಂಗ ಕಣ್ಣೀರು ಹಾಕಿದೆ. ಪ್ರತಿನಿತ್ಯ ಮನೆ ಬಳಿ ಬರುತ್ತಿದ್ದ ಮಂಗನಿಗೆ ಪಾರ್ವತಮ್ಮ ಅವರು ತಿಂಡಿ ಕೊಟ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಕೇವಲ ಆಹಾರ ನೀಡುವುದಷ್ಟೇ ಅಲ್ಲದೆ, ಆ ಮಂಗನನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಈ ಪ್ರೀತಿಯ ಬಾಂಧವ್ಯಕ್ಕೆ ಮಾರುಹೋಗಿದ್ದ ಆ ಮಂಗ, ಪ್ರತಿದಿನ ಅಜ್ಜಿಯ ಮನೆಗೆ ತಪ್ಪದೇ ಬರುತ್ತಿತ್ತು. ಕೋತಿ ಜೊತೆ ನಿತ್ಯ ಒಡನಾಟ ಹೊಂದಿದ್ದ ವೃದ್ಧೆ ಮಂಗಳವಾರ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ.
ಪಾರ್ವತಮ್ಮ ಅವರು ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆಯೇ ಅಲ್ಲಿಗೆ ಬಂದ ಮಂಗ, ಅಜ್ಜಿಯ ಮೃತದೇಹದ ಬಳಿ ಕುಳಿತು ಮರುಗಿದೆ. ನಂತರ ವೃದ್ಧೆಯ ಮೃತದೇಹದ ಮೇಲೆ ಮಲಗಿದ ಮಂಗ ರೋದನ ಮಾಡಿದೆ. ಅಜ್ಜಿಯ ಶವದ ಸುತ್ತ ಅಷ್ಟೊಂದು ಜನರಿದ್ದರೂ ಮಂಗ ಹೆದರದೆ ಅಜ್ಜಿಯ ಮೃತದೇಹದ ಬಳಿಯೇ ಕುಳಿತು ಮರಗುತ್ತಿದ್ದ ದೃಶ್ಯ ಅಲ್ಲಿದ್ದವರ ಕಣ್ಣಿನಲ್ಲಿ ನೀರು ತರಿಸಿತು. ಅಜ್ಜಿಯ ಶವದ ಮುಂದೆ ಮಂಗ ರೋದನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


