ಜನಜೀವಾಳ ಪತ್ರಿಕೆ ಇಂದು 77 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. 77 ಅಂದರೆ ಪ್ರತಿಯೊಬ್ಬರ ಪಾಲಿಗೆ ಅತ್ಯಂತ ಅದೃಷ್ಟಶಾಲಿ. ಇದರಲ್ಲಿ ನಿಮ್ಮ ಜನಜೀವಾಳ ಈ ವರ್ಷ ಅದೃಷ್ಟಶಾಲಿ ವರ್ಷಕ್ಕೆ ಕಾಲಿಟ್ಟಿದೆ. ಅಪರೂಪದ ಸಂಖ್ಯೆ ಈ ವರ್ಷ ನಿಮ್ಮ ಪತ್ರಿಕೆಗೆ ಕಾಲಿಟ್ಟಿರುವುದು ಅತ್ಯಂತ ಖುಷಿಯ ಸಂಗತಿ.
ಕನ್ನಡ ಪತ್ರಿಕೋದ್ಯಮ ಸೇರಿದಂತೆ ಇಡೀ ಜಗತ್ತಿನ ಪತ್ರಿಕೋದ್ಯಮ ಕಳೆದೊಂದು ದಶಕದಿಂದ ಬಾರಿ ಬದಲಾವಣೆಗಳಿಗೆ ತೆರೆದುಕೊಂಡಿದೆ. ಇದಕ್ಕೆ ನಿಮ್ಮ ಜನಜೀವಾಳ ಹೊರತಾಗಿಲ್ಲ. ಕಳೆದೊಂದು ದಶಕಗಳಿಂದ ಅದರಲ್ಲೂ ಕಳೆದ ಆರು ವರ್ಷಗಳಿಂದ ಜನಜೀವಾಳ ತ್ವರಿತಗತಿಯಲ್ಲಿ ಬ್ರೇಕಿಂಗ್ ಸುದ್ದಿಗಳನ್ನು ಕನ್ನಡ ಕುಲಕೋಟಿಗೆ ನೀಡುವ ಮೂಲಕ ಅತ್ಯಂತ ಆಪ್ತವಾಗಿದೆ. ಬ್ರೇಕಿಂಗ್ ಸುದ್ದಿಯಲ್ಲಿ ನಮಗೆ ಇನ್ಯಾರು ಸರಿಸಾಟಿ ಇಲ್ಲದಂತೆ ನಾವು ವೇಗವನ್ನು ಕಾಯ್ದುಕೊಂಡಿದ್ದೇವೆ. ಈ ಮೂಲಕ ಇಂದಿನ ಆಧುನಿಕ ಯುವ ಪೀಳಿಗೆ ಜನಜೀವಾಳವನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿರುವುದು ನಮ್ಮ ಪಾಲಿಗೆ ಅತ್ಯಂತ ಖುಷಿಯ ಸಂಗತಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಇಂದು ಬ್ರೇಕಿಂಗ್ ಸುದ್ದಿಗಳದ್ದೇ ಅಬ್ಬರ. ಅಂತಹ ಸುದ್ದಿಗಳನ್ನು ಕ್ಷಿಪ್ರಗತಿಯಲ್ಲಿ ನೀಡುವ ಮೂಲಕ ಜನಜೀವಾಳ ನಾಡಿನ ಜನರ ಮನದಲ್ಲಿ ಛಾಪೊತ್ತಿದೆ.
ಕತ್ತಲು ಹರಿಯುವ ಮೊದಲೇ ಆಗಿರಲಿ, ಮಧ್ಯರಾತ್ರಿಯೇ ಆಗಿರಲಿ. ವೇಗದ ಸುದ್ದಿಗಳನ್ನು ನೀಡುವ ಮೂಲಕ ನಾವು ಎಲ್ಲರ ಮನ ಗೆದ್ದಿದ್ದೇವೆ ಎಂದು ಬೆನ್ನು ತಟ್ಟಿ ಹೇಳಬೇಕಾಗಿಲ್ಲ. ಓದುಗರು ಆಗಾಗ ವ್ಯಕ್ತಪಡಿಸುವ ಶಹಬ್ಬಾಸ್ ಗಿರಿಯೇ ನಮ್ಮ ಪಾಲಿಗೆ ಅತ್ಯಂತ ದೊಡ್ಡ ಬಹುಮಾನ.
