ಬೆಳಗಾವಿ : ದೇಹ ತ್ಯಾಗ ಮಾಡುತ್ತಾರೆ ಎಂಬ ವದಂತಿ ಕೊನೆಗೂ ಸುಖಾಂತ್ಯಗೊಂಡಿದೆ. ಆಧ್ಯಾತ್ಮಿಕ ಪಂಥವೊಂದಕ್ಕೆ ಮಾರು ಹೋಗಿ ಸೆಪ್ಟೆಂಬರ್ 8 ರಂದು ದೇಹತ್ಯಾಗ ಮಾಡಲು ಮುಂದಾಗಿದ್ದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅನಂತಪುರ ಗ್ರಾಮದ ಕೆಲವರು ಕೊನೆಗೂ ತಮ್ಮ ನಿರ್ಧಾರದಿಂದ ಹಿಂದೆ ಸರಿದ ಬೆಳವಣಿಗೆ ವರದಿಯಾಗಿದೆ.
ಅನಂತಪುರ ಗ್ರಾಮದ ತುಕಾರಾಮ ಇರಕರ ಕುಟುಂಬದ ನಾಲ್ವರು ಮತ್ತು ನೆರೆಯ ಮಹಾರಾಷ್ಟ್ರದ ಐವರ ಮನವೊಲಿಸುವಲ್ಲಿ ಕವಲಗುಡ್ಡ ಅಮರೇಶ್ವರ ಮಹಾರಾಜರು ಹಾಗೂ ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾವಿ ಯಶಸ್ವಿಯಾಗಿದ್ದಾರೆ.
ಹರಿಯಾಣದ ಸಂತ ಬಾಬಾ ರಾಮ್ ಪಾಲ್ ಅವರ ಪ್ರವಚನದಿಂದ ಪ್ರೇರೇಪಣೆಗೊಂಡಿದ್ದ ತುಕಾರಾಮ ಇರಕರ, ಅವರ ಧರ್ಮಪತ್ನಿ ಸಾವಿತ್ರಿ, ಮಗ ರಮೇಶ, ಸೊಸೆ ವೈಷ್ಣವಿ ಹಾಗೂ ಮಹಾರಾಷ್ಟ್ರದ ಕೆಲವರು ದೇಹಕ್ಕೆ ಮುಂದಾಗಿದ್ದರು. ಸೆಪ್ಟೆಂಬರ್ 8ಕ್ಕೆ ದಿನವನ್ನು ಸಹ ನಿಗದಿ ಮಾಡಿಕೊಂಡಿದ್ದರು.
ನಾವು ಇಲ್ಲಿ ಇರುವುದಿಲ್ಲ. ಬಾಬಾ ನಮ್ಮನ್ನು ಕೈಲಾಸಕ್ಕೆ ಕರೆದೊಯ್ಯುತ್ತಾರೆ. ನಮಗೆ ಮೋಕ್ಷವನ್ನು ಸಹ ಕೊಡಿಸುತ್ತಾರೆ
ಎಂದು ಇವರೆಲ್ಲ ಘೋಷಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಅಮರೇಶ್ವರ ಮಹಾರಾಜರು ಮತ್ತು ಸುಭಾಷ್ ಸಂಪಗಾವಿ ಅನಂತಪುರ ಗ್ರಾಮಕ್ಕೆ ತೆರಳಿ ಇವರೆಲ್ಲರ ಜೊತೆ ಮಾತುಕತೆ ನಡೆಸಿದ್ದಾರೆ. ತಹಸೀಲ್ದಾರ ಸಿದ್ದರಾಜ ಬೋಸಗಿ, ಡಿವೈಎಸ್ ಪಿ ಪ್ರಶಾಂತ ಮುನ್ನೊಳ್ಳಿ , ಸಿಪಿಐ ಸಂತೋಷ್ ಹಳ್ಳೂರ, ತಾಲೂಕು ಆರೋಗ್ಯ ಅಧಿಕಾರಿ ಬಸನಗೌಡ ಕಾಗೆ,ಅಥಣಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇವರೆಲ್ಲರೂ
ದೇಹತ್ಯಾಗಕ್ಕೆ ಮುಂದಾದವರ ನಿರ್ಧಾರವನ್ನು ಬದಲಿಸುವಲ್ಲಿ ಸಫಲರಾದರು.
ಬಾಬಾ ರಾಮ್ ಪಾಲ್ ಮಹಾರಾಷ್ಟ್ರದಲ್ಲಿ ಪೊಲೀಸರ ವಶದಲ್ಲಿದ್ದಾರೆ. ಯಾವುದೇ ಮೌಲ್ಯಕ್ಕೆ ಬಲಿಯಾಗದೆ ಉತ್ತಮ ಜೀವನ ನಡೆಸಿ ಎಂದು ಬುದ್ದಿವಾದ ಹೇಳಿ ಯಾವುದೇ ಕಾರಣಕ್ಕೂ ದೇಹತ್ಯಾಗ ಮಾಡದಂತೆ ತಿಳಿಸಿದರು.