ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 19ರಂದು ನಡೆದಿದ್ದು ಅಹಿತಕರ ಘಟನೆ. ನಾನು ಯಾರ ಮೇಲೆ ಆರೋಪ ಹೊರಿಸುವುದಿಲ್ಲ. ಯಾರ ಮೇಲೂ ನನಗೆ ಸೇಡು, ದುರುದ್ದೇಶವೂ ಇಲ್ಲ. ಎಲ್ಲವನ್ನೂ ಯಲ್ಲಮ್ಮ ದೇವಿ ಬಳಿ ನಿವೇದಿಸಿಕೊಂಡಿದ್ದೇನೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಯಲ್ಲಮ್ಮನಗುಡ್ಡಕ್ಕೆ ಶುಕ್ರವಾರ ಭೇಟಿ ನೀಡಿ, ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಿ ದರ್ಶನ ಪಡೆದ ನಂತರ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು.
ಎಲ್ಲರಿಗೂ ಒಳಿತಾಗುವಂತೆ ಪೂಜಿಸುವ ಜತೆಗೆ, ಹರಕೆ ತೀರಿಸಲು ಇಲ್ಲಿಗೆ ಬಂದಿದ್ದೇನೆ. ಲಕ್ಷಾಂತರ ಭಕ್ತರ ಮನೆದೇವತೆ ಯಲ್ಲಮ್ಮ ದೇವಿ. ಈ ಧಾರ್ಮಿಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕ್ರಮ ವಹಿಸಬೇಕು ಎಂದರು.
ಯಲ್ಲಮ್ಮ ದೇವಸ್ಥಾನದ ಪರವಾಗಿ ಬಿಜೆಪಿ ಮುಖಂಡ ವಿರೂಪಾಕ್ಷಿ ಮಾಮನಿ ಅವರು ರವಿ ಅವರನ್ನು ಸತ್ಕರಿಸಿದರು. ಶಾಸಕ ಮಹೇಶ ಟೆಂಗಿನಕಾಯಿ, ರತ್ನಾ ಮಾಮನಿ, ಸಂಜಯ ಪಾಟೀಲ, ಸುಭಾಷ ಪಾಟೀಲ, ಜಗದೀಶ ಕೌಜಗೇರಿ, ಜಿ.ಎಸ್.ಗಂಗಲ ಇತರರಿದ್ದರು.