ಜನಜೀವಾಳ ಇಂದಿನ ಆಧುನಿಕ ಕಾಲದ ವಾಣಿಜ್ಯೋದ್ಯಮಕ್ಕೆ ಹುಟ್ಟಿಕೊಂಡ ಪತ್ರಿಕೆಯಲ್ಲ, ಬದಲಾಗಿ ಸಮಾಜದಲ್ಲಿ ಪರಿವರ್ತನೆ, ಜನತೆಯಲ್ಲಿ ಜಾಗೃತಿ ಮೂಡಿಸುವ ಮಹತ್ತರ ಧ್ಯೇಯೋದ್ದೇಶದಿಂದ ಹುಟ್ಟಿಕೊಂಡ ಪತ್ರಿಕೆ ನಮ್ಮದು. ಪತ್ರಿಕೆಯ ಸಂಸ್ಥಾಪಕರಾದ ಬ.ಮ.ಏಳುಕೋಟಿ, ನಿಕಟಪೂರ್ವ ಸಂಪಾದಕರಾದ ಜನಜೀವಾಳ ಏಳುಕೋಟಿಯವರು ಹಾಕಿಕೊಟ್ಟ ನೇರ-ನಿರ್ಭಿತ ಪತ್ರಿಕೋದ್ಯಮದ ಆಶಯಕ್ಕೆ ತಕ್ಕಂತೆ ನಾವು ಸುದ್ದಿ ನೀಡುತ್ತಿದ್ದು, ನೈಜ ಪತ್ರಿಕೋದ್ಯಮದ ಹಾದಿಯಲ್ಲಿ ಮುನ್ನುಗುತ್ತಿದ್ದೇವೆ.
ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವಾಗ ಹಲವು ಸವಾಲುಗಳನ್ನು ಎದುರಿಸಿದ್ದೇವೆ. ಆದರೆ, ನಮ್ಮ ಸಿದ್ದಾಂತ-ಬದ್ದತೆಯ ಪತ್ರಿಕೋದ್ಯಮದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಸಾಗುತ್ತಿರುವುದರಿಂದ ಎಲ್ಲರೂ ನಮ್ಮ ಪತ್ರಿಕೆಯನ್ನು ಮನಸ್ಸಾರೆ ಮೆಚ್ಚುತ್ತಿದ್ದಾರೆ.
ಎಷ್ಟೇ ಒತ್ತಡಗಳು ಎದುರಾಗಲಿ, ಎಷ್ಟೇ ಸವಾಲುಗಳು ಎದುರಾಗಲಿ, ಎಷ್ಟೇ ದೊಡ್ಡ ರಾಜಕಾರಣಿ, ಪ್ರಭಾವಿ ವ್ಯಕ್ತಿಯೇ ಆಗಿರಲಿ, ಆತ ಮಾಡುವ ತಪ್ಪನ್ನು ತಪ್ಪು ಎಂದು ಹೇಳುವ ಎದೆಗಾರಿಕೆ ಇರುವ ಅಪರೂಪದ ಪತ್ರಿಕೆ ನಮ್ಮದು. ಅಪರಾಧ ಲೋಕದ ಕಾಣದ ಕೈಗಳಿಗೆ ಕೊಳ ಕೊಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ.
ಜನಜೀವಾಳದಂತೆ ಭಾರತೀಯ ರಾಜಕಾರಣಕ್ಕೂ ಈ ವರ್ಷ ಅತ್ಯಂತ ಮಹತ್ವದ ವರ್ಷವಾಗಿದೆ. ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಈಗ ರಂಗೇರಿದೆ. ಚುನಾವಣೆಯ ರಾಜಕಾರಣದಲ್ಲಿ ಏನಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ದಿಸೆಯಲ್ಲಿ ಅತ್ಯಂತ ರೋಚಕ ಸುದ್ದಿಗಳು, ವರದಿಗಳನ್ನು ನೀಡುವ ಮೂಲಕ ನಾವು ಜನರ ಮನ ಗೆದ್ದಿದ್ದೇವೆ. ಚುನಾವಣೆಯ ಕೌತುಕ ರಹಸ್ಯವನ್ನು ಸದಾ ತೆರೆದಿಟ್ಟು ಓದುಗರ ಓದುವ ಹಸಿವನ್ನು ಹಿಂಗಿಸುವ ಕೆಲಸವನ್ನು ನಾವು ಮಾಡಲಿದ್ದೇವೆ.
