ಬೆಂಗಳೂರು :
ತನ್ನ ವಿರುದ್ಧ ಸ್ಪರ್ಧೆ ನಡೆಸಲಿರುವ ಬಿಜೆಪಿ ಅಭ್ಯರ್ಥಿ ಆರ್. ಅಶೋಕ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಕನಕಪುರಕ್ಕೆ ಸಾಮ್ರಾಟ್ ಅಶೋಕ್ ಅವರು ಬರುತ್ತಿದ್ದಾರೆ ಎಂದು ಪತ್ರಕರ್ತರ ಕೇಳಿದಾಗ, ‘ಕನಕಪುರಕ್ಕೆ ಸಾಮ್ರಾಟ್ ಅವರಾದರೂ ಬರಲಿ, ಚಕ್ರವರ್ತಿಯಾದರೂ ಬರಲಿ. ಕಾರ್ಯಕರ್ತರಾದರೂ ಬರಲಿ. ಆತಿಥ್ಯ ನೀಡುವುದರಲ್ಲಿ ಕನಕಪುರ ಖ್ಯಾತಿ ಪಡೆದಿದೆ. 30-40 ವರ್ಷಗಳ ಹಿಂದೆಯೇ ಒಳ್ಳೊಳ್ಳೆ ಮಿಲ್ಟ್ರಿ ಹೊಟೇಲ್ ಗಳನ್ನು ತೆರೆದಿದ್ದಾರೆ. ಅವರು ಬಂದು ಊಟ ಮಾಡಿಕೊಂಡು ಹೋಗಬಹುದು. ಬಿಜೆಪಿಯವರು ಯುಪಿ ಮಾಡೆಲ್ ಆದರೂ ಮಾಡಲಿ, ಗುಜರಾತ್ ಮಾಡೆಲ್ ಆದರೂ ಮಾಡಲಿ. ಅವರಿಗೆ ಶುಭವಾಗಲಿ’ ಎಂದರು.
ನೀವು ರಾಜ್ಯ ಪ್ರವಾಸ ಮಾಡುವುದನ್ನು ತಪ್ಪಿಸಲು ಈ ತಂತ್ರ ರೂಪಿಸಿದ್ದಾರೆ ಎಂದು ಕೇಳಿದಾಗ, ‘ನಾನು ನಾಮಪತ್ರ ಸಲ್ಲಿಸುವ ದಿನ ಹಾಗೂ ಮತ್ತೊಂದು ದಿನ ಹೋಗಿ ಪ್ರಚಾರ ಮಾಡುತ್ತೇನೆ. ಅವರಿಗೆ ನನ್ನನ್ನು ಹಾಗೂ ಸಿದ್ದರಾಮಯ್ಯ ಅವರನ್ನು ಕಂಡರೆ ಎಷ್ಟು ಭಯವಿದೆ, ಹೇಗೆ ಗಢಗಢನೆ ನಡುಗುತ್ತಿದ್ದಾರೆ ಎಂದು ತಿಳಿದಿದೆ. ಅವರು ಏದರೂ ತಂತ್ರ ಮಾಡಲಿ. ತಂತ್ರಗಾರಿಕೆಯಲ್ಲಿ ನಾವು ಹಿಂದೆ ಉಳಿದಿಲ್ಲ. ಯಾರು ಪ್ರಬಲರು, ಯಾರು ದುರ್ಬಲರು ಎಂದು ಚುನಾವಣೆ ಫಲಿತಾಂಶ ಹೊರಬಂದ ನಂತರ ತಿಳಿಯುತ್ತದೆ. ಬಿಜೆಪಿಯವರು ಕಳೆದ ಮೂರ್ನಾಲ್ಕು ವರ್ಷಗಳಿಂದ ಇಡಿ, ಐಟಿ, ಸಿಬಿಐ ಪ್ರಕರಣಗಳ ಮೂಲಕ ನನಗೆ ಕಿರುಕುಳ ನೀಡುತ್ತಲೇ ಇದ್ದಾರೆ. ನನಗೆ ನಿತ್ಯ ನೋಟೀಸ್ ಬರುತ್ತಲೇ ಇವೆ. ನನ್ನ ಬೆಂಬಲಕ್ಕೆ ರಾಜ್ಯದ ಜನ ಇದ್ದಾರೆ’ ಎಂದರು.
