ಬೆಂಗಳೂರು : ನ್ಯಾಯಾಲಯದ ಕಲಾಪದ ಕೆಲವು ವಿಡಿಯೊಗಳು ವೈರಲ್ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್ ಪೂರ್ವಾನುಮತಿ ಪಡೆಯದೇ ವಿಡಿಯೋ ರೆಕಾರ್ಡಿಂಗ್, ಹಂಚಿಕೆ ಮಾಡದಂತೆ ವೀಕ್ಷಕರಿಗೆ ಎಚ್ಚರಿಸಿ ಲೈವ್ ಸ್ಟ್ರೀಮಿಂಗ್ಗೂ ಮುನ್ನ ಸಂದೇಶ ಹಾಕಲಾರಂಭಿಸಿದೆ.
ಕರ್ನಾಟಕ ಹೈಕೋರ್ಟ್ 2022ರ ಜನವರಿ 1ರಿಂದ ಕರ್ನಾಟಕ ನ್ಯಾಯಾಲಯ ಕಲಾಪಗಳ ನೇರಪ್ರಸಾರ (ಲೈವ್ಸ್ಟ್ರೀಮ್) ಮತ್ತು ರೆಕಾರ್ಡಿಂಗ್ ನಿಯಮಗಳು 2021 ಅನ್ನು ಜಾರಿಗೊಳಿಸಿದೆ. ಇದರಲ್ಲಿ ಲೈವ್ ಸ್ಟ್ರೀಮಿಂಗ್ ಹಾಗೂ ರೆಕಾರ್ಡಿಂಗ್ ನಿಯಮಗಳನ್ನು ಅಡಕಗೊಳಿಸಲಾಗಿದೆ.
ಈ ಸಂಬಂಧದ ನೋಟಿಸ್ಅನ್ನು ಪ್ರತಿಯೊಂದು ಕೋರ್ಟ್ ಹಾಲ್ಗಳ ವಿಡಿಯೊ ಕಾನ್ಫರೆನ್ಸ್ ಪರದೆಯ ಮೇಲೆ ಕಲಾಪ ಆರಂಭಕ್ಕೂ ಮುನ್ನ ಮತ್ತು ಮಧ್ಯಾಹ್ನ ಭೋಜನದ ವೇಳೆಯಲ್ಲಿ ಪ್ರಸಾರ ಮಾಡಲಾಗಿದೆ.
ಅನುಮತಿ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆ ಹೊರತುಪಡಿಸಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ (ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳು) ಕಲಾಪದ ಲೈವ್ ಸ್ಟ್ರೀಮಿಂಗ್ ಅಥವಾ ಹೈಕೋರ್ಟ್ ಯೂಟ್ಯೂಬ್ ಚಾನಲ್ನಲ್ಲಿನ ವಿಡಿಯೊಗಳನ್ನು ರೆಕಾರ್ಡ್ ಮಾಡುವುದಾಗಲಿ, ಪ್ರಸರಣ ಮಾಡುವುದಾಗಲಿ ಮಾಡುವಂತಿಲ್ಲ ಎಂದು ಸಂದೇಶದಲ್ಲಿ ಹೇಳಲಾಗಿದೆ. ಈ ನಿರ್ಬಂಧವು ಎಲ್ಲಾ ಸಂದೇಶ ಅಪ್ಲಿಕೇಶನ್ಗಳಿಗೂ ಅನ್ವಯಿಸಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪೂರ್ವಾನುಮತಿ ಪಡೆಯದೇ ಲೈವ್ ಸ್ಟ್ರೀಮಿಂಗ್ನ ಮರು ಪ್ರಸಾರ, ವರ್ಗಾವಣೆ, ಅಪ್ಲೋಡ್ ಮಾಡುವುದು, ಪೋಸ್ಟ್ ಮಾಡುವುದು, ಮಾರ್ಪಾಡು ಮಾಡುವುದು ಪ್ರಸಾರ ಅಥವಾ ಮರು ಪ್ರಸಾರವನ್ನು ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯದ ಕಲಾಪವನ್ನು ರೆಕಾರ್ಡ್ ಮಾಡಲು ಅಥವಾ ಅದರ ನಿರೂಪಣೆಗೆ ಯಾವುದೇ ವ್ಯಕ್ತಿಗೆ ಅನುಮತಿ ನೀಡಲಾಗಿಲ್ಲ. ನ್ಯಾಯಾಲಯದ ನಿಯಮ ಉಲ್ಲಂಘಿಸಿದ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಾನೂನಿನಡಿ ಕ್ರಮಕೈಗೊಳ್ಳಲಾಗುತ್ತದೆ. ನ್ಯಾಯಾಲಯದ ಕಲಾಪದ ರೆಕಾರ್ಡಿಂಗ್ ಮತ್ತು ಆರ್ಕೈವ್ ದತ್ತಾಂಶದ ಮೇಲೆ ನ್ಯಾಯಾಲಯಕ್ಕೆ ವಿಶೇಷ ಹಕ್ಕುಸ್ವಾಮ್ಯವಿದೆ ಎಂದು ನೋಟಿಸ್ನಲ್ಲಿ ಹೇಳಲಾಗಿದೆ.
ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಗೋರಿಪಾಳ್ಯವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ ಮತ್ತು ಮಹಿಳಾ ವಕೀಲೆಯೊಬ್ಬರ ಜೊತೆ ಲಘುವಾಗಿ ವರ್ತಿಸಿದ ವಿಡಿಯೋ ಕ್ಲಿಪ್ಗಳು ರಾಷ್ಟ್ರಾದ್ಯಂತ ಚರ್ಚೆಗೀಡಾದ ಬೆನ್ನಿಗೇ ನ್ಯಾಯಾಲಯ ನೋಟಿಸ್ ಮೂಲಕ ಎಚ್ಚರಿಕೆ ನೀಡಲಾರಂಭಿಸಿದೆ.
ಬೆಳಗಾವಿ ಪ್ರಕರಣವೂ ಈಗ ಡಿಲೀಟ್ : ನ್ಯಾಯಾಲಯದ ಕಲಾಪಗಳ ನೇರ ಪ್ರಸಾರ ಪ್ರಕರಣದಲ್ಲಿ ಇದೀಗ ಬೆಳಗಾವಿ ಪ್ರಕರಣವು ತಳುಕು ಹಾಕಿಕೊಂಡಿದೆ. ಬೆಳಗಾವಿ ಮಹಾನಗರ ಪಾಲಿಕೆ ನಗರದ ಎಸ್ ಪಿ ಎಮ್ ರಸ್ತೆಯ 20 ಕೋಟಿ ರೂಪಾಯಿ ಭೂ ವಿವಾದದ ತಗಾದೆಗೆ ಸಂಬಂಧಿಸಿ ನ್ಯಾಯಾಲಯ ಪಾಲಿಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಇದು ಬೆಳಗಾವಿಯ ವಿವಿಧ ಯೂಟ್ಯೂಬ್ ಚಾನೆಲ್ ಗಳು ಬಿತ್ತರಿಸಿದ್ದರಿಂದ ವ್ಯಾಪಕ ಪ್ರಮಾಣದಲ್ಲಿ wives ಪಡೆದುಕೊಂಡಿತ್ತು. ಆದರೆ, ಶುಕ್ರವಾರದಂದು ಏಕಾಏಕಿ ಈ ವಿಡಿಯೋಗಳೆಲ್ಲ ಡಿಲೀಟ್ ಆಗಿವೆ. ಹೈಕೋರ್ಟ್ ಸೂಚನೆ ಬೆನ್ನಿಗೆ ಬೆಳಗಾವಿ ಮಹಾನಗರ ಪಾಲಿಕೆಯ ಭೂವಿವಾದ ಪ್ರಕರಣದ ಎಲ್ಲಾ ವಿಡಿಯೋ ಡಿಲೀಟ್ ಆಗಿರುವುದು ಯಾಕೆ ಎಂಬ ಪ್ರಶ್ನೆ ಮೂಡಿದ್ದವು. ಇದೀಗ ಕೊನೆಗೂ ಉತ್ತರ ಸಿಕ್ಕಂತಾಗಿದೆ.