ಕನ್ನಡ ಪತ್ರಿಕೋದ್ಯಮದಲ್ಲಿ ಹಲವಾರು ಬದಲಾವಣೆಗಳು ಕಾಲಕಾಲಕ್ಕೆ ನಡೆದಿದ್ದು ಕಾಲನ ಓಟಕ್ಕೆ ಹಾಗೂ ಸವಾಲು ಎದುರಿಸಲು ಸಾಧ್ಯವಾಗದೆ ಸಾಕಷ್ಟು ಪತ್ರಿಕೆಗಳು ನಾಮಾವಶೇಷಗೊಂಡಿವೆ. ಆದರೆ, ಜನಜೀವಾಳ ಮಾತ್ರ ಅಂತಹ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ನಿಂತು ಹೆಮ್ಮರವಾಗಿ ಬೆಳೆದಿದೆ.
ಇನ್ನು 23 ವರ್ಷ ಕಳೆದರೆ ಜನಜೀವಾಳ ಶತಕ ಬಾರಿಸಲಿದೆ. ಆ ದಿಕ್ಕಿನಲ್ಲಿ ನಾವು ಸಾಗುತ್ತಿದ್ದು ನಮ್ಮದೇ ಆದ ಹಲವು ವಿಚಾರಗಳು, ಕನಸುಗಳು ಇದ್ದು ಅವುಗಳನ್ನು ಕಾಲಕಾಲಕ್ಕೆ ಸಾಕಾರಗೊಳಿಸುವ ಕನಸು ಕಾಣುತ್ತಿದ್ದೇವೆ. ಇದಕ್ಕೆ ಓದುಗ ಮಹಾಪ್ರಭುಗಳಾದ ತಾವೆಲ್ಲರೂ ಕೈಜೋಡಿಸುವ ಜೊತೆಗೆ ಬೆಂಬಲ ನೀಡಬೇಕು ಎನ್ನುವುದು ನಮ್ಮ ಸದಾಶಯವಾಗಿದೆ.
ಕನ್ನಡ ಪತ್ರಿಕೋದ್ಯಮದ ಹಿರಿಯಣ್ಣ ನಿಮ್ಮ ಜನಜೀವಾಳ....: ಜನಜೀವಾಳ ಪತ್ರಿಕೆ ಕನ್ನಡ ಪತ್ರಿಕೋದ್ಯಮದ ಹಿರಿಯಣ್ಣನಂತಿದೆ. ಕಳೆದ ಏಳೂವರೆ ದಶಕಗಳಲ್ಲಿ ಜನಜೀವಾಳ ಸಾಕಷ್ಟು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸಿಯು ಮುನ್ನುಗ್ಗುತ್ತಿರುವುದು ಸಣ್ಣ ಮಾತಲ್ಲ. ಪತ್ರಿಕೆಯ ಸಂಪಾದಕರಾದ ಬ.ಮ. ಏಳುಕೋಟಿ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ಬಸವವಾದ, ಸಮಾಜವಾದದ ಕಡೆ ಆಕರ್ಷಿತರಾಗಿದ್ದರು. ಅವರು ಅನುಭವಿಸಿದ ಬಡತನ ಮತ್ತು ಭಾರತದ ಪರಿಸ್ಥಿತಿಗೆ ಈ ಎರಡು ಸಿದ್ಧಾಂತಗಳು ಅವಶ್ಯವೆಂದು ಕಂಡುಕೊಂಡಿದ್ದರು. ಅವರನ್ನು ಎಷ್ಟರ ಮಟ್ಟಿಗೆ ಈ ಸಿದ್ದಾಂತಗಳು ಆವರಿಸಿದೆ ಎಂಬುದನ್ನು ಜನಜೀವಾಳದಲ್ಲಿ ಬರೆದ ಲೇಖನಗಳೇ ಸಾಕ್ಷಿಯಾಗಬಹುದು.