ನಾನು ವಿಧಾನಸಭೆಯಲ್ಲಿ ಒಂದು ಮಾತು ಹೇಳಿದ್ದೆ. ನಾವು ಚಿನ್ನ, ಹಣ, ಹಣ್ಣು, ಕುರಿ, ಮೇಕೆ, ಹಸು, ಚಪ್ಪಲಿ ಕದಿಯುವವರನ್ನು ನೋಡಿದ್ದೇವೆ. ಆದರೆ ಮತ ಕದಿಯುವವರನ್ನು ನೋಡಿರಲಿಲ್ಲ ಎಂದು ಹೇಳಿದ್ದೆ.
ಈ ಹಿಂದೆ ಬಿಜೆಪಿಯು ಖಾಸಗಿ ಸಂಸ್ಥೆ ಮೂಲಕ 8600 ನಕಲಿ ಬೂತ್ ಅಧಿಕಾರಿಗಳನ್ನು ನೇಮಿಸಿ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸಿ, ಅಕ್ರಮವಾಗಿ ಮತದಾರರ ಹೆಸರನ್ನು ಮತದಾರ ಪಟ್ಟಿಯಿಂದ ಕೈಬಿಡಲಾಗಿತ್ತು. ಇಡೀ ರಾಜ್ಯದಲ್ಲಿ ಲಕ್ಷಾಂತರ ಹೆಸರುಗಳನ್ನು ಅಕ್ರಮವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಆದರೆ ಚುನಾವಣಾ ಆಯೋಗ ಕೇವಲ 3 ಕ್ಷೇತ್ರಗಳಲ್ಲಿ ಮಾತ್ರ ಗಮನಹರಿಸಿತ್ತು.
ಬಿಜೆಪಿಯವರಿಂದ ಪಟ್ಟಿ ಪಡೆದು ಹೆಚ್ಚುವರಿ ಮತ ಸೇರಿಸಲು ಚುನಾವಣಾ ಆಯೋಗದ ಕಣ್ಣು ಮುಚ್ಚಿಸಿ ಅಕ್ರಮ ಮಾಡಲಾಗುತ್ತಿದೆ. ಮಹದೇವಪುರ ಕ್ಷೇತ್ರದ ಅಕ್ರಮ ಇಂದು ನಿಮ್ಮ ಮುಂದೆ ಇಡುತ್ತಿದ್ದೇವೆ. ಒಂದು ಮತವನ್ನು 2-3 ಕಡೆ ಸೇರಿಸಲಾಗಿದೆ. ಒಂದೇ ಹೆಸರು, ತಂದೆ ಹೆಸರು ಎಲ್ಲಾ ಒಂದೇ ಆಗಿದ್ದು, ಮತದದಾರರ ಫೋಟೋ ಮಾತ್ರ ಬೇರೆ ಬೇರೆ. ನಮ್ಮ ಬಳಿ 42,222 ಅಕ್ರಮ ಹೆಸರು ಸೇರಿಸಿರುವ ದಾಖಲೆ ಇವೆ. ಚುನಾವಣಾ ಆಯೋಗದ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಫಾರಂ 6,7, 8 ಯಾವುದೂ ಇಲ್ಲದೇ ಈ ಹೆಸರು ಸೇರಿಸಲಾಗಿದೆ. ಚುನಾವಣಾಧಿಕಾರಿಗಳು ಹೊಸ ಮತದಾರರ ಸೇರ್ಪಡೆ ಅಭಿಯಾನದ ಹೆಸರಲ್ಲಿ ಈ ಅಕ್ರಮ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಅಕ್ರಮದ ಬಗ್ಗೆ ಆಯೋಗಕ್ಕೆ ದಾಖಲೆಗಳನ್ನು ನೀಡುತಿದ್ದೇವೆ. ಮಹದೇವಪುರ ಕ್ಷೇತ್ರದ ಅರ್ಧಭಾಗ ಪರಿಶೀಲನೆ ಮಾಡಿದ್ದು, 40 ಸಾವಿರ ಹೆಸರು ಅಕ್ರಮ ಸೇರ್ಪಡೆ ಬೆಳಕಿಗೆ ಬಂದಿದೆ. ಒಂದೇ ಮತದಾರರ ಒಂದೇ ಫೋಟೋ ಇರುವ ಎರಡು ಮತಗಳಿವೆ. ಬೇರೆ ಬೇರೆಯ ಎರಡು ಮೂರು ಬೂತ್ ಗಳಲ್ಲಿ ಇವರ ಮತ ಸೇರಿಸಲಾಗಿದೆ.
