ಸುವರ್ಣ ವಿಧಾನಸಭೆ: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ವಕ್ಸ್ ಆಸ್ತಿಗಳ ದುರ್ಬಳಕೆ ವಿಚಾರಕ್ಕೆ ಸಂಬಂಧಿಸಿ ಈ ಹಿಂದೆ ಉಪಲೋಕಾಯುಕ್ತರು ನಡೆಸಿದ್ದ ತನಿಖಾ ವರದಿ ಸೇರಿ ಇತರೆ ಮಾಹಿತಿಗಳ ಮುಖ್ಯ ಕಡತವೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ನಾಪತ್ತೆಯಾಗಿರುವ ವಿಷಯ ಬೆಳಕಿಗೆ ಬಂದಿದೆ.
ವಕ್ಫ್ ಆಸ್ತಿಗಳ ದುರುಪಯೋಗಕ್ಕೆ ಸಂಬಂಧಿಸಿ ಅನ್ವರ್ ಮಾಣಿಪ್ಪಾಡಿ ವರದಿ ಅನ್ವಯ ಮಾಜಿ ಉಪಲೋಕಾಯುಕ್ತ ಎನ್.ಆನಂದ್ ತನಿಖಾ ವರದಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ದ 150 ಕೋಟಿ ರು. ಆಮಿಷ ಪ್ರಕರಣ ಕುರಿತು ಇಲಾಖೆಯಲ್ಲಿ ಕಡತ ತೆರೆಯಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಆಡಳಿತ ನಡೆಸಿದ ಅವಧಿಯಲ್ಲಿ ಕಡತಗಳನ್ನು ಆರಂಭಿಸಲಾಗಿತ್ತು. ಆದರೆ, ಈಗ ಆ ಕಡತವೇ ಕಾಣೆಯಾಗಿದೆ ಎಂದು ಮೂಲಗಳು ತಿಳಿಸಿವೆ.
2014 ಏ.28ರಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಕಡತಗಳನ್ನು ಸಚಿವರ ಅವಗಾಹನೆಗೆ ಮತ್ತು ಆದೇಶಕ್ಕೆ ಕಳುಹಿಸಿತ್ತು.ರಾಜ್ಯ ಅಲ್ಪಸಂಖ್ಯಾತರ ಆಯೋಗದ ವರದಿ ಮೇಲೆ ಸಚಿವ ಸಂಪುಟ ಸಭೆ ಕೆಲ ಸಲಹೆಗಳನ್ನು ಅನುಮೋದಿಸಿ ಅಡ್ವಕೆಟ್ ಜನರಲ್ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿರುವ ಮಾಹಿತಿ ಕಡತದಲ್ಲಿ ಅಡಕವಾಗಿತ್ತು ಎನ್ನಲಾಗಿದೆ.
ಸಚಿವರ ಕಚೇರಿಗೆ ಹೋಗಿತ್ತು:
ಕಡತವನ್ನು ಹಿಂತಿರುಗಿಸುವಂತೆ ಇಲಾಖೆಯಿಂದ ಸಚಿವರ ಕಚೇರಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೆ ಇಲಾಖೆಗೆ ಕಡತ ಹಿಂತಿರುಗಿಸಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು ಖುದ್ದಾಗಿ ಸಚಿವರ ಕಚೇರಿಗೆ ತೆರಳಿ ಕಡತ ಹುಡುಕಿದಾಗ ಪತ್ತೆಯಾಗಿರಲಿಲ್ಲ. ಸಚಿವರ ಕಚೇರಿಗೆ ಕಡತ ಕಳುಹಿಸಿರುವುದಕ್ಕೆ ದಾಖಲೆ ಇದೆ. ಆದರೆ, ಇಲಾಖೆಗೆ ಹಿಂತಿರುಗಿಸಿರುವುದಕ್ಕೆ ಯಾವುದೇ ದಾಖಲೆ ಇಲ್ಲ ಎಂದು ಹೇಳಲಾಗಿದೆ.
ಕಡತ ಈಗಲೂ ಹುಡುಕುತ್ತಿದ್ದು, ಲಭ್ಯವಾಗಿಲ್ಲ. ಕಡತ ನಾಪತ್ತೆಯಾಗಿದೆಯೋ? ಇಲ್ಲವೋ? ಎಂಬ ಮಾಹಿತಿ ಇಲ್ಲ ಎಂಬುದಾಗಿ ಇಲಾಖೆ ಮೂಲಗಳು ಹೇಳುತ್ತಿವೆ. ಪ್ರಸ್ತುತ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ಕಾರಣ ಕಡತದ ಅಗತ್ಯತೆ ಇದೆ. ಆದರೆ, ಇದೀಗ ಕಡತ ಇಲ್ಲದಿರುವುದು ಹಲವು ಅನುಮಾಗಳಿಗೆ ಎಡೆಮಾಡಿಕೊಟ್ಟಿದೆ.