ಬೆಳಗಾವಿ :
ಬೆಂಡಿಗೇರಿ ಗ್ರಾಮದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಈ ಬಗ್ಗೆ ಬುಧವಾರ ಗ್ರಾಮಸ್ಥರು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಶಾಲೆಯ ಸಮಸ್ಯೆಯನ್ನು ಮನವರಿಕೆ ಮಾಡಿದರು.
ಬೆಳಗಾವಿ ತಾಲೂಕಿನಲ್ಲಿರುವ ಬೆಂಡಿಗೇರಿ ಗ್ರಾಮ ಪ್ರಾಚೀನ ಕಾಲದಿಂದಲೂ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಬೆಳಗಾವಿ ನಗರದಿಂದ 30 ಕಿಮೀ ಅಂತರದಲ್ಲಿರುವ ಈ ಗ್ರಾಮದಲ್ಲಿ ಅಂದಾಜು 5000 ಜನಸಂಖ್ಯೆ ಇದೆ. ಗ್ರಾಮದಲ್ಲಿ ಸರಕಾರಿ ಶಾಲಾ ಶಿಕ್ಷಣ ಕೇಂದ್ರವು 1883 ರಲ್ಲೇ ಪ್ರಾರಂಭವಾಯಿತು.
ಪ್ರಾರಂಭದಲ್ಲಿ ಮಠಗಳು ಹಾಗೂ ಮಂದಿರಗಳಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ನಂತರ ಗ್ರಾಮಸ್ಥರ ಕಾಳಜಿಯಿಂದ 1970 ನೇ ಇಸವಿಯಲ್ಲಿ ಸರಕಾರಿ ಸ್ವಂತ ಕಟ್ಟಡ ನಿರ್ಮಾಣವಾಯಿತು. ಅಲ್ಲಿಂದಲೂ 1 ರಿಂದ 7 ನೇ ತರಗತಿವರೆಗೆ ಪ್ರತಿ ವರ್ಷ 600 ಕ್ಕೂ ಹೆಚ್ಚು ಮಕ್ಕಳು ಅಧ್ಯಯನ ಪಡೆಯುತ್ತಿದ್ದರು. ಮಾದರಿ ಶಾಲೆಯ ಹಣೆಪಟ್ಟಿಯೊಂದಿಗೆ ಹಿರೇ ಬಾಗೇವಾಡಿ ವಲಯದ ಸುಮಾರು 40 ಶಾಲೆಗಳು ನಮ್ಮೂರ ಶಾಲೆಯ ಅಧೀನದಲ್ಲಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಶಾಲೆಯ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ನಮ್ಮೂರ ಸರಕಾರಿ ಶಾಲೆಯ ಕಟ್ಟಡ ಸ್ಥಾಪನೆಯಾಗಿ ಆಗಲೇ 50 ವರ್ಷಗಳು ಗತಿಸಿವೆ.
ಆದ್ದರಿಂದ ಬಹುತೇಕ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ತನ್ನ ಆಕರ್ಷಣೆಯನ್ನು ಕಳೆದುಕೊಂಡು ಕಳೆಗುಂದಿದೆ. ಇದು ಗ್ರಾಮದಲ್ಲಿನ ಪಾಲಕರ ಹಾಗೂ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡಿದ್ದರಿಂದ, ಮಕ್ಕಳ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ.
