ಬೆಳಗಾವಿ: ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಇದೀಗ ಡಿಸಿಸಿ ಬ್ಯಾಂಕ್ ಚುನಾವಣೆ ಅಬ್ಬರ ತಾರಕಕ್ಕೇರಿದೆ. ಎಲ್ಲಿ ನೋಡಿದರೂ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸುದ್ದಿ.
ಬೆಳಗಾವಿ ಜಿಲ್ಲೆಯ ಪ್ರಭಾವಿಗಳಾದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಬಣಗಳ ನಡುವೆ ಪ್ರತಿದಿನ ವಾಕ್ಸಮರ ವಾಗ್ದಾಳಿ ಜೋರಾಗಿ ನಡೆದಿದೆ.
ಸಚಿವ ಸತೀಶ ಜಾರಕಿಹೊಳಿ ಅವರ ಎದುರೇ ಪತಿಗೆ ಹೊಡೆದ ಘಟನೆ ಇಡೀ ರಾಜ್ಯದಲ್ಲಿ ಭಾರಿ ಸುದ್ದಿಯಾಗಿತ್ತು.
ಹುಕ್ಕೇರಿ ತಾಲೂಕಿನಲ್ಲಿ ಮದಿಹಳ್ಳಿ ಪಿಕೆಪಿಎಸ್ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಎದುರೇ ಪತಿಗೆ ಮಹಿಳೆಯೊಬ್ಬಳು ಹಲ್ಲೆ ಮಾಡಿದ್ದರು.
ಈಗ ಮಹಿಳೆ ಘಟನೆಗೆ ಕ್ಷಮೆಯಾಚನೆ ಮಾಡಿದ್ದಾರೆ. ಸತೀಶ ಸಾಹುಕಾರ್ ಎಂದು ಗೊತ್ತಿರಲಿಲ್ಲ, ನನ್ನ ಪತಿ ಹಿರಿಯರು. ಅವರಿಗೂ ನಾನು ಶರಣಾಗುತ್ತೇನೆ ಎಂದು ಪತ್ನಿ ಲಗಮವ್ವ ಹೇಳಿದ್ದಾರೆ.
ಪಿಕೆಪಿಎಸ್ ನಿರ್ದೇಶಕರಾಗಿರುವ ಮಾರುತಿ ಸನದಿ ಅವರು ಜಾರಕಿಹೊಳಿ ಪರ ಇರುವುದಕ್ಕೆ ಲಗಮವ್ವ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಹುಕ್ಕೇರಿ ತಾಲೂಕು ಮದಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಂಘದ ನಿರ್ದೇಶಕರ ನಾಮನಿರ್ದೇಶನ ವೇಳೆ ಜಾರಕಿಹೊಳಿ ಅವರೊಂದಿಗೆ ಮಾರುತಿ ಸನದಿ ಬಂದಿದ್ದರು. ಮಾರುತಿ ಸನದಿ ಅವರ ಪತ್ನಿ ಲಗಮವ್ವ ಸನದಿ ಪತಿಯ ಕೊರಳು ಪಟ್ಟಿ ಹಿಡಿದು ಹಲ್ಲೆ ಮಾಡಿದ್ದರು. ಈಗ ಮಹಿಳೆ ಒಟ್ಟಾರೆ ಪ್ರಕರಣಕ್ಕೆ ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದಾರೆ.