ಭಾರತದಲ್ಲೇ ಅತ್ಯಂತ ಶ್ರೇಷ್ಠ, ಪ್ರತಿಷ್ಠಿತ ವಿಶ್ವವಿದ್ಯಾಲಯ ಎಂದು ಹೇಳಿಕೊಳ್ಳುವ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ ಮಂಗಳವಾರ ನಡೆದ 23 ನೇ ಘಟಿಕೋತ್ಸವ ಅವ್ಯವಸ್ಥೆಯ ತಾಣವಾಯಿತು. ಗಣ್ಯ ಮಾನ್ಯರಿಗೆ ಊಟ-ಉಪಹಾರ ನೀಡುವಲ್ಲಿಯೇ ಎಂದಿನಂತೆ ಅತ್ಯಾಸಕ್ತಿ ವಹಿಸಿದ್ದ ವಿಟಿಯು ರಾಂಕ್ ಹಾಗೂ ಪದಕ ವಿಜೇತ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಮರೆಯಿತು. ಅವರ ಭೋಜನ ವ್ಯವಸ್ಥೆ ಬಗ್ಗೆ ಗಮನಹರಿಸಲಿಲ್ಲ. ಭೋಜನ ವ್ಯವಸ್ಥೆಯಲ್ಲಿ ತೀರಾ ಅವ್ಯವಸ್ಥೆ ಕಂಡು ಬಂತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಇದ್ದು ಘಟಿಕೋತ್ಸವ ವೀಕ್ಷಿಸಿದ್ದ ಇವೆರೆಲ್ಲ ಚಡಪಡಿಸಿದರು.
ಜನ ಜೀವಾಳ ಸರ್ಚ್ ಲೈಟ್ ಬೆಳಗಾವಿ : ಭಾರತದಲ್ಲೇ ಅತ್ಯಂತ ಪ್ರತಿಷ್ಠಿತ ಹಾಗೂ ಶ್ರೀಮಂತ ವಿಶ್ವವಿದ್ಯಾಲಯ ಎಂಬ ಖ್ಯಾತಿ ಗಳಿಸಿರುವ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದ 23ನೇ ಘಟಿಕೋತ್ಸವ ಮಂಗಳವಾರ ನಡೆದಿದೆ. ಆದರೆ, ಈ ವರ್ಷದ ಘಟಿಕೋತ್ಸವದ ವ್ಯವಸ್ಥೆ ತೀರಾ ಅವ್ಯವಸ್ಥೆಯಿಂದ ಕೂಡಿದೆ ಎಂಬ ಆರೋಪ ಇದೀಗ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಕರ್ನಾಟಕದ ತಾಂತ್ರಿಕ ಕಾಲೇಜುಗಳ ಮಾತೃ ಸಂಸ್ಥೆ ಎಂದೇ ಗುರುತಿಸಲ್ಪಟ್ಟಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ ಘಟಿಕೋತ್ಸವಕ್ಕೆ ಇಡೀ ಕನ್ನಡ ನಾಡಿನ ಮೂಲೆ ಮೂಲೆಗಳಿಂದ ರಾಂಕ್, ಪದಕ ವಿಜೇತರು ಹಾಗೂ ಅವರ ಪೋಷಕರು ಆಗಮಿಸಿದ್ದರು. ಆದರೆ, ಈ ವರ್ಷ ನಡೆದ ಘಟಿಕೋತ್ಸವ ವಿದ್ಯಾರ್ಥಿಗಳು ಮತ್ತು ಪೋಷಕರ ಅಸಮಾಧಾನಕ್ಕೆ ಕಾರಣವಾಯಿತು. ಅದರಲ್ಲೂ ಊಟದ ವ್ಯವಸ್ಥೆ ತೀರಾ ಕಳಪೆಯಾಗಿತ್ತು. ಘಟಿಕೋತ್ಸವ ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ಶ್ರೇಷ್ಠ ಕ್ಷಣ. ಜೀವನದಲ್ಲಿ ಮರೆಯಲಾರದ ಅನುಭವ. ಅಂಥ ಶ್ರೇಷ್ಠ ಕ್ಷಣಕ್ಕೆ ಸಾಕ್ಷಿಯಾಗಲು ರಾತ್ರಿಯಿಡೀ ನಿದ್ದೆಗೆಟ್ಟು ಬೆಳಗಾವಿಗೆ ಬಂದಿದ್ದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಪಾಲಿಗೆ ಈ ವರ್ಷದ ಘಟಿಕೋತ್ಸವ ಕೆಂಗಣ್ಣಿಗೆ ಗುರಿಯಾಯಿತು.
