ಬೆಂಗಳೂರು :
ಬಿಹಾರ ಸರಕಾರ ಜಾತಿಗಣತಿ ವರದಿ ಬಿಡುಗಡೆ ಮಾಡಿದ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ (ಜಾತಿಗಣತಿ ವರದಿ )ಅಂಗೀಕರಿಸಿ ಬಿಡುಗಡೆ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.
ಕರ್ನಾಟಕದಂತೆ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲೂ ಜಾತಿ ಗಣತಿಗೆ ವಿರೋಧ ಪಕ್ಷಗಳು ಆಡಳಿತರೂಢ ಪಕ್ಷಗಳನ್ನು ಒತ್ತಾಯಿಸುತ್ತಿವೆ. ಮುಂದಿನ ದಿನಗಳಲ್ಲಿ ಈ ಕೂಗು ಇನ್ನೂ ಕೆಲ ರಾಜ್ಯಗಳಿಗೆ ವಿಸ್ತರಣೆ ಯಾಗುವ ಸಾಧ್ಯತೆ ಇದೆ. ಆದರೆ ಪ್ರಬಲ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದವರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದಲ್ಲಿ ಜಾತಿ ಗಣತಿಗೆ ಆದೇಶಿಸಿದ್ದೆ. ನಂತರ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಆಯೋಗದ ಅಧ್ಯಕ್ಷ ಕಾಂತರಾಜು ವರದಿ ಸಲ್ಲಿಸಲು ಹೋದಾಗ ಕುಮಾರಸ್ವಾಮಿ ಅದನ್ನು ಸ್ವೀಕರಿಸಿರಲಿಲ್ಲ. ಈಗ ಹಾಲಿ ಅಧ್ಯಕ್ಷರಿಗೆ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ. ಆದರೆ ಅವರು ಇದುವರೆಗೆ ವರದಿ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.
ನವಂಬರ್ ನಲ್ಲಿ ವರದಿ :
ಈ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ರಾಜ್ಯದಲ್ಲಿ ಈ ಹಿಂದೆ ಆಯೋಗ ನೀಡಿದ್ದ ಜಾತಿಗಣತಿ ವರದಿಯನ್ನು ಸರಕಾರ ಒಪ್ಪಿರಲಿಲ್ಲ. ಅದನ್ನು ಪರಿಷ್ಕರಿಸಲು ಸೂಚಿಸಿದ್ದು ಜಾತಿ ಗಣತಿ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ನವಂಬರ್ ನಲ್ಲಿ ಪರಿಷ್ಕೃತ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದ್ದೇವೆ ಎಂದು ತಿಳಿಸಿದ್ದಾರೆ.