ಮಕ್ಕಳು ಮಳೆಗಾಲದ ಸಮಯದಲ್ಲಿ ತಮ್ಮ ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡೇ ಕೊಠಡಿಗಳಲ್ಲಿ ಕೂತುಕೊಳ್ಳಬೇಕಾದ ಸ್ಥಿತಿ ಉಂಟಾಗಿದೆ. ಪ್ರವಾಹ ಪೀಡಿತ ಯೋಜನೆಯಲ್ಲಿ ಶಾಲೆಯ ಮೇಲ್ಛಾವಣಿಯನ್ನು ತಗಡಿನ ಶೀಟ್ಗಳಿಂದ ತಾತ್ಕಾಲಿಕವಾಗಿ ಸರಿಪಡಿಸಲಾಗಿದೆ. ಆದರೂ ಅದೂ ಸಹ ಮಕ್ಕಳ ಏಕಾಗ್ರತೆಗೆ ಭಂಗ ತರುತ್ತಿದೆ. ಏಕೆಂದರೆ ಮಳೆ ಹನಿಗಳ ಸಪ್ಪಳವು ತರಗತಿಯಲ್ಲಿ ಪಾಠ ಬೋಧನೆಗೆ ತಡೆಯನ್ನು ನೀಡುತ್ತಿದೆ. ಇವೆಲ್ಲಾ ಕಾರಣಗಳಿಂದ ಮಕ್ಕಳನ್ನು ಪಾಲಕರು ಬೇರೆಡೆ ದಾಖಲು ಮಾಡಿದ್ದಾರೆ. ಸದ್ಯ ಶಾಲೆಯಲ್ಲಿ 1 ರಿಂದ 7 ನೇ ತರಗತಿವರೆಗೆ ಒಟ್ಟು 437 ಮಕ್ಕಳು ಅಧ್ಯಯನ ಮಾಡುತ್ತಿದ್ದು ಮಕ್ಕಳ ಅಧ್ಯಯನಕ್ಕೆ ಯೋಗ್ಯ ಕೊಠಡಿಗಳು ಇಲ್ಲವಾಗಿವೆ.
ಆದ ಕಾರಣ ಮಕ್ಕಳ ಅಧ್ಯಯನಕ್ಕೆ 10 ಸುಸಜ್ಜಿತ ಕೊಠಡಿಗಳ ಅವಶ್ಯಕತೆ ಇದೆ. ಅದರೊಂದಿಗೆ ಬದಲಾದ ಶೈಕ್ಷಣಿಕ ಯುಗಕ್ಕೆ ಮಕ್ಕಳನ್ನು ಸಜ್ಜುಗೊಳಿಸಲು ವ್ಯವಸ್ಥಿತವಾದ ಗ್ರಂಥಾಲಯ, ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯ, ಗಣಕಯಂತ್ರ ಕೊಠಡಿ, ಸ್ಮಾರ್ಟ್ ಹಾಗೂ ಡಿಜಿಟಲ್ ಕೊಠಡಿಗಳ ಅವಶ್ಯಕತೆ ಇದೆ. ಇದರೊಂದಿಗೆ ಮಕ್ಕಳ ಸಂಖ್ಯೆಗನುಗುಣವಾಗಿ ಬಾಲಕ – ಬಾಲಕಿಯರಿಗೆ ಪ್ರತ್ಯೇಕವಾದ ಹೈಟೆಕ್ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
140 ವರ್ಷಗಳ ಇತಿಹಾಸವನ್ನು ಹೊಂದಿರುವ ಬೆಂಡಿಗೇರಿ ಗ್ರಾಮದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯನ್ನು ರಾಜ್ಯದಲ್ಲಿ ಮಾದರಿಯಾಗಿ ಸಜ್ಜುಗೊಳಿಸಲು ತಾವು ಅಗತ್ಯವಾದ ಅನುದಾನವನ್ನು ಮಂಜೂರಿ ಮಾಡಿಕೊಡಲು ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರು ವಿನಂತಿಸಿದರು.
ಅಡಿವೆಪ್ಪ ಬೆಂಡಿಗೇರಿ, ಶೇಖರ ಮಾಳಾಯಿ, ರವೀಂದ್ರ ಮೆಳೇದ, ಸಿದ್ದಣ್ಣ ಹಾವಣ್ಣವರ,
ಸೋಮಪ್ಪ ಶೀಗಿಹಳ್ಳಿ, ಶಿವಾನಂದ ಮಾಳಾಯಿ, ಭೀಮನಗೌಡ ಮೆಳೇದ,
ಮಲ್ಲೇಶಿ ಕಾದ್ರೊಳ್ಳಿ, ಕೃಷ್ಣ ಭಗತ್ , ಬ್ರಹ್ಮ ದೊಡಮನಿ,
ಮಹಾಂತೇಶ ಉಪ್ಪಿನ,
ಸಂಗಪ್ಪ ಕುಡಚಿ, ಶಿವಾನಂದ ಚಂಡು
ಇನ್ನೂ ಹಲವರು ಉಪಸ್ಥಿತರಿದ್ದರು.