ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿದ್ದ ನಕಲಿ ಅಂಕಪಟ್ಟಿ( Fake marks card) ದಂಧೆಯ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, 3 ಸರ್ಕಾರಿ ಅಧಿಕಾರಿಗಳು ಸೇರಿ 48 ಮಂದಿಯನ್ನು ಬಂಧಿಸಿದ್ದಾರೆ. ಈ ಧಂದೆಯ ಕಿಂಗ್ ಪಿನ್ ತಲೆಮರೆಸಿಕೊಂಡಿದ್ದಾನೆ .
ದ್ವಿತೀಯ ದರ್ಜೆ ಸಹಾಯಕ ಬ್ಯಾಕ್ಲ್ಯಾಗ್ ಹುದ್ದೆಗೆ ನಕಲಿ ದಾಖಲೆ ಸಲ್ಲಿಸಿ ಉದ್ಯೋಗ ಪಡೆಯಲು ನಕಲಿ ಅಂಕಪಟ್ಟಿ ಒದಗಿಸಿದ್ದ 11 ಮಧ್ಯವರ್ತಿಗಳು ಹಾಗೂ 37 ಅಭ್ಯರ್ಥಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಅವರಿಂದ 40 ಲಕ್ಷ ಬೆಲೆಯ 2 ಕಾರುಗಳು, 17 ಮೊಬೈಲ್ಗಳು, ಹಾರ್ಡ್ ಡಿಸ್ಕ್ನ್ನು ವಶಪಡಿಸಿಕೊಂಡಿದ್ದಾರೆ. ದಂಧೆಯಲ್ಲಿ ಶಾಮೀಲಾಗಿರುವ 14 ಮಂದಿ ಅಭ್ಯರ್ಥಿಗಳು ಹಾಗೂ ದಂಧೆಯ ಕಿಂಗ್ಪಿನ್ಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ.
ಈ ಮಧ್ಯವರ್ತಿಗಳ ಪೈಕಿ ಮೂವರು ಆರೋಪಿತರು ವಿವಿಧ ಇಲಾಖೆಯಲ್ಲಿ ಸರ್ಕಾರಿ ನೌಕರರಾಗಿರುವುದು ಗಮನಾರ್ಹವಾಗಿದೆ. ಜಲಸಂಪನ್ಮೂಲ ಇಲಾಖೆಯು 2022ರ ಅಕ್ಟೋಬರ್ನಲ್ಲಿ ದ್ವಿತೀಯ ದರ್ಜೆ ಸಹಾಯಕ ಬ್ಯಾಕ್ ಲಾಗ್ 182 ಹುದ್ದೆಗಳಿಗೆ ನೇರ ನೇಮಕಾತಿ ಅಡಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿತ್ತು. ನೇಮಕಾತಿಗಾಗಿ 62 ಮಂದಿ ಅಭ್ಯರ್ಥಿಗಳು ಸಲ್ಲಿಸಿದ್ದ ಅಂಕಪಟ್ಟಿ ಹಾಗೂ ಇತರೆ ದಾಖಲಾತಿಗಳು ಪರಿಶೀಲನೆ ವೇಳೆ ನಕಲಿ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶೇಷಾದ್ರಿಪುರ ಪೊಲೀಸ್ ಠಾಣೆಗೆ ಇಲಾಖೆಯ ಅಧಿಕಾರಿಗಳು ದೂರು ನೀಡಿದ್ದರು.
ನಂತರ ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ಹಸ್ತಾಂತರವಾಗಿತ್ತು. ತನಿಖೆ ಕೈಗೊಂಡ ಸಿಸಿಬಿ ಇನ್ಸ್ಪೆಕ್ಟರ್ ಶ್ರೀನಿವಾಸ ನೇತೃತ್ವದ ತಂಡ ಕಲಬುರಗಿಯಲ್ಲಿ 25, ಹಾಸನ 12, ಬೆಳಗಾವಿ 3, ಕೋಲಾರ, ಕೊಪ್ಪಳ, ವಿಜಯನಗರ, ರಾಯಚೂರು ಸೇರಿದಂತೆ ಒಟ್ಟು 12 ಜಿಲ್ಲೆಗಳಿಂದ ಅನಧಿಕೃತವಾಗಿ ಅರ್ಜಿ ಸಲ್ಲಿಸಿದ್ದ 62 ಜನ ಅಭ್ಯರ್ಥಿಗಳ ಪೈಕಿ 37 ಅಭ್ಯರ್ಥಿಗಳನ್ನ ಬಂಧಿಸಿದೆ. ಅಲ್ಲದೆ, ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ 11 ಮಂದಿಯನ್ನ ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಫೇಲಾದವರು ಹಾಗೂ ಕಡಿಮೆ ಅಂಕ ಪಡೆದವರಾಗಿದ್ದಾರೆ ಎಂದು ಹೇಳಲಾಗಿದೆ. ಇವರು ವಾಮಮಾರ್ಗದ ಮೂಲಕ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ನಕಲಿ ಅಂಕಪಟ್ಟಿ ಸೃಷ್ಟಿಸುವ ಜಾಲದೊಂದಿಗೆ ಸಂಪರ್ಕ ಬೆಳೆಸಿ, ಲಕ್ಷಾಂತರ ಹಣ ನೀಡಿ ಹೆಚ್ಚು ಅಂಕ ಹೊಂದಿರುವ ರೀತಿ ಅಂಕಪಟ್ಟಿ ಪಡೆದಿದ್ದರು.