ಚುನಾವಣಾ ಆಯೋಗಕ್ಕೆ ನಾವು ಮತ್ತೊಂದು ಅಧಿಕೃತ ದೂರು ನೀಡುತ್ತೇವೆ. ಆಯೋಗ ಕೂಡಲೇ ಎಆರ್ ಓ, ಬಿಎಲ್ ಓ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಈ ಕ್ಷೇತ್ರದ ಮತದಾರರ ಪಟ್ಟಿ ಮತ್ತೊಮ್ಮೆ ಪರಿಷ್ಕರಣೆ ಆಗಬೇಕು. ಇದು ಸೂಕ್ಷ್ಮ ವಿಚಾರವಾಗಿದ್ದು, ನಕಲಿ ಅರ್ಜಿಗಳ ಮೂಲಕ ಈ ಅಕ್ರಮ ಮಾಡಲಾಗಿದೆ.
ಪಕ್ಷದ ಅಧ್ಯಕ್ಷನಾಗಿ ನನಗೆ ಜವಾಬ್ದಾರಿ ಇದೆ. ನಾನು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುವುದಿಲ್ಲ. ದಾಖಲೆ ಸಮೇತ ಆರೋಪ ಮಾಡುತ್ತಿದ್ದೇನೆ. ಯಾರೆಲ್ಲಾ 2 ಮತಗಳನ್ನು ಹೊಂದಿದ್ದಾರೆ, ಇದಕ್ಕೆ ಕುಮ್ಮಕ್ಕು ನೀಡಿರುವ ಅಧಿಕಾರಿಗಳನ್ನು ಬಂಧಿಸಿ ಕೇಸ್ ದಾಖಲಿಸಬೇಕು. ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿ ಈ ಅಕ್ರಮ ನಡೆಯುತ್ತಿವೆ. ಈ ವಿಚಾರವಾಗಿ ನಾವೇ ತನಿಖೆ ಮಾಡಿದ್ದೇವೆ. ನಮ್ಮ ಬೂತ್ ಏಜೆಂಟರು ಈ ಬಗ್ಗೆ ಪರಿಶೀಲಿಸಿ ಅಕ್ರಮ ಬಯಲು ಮಾಡಿದ್ದಾರೆ.
ಒಂದು ಕ್ಷೇತ್ರದಲ್ಲಿ 1 ಲಕ್ಷ ಬೋಗಸ್ ಮತ ಸೇರಿಸಲಾಗಿದೆ. ಚುನಾವಣೆ ಸೋಲಿನ ಭಯದಲ್ಲಿ ಈ ರೀತಿ ಅಕ್ರಮ ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗ ಈ ಬಗ್ಗೆ ಪರಿಶೀಲನೆ ನಡೆಸಬೇಕು. ಇದಕ್ಕಾಗಿ ಪ್ರತ್ಯೇಕ ತಂಡ ಕಳುಹಿಸಬೇಕು. ಚುನಾವಣಾ ಆಯೋಗದ ಘನತೆ ಉಳಿಸಿಕೊಳ್ಳಬೇಕು ಎಂದು ಹೇಳಿದರು.
