ನವದೆಹಲಿ : 2025ರ ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಮ ವರ್ಗದ ವೇತನದಾರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ವಾರ್ಷಿಕ 12 ಲಕ್ಷ ರೂಪಾಯಿ ತನಕ ಆದಾಯಕ್ಕೆ ಇನ್ನು ಮುಂದೆ ಆದಾಯ ತೆರಿಗೆ ಇಲ್ಲ. ಇದು ಹೊಸ ತೆರಿಗೆ ಪದ್ಧತಿಯಲ್ಲಿ ಅನ್ವಯವಾಗಲಿದೆ. ವೇತನದಾರರಿಗೆ 12,75,000 ರೂಪಾಯಿ ತನಕ ಯಾವುದೇ ಆದಾಯ ತೆರಿಗೆ ಕಟ್ಟುವ ಅಗತ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಮುಂದಿನ ವಾರ ಹೊಸ ಆದಾಯ ತೆರಿಗೆ ವಿಧೇಯಕ ಮಂಡನೆಯಾಗಲಿದೆ. ಸರ್ಕಾರ ನೇರ ತೆರಿಗೆ ಪದ್ಧತಿಯನ್ನು ಮತ್ತಷ್ಟು ಸರಳ ಮತ್ತು ಸುಧಾರಣೆ ಮಾಡುವ ಉದ್ದೇಶದಿಂದ ಈ ವಿಧೇಯಕವನ್ನು ತರುತ್ತಿದೆ. ಮಧ್ಯಮ ವರ್ಗದ ತೆರಿಗೆಗಳನ್ನು ಗಣನೀಯವಾಗಿ ಕಡಿಮೆ ಮಾಡುವ ಗುರಿಯೊಂದಿಗೆ ಸರ್ಕಾರವು ಹೊಸ ತೆರಿಗೆ ಶ್ರೇಣಿಗಳನ್ನು ರೂಪಿಸಿದೆ. ಅದರಲ್ಲಿ ಮತ್ತಷ್ಟು ವಿವರಗಳು ತಿಳಿಯಲಿದೆ.
ಪ್ರಸಕ್ತ ತೆರಿಗೆ ದರದ ಶ್ರೇಣಿ ಇಂತಿದೆ
ಶೂನ್ಯದಿಂದ 4 ಲಕ್ಷ ರೂ. – ತೆರಿಗೆ ಇಲ್ಲ
4ಲಕ್ಷ ರೂ.ಗಳಿಂದ 8 ಲಕ್ಷ ರೂ. – 5%
8 ಲಕ್ಷ ರೂ.ಗಳಿಂದ-12 ಲಕ್ಷ ರೂ.-10%
12 ಲಕ್ಷ ರೂ.ಗಳಿಂದ 16 ಲಕ್ಷ ರೂ.-15%
16 ರೂ.ಗಳಿಂದ 20 ಲಕ್ಷ ರೂ.-20%
20 ಲಕ್ಷ ರೂ.ಗಳಿಂದ 24 ಲಕ್ಷ ರೂ.- 30%
ಹೊಸ ತೆರಿಗೆ ಪದ್ಧತಿಯಿಂದ ಆಗುವ ಲಾಭ
ಈ ಹಿಂದಿನ ತೆರಿಗೆ ವ್ಯವಸ್ಥೆಯಲ್ಲಿ 10 ಲಕ್ಷ ರೂ. ವರೆಗೆ ಆದಾಯ ಇರುವವರಿಗೆ 50,000 ರೂ. ತೆರಿಗೆ ವಿಧಿಸಲಾಗುತ್ತಿತ್ತು. ಈ ಬಜೆಟ್ ಘೋಷಣೆ ಮಾಡಿರುವ ಪ್ರಕಾರ ಆದಾಯಕ್ಕೆ ತೆರಿಗೆ ಇಲ್ಲ. ಇದರಿಂದ ವೇತನ ವರ್ಗಕ್ಕೆ 50 ಸಾವಿರ ರೂಪಾಯಿ ಲಾಭ ಆದಂತಾಯಿತು. 12 ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ ಈ ಹಿಂದೆ 80,000 ರೂ. ತೆರಿಗೆ ವಿಧಿಸಲಾಗುತ್ತಿತ್ತು. ಈಗ ತೆರಿಗೆ ಇರುವುದಿಲ್ಲ. ಹೀಗಾಗಿ 80,000 ರೂ. ಉಳಿತಾಯವಾಗಲಿದೆ.
15 ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ ಹಿಂದಿನ ತೆರಿಗೆ ಪದ್ಧತಿಯಲ್ಲಿ 1.40 ಲಕ್ಷ ರೂ. ತೆರಿಗೆ ಇತ್ತು. ಈಗ ಅದು 45,000 ರೂ. ಆಗಿರಲಿದ್ದು 95,000 ರೂ. ಉಳಿತಾಯವಾಗಲಿದೆ. ಹಿಂದಿನ ತೆರಿಗೆ ಪದ್ಧತಿಯಲ್ಲಿ 20 ಲಕ್ಷ ರೂ. ವರೆಗಿನ ಆದಾಯಕ್ಕೆ 2.90 ಲಕ್ಷ ತೆರಿಗೆ ವಿಧಿಸಲಾಗುತ್ತಿತ್ತು. ಈಗ 1.40 ಲಕ್ಷ ತೆರಿಗೆ ವಿಧಿಸಲಾಗುತ್ತದೆ. ಇದರಿಂದ 1.50 ಲಕ್ಷ ರೂ. ಉಳಿತಾಯವಾಗಲಿದೆ.
ಇನ್ನು ಮುಂದೆ 12 ಲಕ್ಷ ರೂ. ತನಕ ಆದಾಯ ಇರುವ ಮಧ್ಯಮ ವರ್ಗದ ವೇತನದಾರರು ಯಾವುದೇ ನೇರ ತೆರಿಗೆ ಕಟ್ಟಬೇಕಾಗಿಲ್ಲ. ತೆರಿಗೆ ಹೊರೆಯನ್ನು ಇಳಿಸಿದ ಪರಿಣಾಮ ಮಧ್ಯಮ ವರ್ಗದ ವೇತನದಾರರಿಗೆ ಕೈಯಲ್ಲಿ ಹಣ ಉಳಿಯಲಿದೆ. ಇದುವರೆಗೆ ಇವರು ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆ ಜಿಎಸ್ಟಿಯನ್ನೂ ಕಟ್ಟಬೇಕಾಗಿರುತ್ತಿತ್ತು.