ಈ ದಂಧೆಯ ಜಾಲ ಪಶ್ಚಿಮ ಬಂಗಾಳದ ಕಾಲೇಜೊಂದರಲ್ಲಿಯೂ ನಕಲಿ ಅಂಕಪಟ್ಟಿ ತಯಾರಿಸಿಕೊಟ್ಟಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಈ ಜಾಲದ ಪ್ರಮುಖ ಕಿಂಗ್ಪಿನ್ ಬಂದೇ ನವಾಜ್ ಎಂಬಾತ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಲಬುರಗಿ ಮೊರಾರ್ಜಿ ದೇಸಾಯಿ ಪಿಯು ಕಾಲೇಜು ಪ್ರಾಂಶುಪಾಲ ಆನಂದ್, ಜೋಗದ ಕೆಪಿಸಿಎಲ್ನ ದ್ವಿತೀಯ ದರ್ಜೆ ಸಹಾಯಕ ಕೃಷ್ಣ ಗುರುನಾಥ ರಾಥೋಡ, ಹಾಸನದ ಜಲಸಂಪನ್ಮೂಲ ಇಲಾಖೆ ಎಫ್ಡಿಎ ಪ್ರದೀಪ ಗಂಗೂರ್, ಮಧ್ಯವರ್ತಿಗಳಾದ ಹಾಸನದ ಟಿ.ರವಿ, ಮಳವಳ್ಳಿ ಪ್ರದೀಪ, ಜೇವರ್ಗಿ ಮೂಲದ ನಿಂಗಪ್ಪ ನಡುವಿನಮನಿ, ಸಿಂಧಗಿಯ ಮಲ್ಲಿಕಾರ್ಜುನ ಸೋಂಪುರ, ಕಲಬುರಗಿಯ ಮುಸ್ತಾಫ, ಕೆಜಿಎಫ್ನ ಸುರೇಶಕುಮಾರ, ತುಮಕೂರಿನ ಮುತ್ತುರಾಜ, ಬೆಂಗಳೂರಿನ ಶರತ ಹಾಗೂ 37 ಅಭ್ಯರ್ಥಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 40 ಲಕ್ಷ ರೂ. ಮೌಲ್ಯದ ಎರಡು ಕಾರು, 17 ಮೊಬೈಲ್ ಹಾರ್ಡ್ಡಿಸ್ಕ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಪಿಯುಸಿ, ಪದವಿ, ಎಸ್ಎಸ್ಎಲ್ಸಿ ಸೇರಿದಂತೆ ಎಲ್ಲಾ ಕೋರ್ಸ್ಗಳ ಅಂಕಪಟ್ಟಿಗಳಿಗೂ 4ರಿಂದ 5 ಲಕ್ಷ ರೂ. ನಿಗದಿ ಮಾಡಿದ್ದರು. ಪ್ರತ್ಯೇಕ ತಂಡಗಳಾಗಿ ತಮಗೆ ಸಂಪರ್ಕಕ್ಕೆ ಬಂದ ಅಭ್ಯರ್ಥಿಗಳಿಂದ ಹಣ ಪಡೆದು ಪಿಯು ಬೋರ್ಡ್ನಿಂದ ವಿತರಿಸಲಾಗುವ ಅಂಕಪಟ್ಟಿಗಳ ಮಾದರಿಯಲ್ಲೇ ನಕಲಿ ಅಂಕಪಟ್ಟಿ ತಯಾರಿಸಿ ಹಣ ನೀಡಿದ ಅಭ್ಯರ್ಥಿಗಳಿಗೆ ಕೊಡುತ್ತಿದ್ದರು. ಈ ಅಂಕಪಟ್ಟಿಗಳನ್ನು ನೂರಾರು ಮಂದಿ ಪಡೆದಿರುವ ಸಾಧ್ಯತೆಯಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ 25 ಮಂದಿ ಅಭ್ಯರ್ಥಿಗಳು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದ್ದು, ಬಂಧನಕ್ಕಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.