ಬ.ಮ. ಏಳುಕೋಟಿ ಪ್ರಯೋಗಶೀಲ ಮನಸ್ಸಿನವರು. ಅಂದಿನ ಕಾಲದಲ್ಲೇ ಹೊಸ ಹೊಸ ಪ್ರಯೋಗಗಳನ್ನು ಮಾಡುವಲ್ಲಿ ಅವರು ಕನಸು ಕಂಡಿದ್ದರು. ಸತ್ಯದ ಅನ್ವೇಷಣೆ ಅವರ ಪಾಲಿಗೆ ಪ್ರಯೋಗಶಾಲೆ ಆಗಿತ್ತು. ಕರ್ನಾಟಕದ ಬಹು ದೊಡ್ಡ ಲಿಂಗಾಯತ ಸಮಾಜದ ಲೋಪ ದೋಷಗಳನ್ನು ಎತ್ತಿ ತೋರಿಸಿ ಬಸವ ತತ್ವಗಳ ನೈಜವಾದ ಪ್ರಸಾರ ಆಗಬೇಕು ಎಂದು ಸದಾಶಯ ವ್ಯಕ್ತಪಡಿಸುತ್ತಿದ್ದರು.
ಕನ್ನಡ ನಾಡಿನ ಹಿರಿಯ ಪತ್ರಕರ್ತರಾದ ಡಾ. ಪಾಟೀಲ ಪುಟ್ಟಪ್ಪ ಹೇಳುವಂತೆ ಜನಜೀವಾಳ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿದ್ದ ಬ.ಮ.ಏಳುಕೋಟಿ ಪತ್ರಕರ್ತರಿಗೆ ಮಾದರಿಯಾದವರು. ಅವರು ಲಾಭ-ಹಾನಿಗಳ ಲೆಕ್ಕ ಹಾಕಿದವರಲ್ಲ, ಜನರನ್ನು ಮನುಷ್ಯರನ್ನಾಗಿ ಮಾಡುವ ವಿಚಾರಗಳ ವ್ಯವಹಾರವನ್ನು ಮಾಡಿಕೊಂಡು ಬಂದವರು. ಏಳುಕೋಟಿಯವರ ಪತ್ರಿಕೋದ್ಯಮ ಅವರ ಜೀವನದಂತೆ ಪರಿಶುದ್ಧವಾಗಿದೆ. ಅವರು ಆದರ್ಶವಾದಿಗಳಲ್ಲೇ ಆದರ್ಶವಾದಿಗಳು ಎನಿಸಿಕೊಂಡಿದ್ದರು. ಏಳುಕೋಟಿ ಅವರಂಥ ಪತ್ರಿಕೋದ್ಯಮಗಳು ಇಲ್ಲ. ಆದರೆ, ಪತ್ರಿಕೋದ್ಯಮದಲ್ಲಿ ಸಾಗಬೇಕು ಎನ್ನುವವರಿಗೆ ಏಳುಕೋಟಿ ಅವರು ಮಾರ್ಗದರ್ಶಕರಾಗಿದ್ದಾರೆ ಎಂದು ಪಾಟೀಲ ಪುಟ್ಟಪ್ಪ ನುಡಿದಿರುವುದು ಏಳುಕೋಟಿಯವರ ಆದರ್ಶ ಜೀವನಕ್ಕೆ ಹಿಡಿದ ಕೈಗನ್ನಡಿಯೆನ್ನಬಹುದು.
ಜನಜೀವಾಳದ ಪ್ರಖ್ಯಾತಿ ಕನ್ನಡ ನಾಡಿನಿಂದ ಹಿಡಿದು ಮಹಾರಾಷ್ಟ್ರದ ರಾಜಧಾನಿಯಾಗಿರುವ ಮುಂಬೈ ವರೆಗೂ ಹರಡಿತ್ತು. ಜನಜೀವಾಳದ ಅಭಿಮಾನಿ ಬಳಗ ಮಾಜಿ ಉಪರಾಷ್ಟ್ರಪತಿ ಅವರಿಂದ ಆರಂಭವಾಗಿ ಜನಸಾಮಾನ್ಯರವರೆಗೂ ಇದೆ ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ. ಜನಜೀವಾಳಕ್ಕೆ ಶ್ರೇಷ್ಠ ಭವಿಷ್ಯ ಇದೆ. ಸಂಸ್ಥಾಪಕರು ಹಾಕಿಕೊಟ್ಟ ಭದ್ರಬುನಾದಿ ಹಾಗೂ ಅವರ ತತ್ವಾದರ್ಶಗಳೆ ಜನಜೀವಾಳ ಪಾಲಿಗೆ ನಿತ್ಯನೂತನ. ಹೀಗಾಗಿ ಜನಜೀವಾಳ ಸೂರ್ಯ ಚಂದ್ರರು ಇರುವವರೆಗೂ ಅಜರಾಮರವಾಗಿರುತ್ತದೆ.