ಘಟಿಕೋತ್ಸವ ಮುಗಿಯುವಾಗ ಮಧ್ಯಾಹ್ನ 1:30 ಕಳೆದಿತ್ತು. ಆ ಹೊತ್ತಿಗೆ ಪೋಷಕರು ಹಸಿದು ದಣಿದಿದ್ದರು. ಊಟಕ್ಕೆ ಎಲ್ಲರೂ ಏಕಕಾಲಕ್ಕೆ ತೆರಳಿದ್ದರಿಂದ ಭಾರಿ ಜನಜಂಗುಳಿ ಸೃಷ್ಟಿಯಾಯಿತು.
ಬಹುತೇಕ ಎಲ್ಲಾ ಕೌಂಟರ್ ಗಳಲ್ಲಿ ರಶ್ ರಶ್..ಎನ್ನುವ ಸನ್ನಿವೇಶ ಎದ್ದು ಕಂಡಿತು. ಸುಮಾರು 2000 ಕ್ಕೂ ಅಧಿಕ ಪೋಷಕರು ಹಾಗೂ ವಿದ್ಯಾರ್ಥಿಗಳು ಮುಗಿ ಬಿದ್ದಿದ್ದರಿಂದ ಎಲ್ಲೆಡೆ ರಶ್ ಕಂಡು ಬಂತು. ಅರ್ಧ ಅರ್ಧ ಚಪಾತಿ ವಿತರಿಸಲಾಯಿತು. ಭೋಜನ ವ್ಯವಸ್ಥೆಗೆ ಸರದಿ ಸಾಲಿನ ವ್ಯವಸ್ಥೆ ಮಾಡಿದ್ದರೆ ಇಷ್ಟೊಂದು ಗೊಂದಲಮಯ ಏರ್ಪಡುತ್ತಿರಲಿಲ್ಲ. ಆದರೆ, ಇದುವರೆಗೆ 23 ಸಲ ವಾರ್ಷಿಕ ಘಟಿಕೋತ್ಸವ ನಡೆಸಿದ ಅಪಾರ ಅನುಭವ ಇದ್ದರೂ ಮಾತ್ರ ವಿಟಿಯು ಇದೇ ಮೊದಲ ಬಾರಿಗೆ ಘಟಿಕೋತ್ಸವ ಆಯೋಜನೆ ಮಾಡಿದಂತೆ ಕಂಡುಬಂತು. ವಿಶ್ವವಿದ್ಯಾಲಯದ ಕ್ಯಾಂಟೀನ್ ಮಂಗಳವಾರ ಬಂದ್ ಆಗಿತ್ತು. ಕ್ಯಾಂಟೀನ್ ಬಂದ್ ಆಗಿರದೆ ಇದ್ದರೆ ಹಣ ತೆತ್ತಾದರೂ ಹೋಗಿ ಊಟ-ಉಪಹಾರ ಮಾಡಬಹುದಾಗಿತ್ತು. ಅದನ್ನು ಸಹಾ ಬಂದ್ ಇಟ್ಟಿದ್ದರಿಂದ ಜನ ಇನ್ನಷ್ಟು ಪರದಾಡುವಂತಾಯಿತು.
ಕೊನೆಗೂ ಇವರೆಲ್ಲರೂ ಬೆಳಗಾವಿ ಮಹಾನಗರಕ್ಕೆ ಆಗಮಿಸಿ ಊಟ-ಉಪಹಾರ ಮಾಡಿ ಹಸಿವು ತಣಿಸಿಕೊಂಡರು.
ಸಾರಿಗೆ ಅವ್ಯವಸ್ಥೆ :
ವಿದ್ಯಾರ್ಥಿಗಳನ್ನು ಕರೆತರಲು ಬೆಳಗ್ಗೆ ವಿಶ್ವವಿದ್ಯಾಲಯದ ಬಸ್ಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಘಟಿಕೋತ್ಸವ ಮುಗಿದ ನಂತರ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಾಪಸ್ ಬೆಳಗಾವಿ ಮಹಾನಗರಕ್ಕೆ ತೆರಳಲು ಸೂಕ್ತ ಸಾರಿಗೆ ವ್ಯವಸ್ಥೆ ಮಾಡದೇ ಇದ್ದರಿಂದ ಎಲ್ಲರೂ ತೊಂದರೆ ಅನುಭವಿಸುವಂತಾಯಿತು. ಬಹುತೇಕರು ಮುಖ್ಯ ಹೆದ್ದಾರಿ ವರೆಗೂ ನಡೆದುಕೊಂಡು ಬಂದು ಬೆಳಗಾವಿಗೆ ಆಗಮಿಸಿದರು.
ಜೊತೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಈ ಬಾರಿ ಮಳೆಗಾಲದಲ್ಲಿ ಘಟಿಕೋತ್ಸವ ನಡೆಸಿದ್ದರಿಂದ ಜನ ತೀವ್ರ ತೊಂದರೆ ಅನುಭವಿಸಿದರು. ಊಟ ಸೇರಿದಂತೆ ಕೆಲ ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟ ಅನುಭವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಘಟಿಕೋತ್ಸವ ಕಹಿ ಅನುಭವವನ್ನು ನೀಡಿತು.