ಅಥಣಿ: ಪಟ್ಟಣದ ಶಿವಯೋಗಿ (ಹಲ್ಯಾಳ) ವೃತ್ತದಲ್ಲಿ ರಸ್ತೆ ಬದಿ ವಾಹನದೊಂದಿಗೆ ನಿಂತಿದ್ದ ಸೈನಿಕನಿಗೆ ಪೊಲೀಸರು ಏಕವಚನದಲ್ಲಿ ಮಾತನಾಡಿದ್ದರಿಂದ, ಗೌರವಕೊಟ್ಟು ಮಾತನಾಡಿ ಎಂದು ಮರಳಿ ಹೇಳಿದ್ದರಿಂದ ಉಂಟಾದ ವಾಗ್ವಾದದಲ್ಲಿ ಪೊಲೀಸರು ಸೈನಿಕನಿಗೆ ಶುಕ್ರವಾರ ನಡುರಸ್ತೆಯಲ್ಲಿಯೇ ಥಳಿಸಿ ಬಳಿಕ ಕ್ಷಮೆಯಾಚಿಸಿದ್ದಾರೆ.
ಈ ಘಟನೆ ಬಳಿಕ ಮಾಜಿ ಸೈನಿಕರ ಸಂಘದಿಂದ ಪೊಲೀಸ್ ಠಾಣೆಗೆ ಮುತ್ತಿಗೆ ಯತ್ನ ನಡೆಯಿತು. ಪೋಲಿಸರು ಬಹಿರಂಗ ಕ್ಷಮೆಯಾಚಿಸಿದ ಬಳಿಕ ಮುತ್ತಿಗೆ ಹಿಂಪಡೆದರು.
ಹಲ್ಲೆಗೊಳಗಾದ ಯೋಧ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ಗೌರವದಿಂದ ಮಾತನಾಡಿ ಎಂದು ಹೇಳಿದ್ದಕ್ಕೆ ಅವಾಚ್ಯವಾಗಿ ನಿಂದಿಸಿ ಐದಾರು ಪೊಲೀಸರು ಸೇರಿ ನಡು ರಸ್ತೆಯಲ್ಲೆ ಹಲ್ಲೆ ಮಾಡಿದ್ದಾರೆ. ಬಳಿಕ ಠಾಣೆಗೆ ಕರೆತಂದು ಅಲ್ಲಿಯೂ ಅವಾಚ್ಯವಾಗಿ ನಿಂದಿಸಿದ್ದಾರೆ. ನಾವು ಸಹ ದೇಶ ಸೇವೆ ಮಾಡುತ್ತೇವೆ. ಆದರೆ ನಮಗೆ ಸ್ಥಳೀಯವಾಗಿ ಈ ತರಹ ಅಗೌರವ ತೋರಿದ್ದು ಬೇಸರ ತಂದಿದೆ ಎಂದು ಬೇಸರಿಸಿದರು.
ಮಾಜಿ ಸೈನಿಕ ಗುರಪ್ಪಾ ಮಗದುಮ್ ಮಾತನಾಡಿ, ವೀರ ಮರಣ ಹೊಂದಿದ ಯೋಧರಿಗೆ ಇಡೀ ದೇಶದಲ್ಲಿಯೇ ಸಾಕಷ್ಟು ಗೌರವ ನೀಡುತ್ತಿದ್ದಾರೆ. ಆದರೆ ಸ್ಥಳಿಯವಾಗಿ ಪೋಲಿಸರು ಈ ತರಹ ವರ್ತನೆ ಮಾಡಿದ್ದು ಖಂಡನಿಯ. ಇದನ್ನು ಖಂಡಿಸಿ ನಾವು ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಲು ಹೋಗಿದ್ದೆವು, ಆದರೆ ಪೋಲಿಸರು ಬಹಿರಂಗವಾಗಿ ಯೋಧನಿಗೆ ಕ್ಷಮೆ ಕೇಳಿದ್ದಕ್ಕೆ ಮುತ್ತಿಗೆ ಹಿಂಪಡೆದುಕೊಂಡಿದ್ದೇವೆ ಎಂದು ಹೇಳಿದರು.