*ಪ್ರಶ್ನೋತ್ತರ:*
ಈ ಅಕ್ರಮದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲು ಆಗ್ರಹಿಸುತ್ತೀರಾ ಎಂದು ಕೇಳಿದಾಗ, ‘ಈ ಮಹದೇವಪುರ ಕ್ಷೇತ್ರದಲ್ಲಿ 33 ಸಾವಿರ ಮತಗಳನ್ನು ಅಕ್ರಮವಾಗಿ ಕೈಬಿಡಲಾಗಿದ್ದು, 42 ಸಾವಿರ ನಕಲಿ ಮತಗಳನ್ನು ಸೇರಿಸಲಾಗಿದೆ. ಆಯೋಗ ಇದಕ್ಕಾಗಿ ಪ್ರತ್ಯೇಕ ತಂಡ ಕಳುಹಿಸಿ ಪರಿಶೀಲನೆ ಮಾಡಿಸಬಹುದು. ಹೀಗಾಗಿ ಯಾವುದೇ ರೀತಿಯಲ್ಲಿ ಚುನಾವಣೆ ಮುಂದೂಡುವ ಅಗತ್ಯವಿರುವುದಿಲ್ಲ’ ಎಂದು ತಿಳಿಸಿದರು.
ಕಳೆದ ಬಾರಿ ಅಕ್ರಮ ನಡೆದಾಗ ಕಾಂಗ್ರೆಸ್ ಏನು ಮಾಡಲಿಲ್ಲ ಎಂದು ಹೇಳಿದಾಗ, ‘ನಾವು ಡಿಸೆಂಬರ್ ತಿಂಗಳಲ್ಲೇ ಅಕ್ರಮ ನಡೆದಾಗ ನಾವು ದೂರು ನೀಡಿದ್ದೆವು. ಆಯೋಗ ನಾಲ್ಕು ಸಭೆ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿ ಈ ರೀತಿ ಮಾಡಿದ್ದಾರೆ. ಅವರು ಏನೇ ಮಾಡಿದರೂ ಚುನಾವಣೆಯಲ್ಲಿ ಗೆಲ್ಲುವುದಿಲ್ಲ. ನಾವು ಎರಡು ಮತ ಇರುವವರ ಪಟ್ಟಿಯನ್ನು ಕಾಂಗ್ರೆಸ್ ನಮ್ಮ ಬೂತ್ ಏಜೆಂಟರಿಗೆ ಕೊಡುತ್ತೇವೆ. ಅಲ್ಲಿ ನಕಲಿ ಮತದಾನಕ್ಕೆ ಬಂದಾಗ ಅಲ್ಲೇ ಅವರನ್ನು ಬಂಧಿಸುವಂತೆ ಮಾಡುತ್ತೇವೆ. ಚಿಲುಮೆ ಸಂಸ್ಥೆ, ಮಲ್ಲೇಶ್ವರದ ಮಂತ್ರಿಗಳು ಸೇರಿದಂತೆ ಎಲ್ಲರ ಸಂಪರ್ಕವಿದೆ’ ಎಂದು ತಿಳಿಸಿದರು.
ಕಾಗೋಡು ತಿಮ್ಮಪ್ಪ ಅವರ ಪುತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ಮಾಡಿದ್ದಾರೆ ಎಂಬ ಪ್ರಶ್ನೆ ಕೇಳಿದಾಗ, ‘ಚುನಾವಣೆ ಸಮಯದಲ್ಲಿ ಯಾರು ಯಾವ ಪಕ್ಷ ಸೇರುತ್ತಾರೆ ಹೇಳಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಸೇರುವವರ ಪಟ್ಟಿ ತಿಳಿಸುತ್ತೇವೆ’ ಎಂದು ತಿಳಿಸಿದರು.