ಬೆಳಗಾವಿ : ಪ್ರೀತಿ-ಪ್ರೇಮಕ್ಕೆ ಗಡಿ ರೇಖೆಗಳು ಇಲ್ಲ. ಉತ್ತರದ ಬೆಳಗಾವಿಯ ಹುಡುಗನ ಜೊತೆಗೆ ದಕ್ಷಿಣದ ತುತ್ತ ತುದಿಯ ಮೈಸೂರಿನ ಹುಡುಗಿಯೊಂದಿಗೆ ಪ್ರೀತಿ-ಪ್ರೇಮ-ಪ್ರಣಯ ಏರ್ಪಟ್ಟು ಮದುವೆಯೂ ಆಗಿತ್ತು. ಕೊನೆಗೂ ಅದು ದಾರುಣ ಅಂತ್ಯಕ್ಕೆ ಕಾರಣವಾಗಿರುವುದು ಮಾತ್ರ ನೋವಿನ ಸಂಗತಿ. ಅದು ಸಹಾ ಚೊಚ್ಚಲ ಗರ್ಭ ಧರಿಸಿದ್ದಾಗಲೇ ಎನ್ನುವುದು ಇನ್ನೂ ನೋವು ತರುವ ವಿಷಯ.
ಬೆಳಗಾವಿ ತಾಲೂಕು ಮಚ್ಚೆ ಗ್ರಾಮದ ಗರ್ಭಿಣಿ ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಆಕೆಯನ್ನು ಪತಿ ಹಾಗೂ ಅವನ ಕುಟುಂಬದವರು ಕೊಲೆ ಮಾಡಿದ್ದಾರೆ ಎಂದು ಮೃತಳ ಸಂಬಂಧಿಕರು ಬೆಳಗಾವಿಯಲ್ಲಿ ದೂರು ನೀಡಿದ್ದಾರೆ.
ಮೂಲತಃ ಮೈಸೂರಿನ ಮಂಜುಳಾ ಅಲಿಯಾಸ್ ನಯನಾ (22)ಮೃತ ಗರ್ಭಿಣಿ. ಮಂಜುಳಾ ಮೂಲತಃ ಮೈಸೂರು ಕುಂಬಾರ ಕೊಪ್ಪಲಿನ ನಿವಾಸಿ. ಆಕೆಗೆ ಬೆಳಗಾವಿ ತಾಲೂಕು ಮಚ್ಚೆ ಗ್ರಾಮದ ಬೋರೇಶ ಜೊತೆ ಪ್ರೀತಿ-ಪ್ರೇಮ ಕುದುರಿತ್ತು. ಸಾಮಾಜಿಕ ಜಾಲತಾಣವಾದ
ಇನ್ಟ್ರಾಗ್ರಾಮ್ ದಲ್ಲಿ ರೀಲ್ಸ್ ಮಾಡುವ ವೇಳೆ ಪರಸ್ಪರ ಪರಿಚಯವಾಗಿ ಇಬ್ಬರ ನಡುವೆ ಪ್ರೀತಿ-ಪ್ರೇಮ ಮದುವೆವರೆಗೂ ಮುಂದುವರಿದಿತ್ತು.
ಆಕೆಯ ಮನೆಯವರ ತೀವ್ರ ವಿರೋಧದ ನಡುವೆ ಮಂಜುಳಾ ಒಂದೂವರೆ ವರ್ಷದ ಹಿಂದೆ ಮನೆ ಬಿಟ್ಟು ಬಂದು ಬೋರೇಶನೊಂದಿಗೆ ವಿವಾಹವಾಗಿದ್ದಳು. ಮಂಜುಳಾ ಕುಟುಂಬಸ್ಥರು ಬೆಳಗಾವಿಗೆ ಆಗಮಿಸಿ ಆಕೆಯನ್ನು ಮತ್ತೆ ಊರಿಗೆ ಕರೆದುಕೊಂಡು ಹೋಗಿದ್ದರು. ಆದರೆ, ಮಂಜುಳಾ ಮತ್ತೆ ಬೆಳಗಾವಿಯ ಮಚ್ಚೆಗೆ ಬಂದು ಗಂಡನೊಂದಿಗೆ ವಾಸವಾಗಿದ್ದಳು. ಆರಂಭದಲ್ಲಿ ಎಲ್ಲಾ ಪ್ರೀತಿ-ಪ್ರೇಮದಂತೆ ಇವರಿಬ್ಬರ ನಡುವೆ ಸುಂದರ- ಸುಖಮಯ ದಾಂಪತ್ಯ ನಡೆದಿತ್ತು. ಆದರೆ, ದಿನ ಕಳೆದಂತೆ ಇಬ್ಬರ ನಡುವೆ ಮನಸ್ತಾಪ ಮೂಡಿ ಇದೀಗ ದಾರುಣ ಸಾವಿಗೆ ಆಕೆ ಕಾರಣರಾಗಿದ್ದಾಳೆ.
ಮೂರು ತಿಂಗಳ ಗರ್ಭಿಣಿಯಾಗಿದ್ದ ಮಂಜುಳಾ ಶುಕ್ರವಾರ ರಾತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನೆ ನಂತರ ಪತಿ ಬೋರೇಶ ಹಾಗೂ ಆತನ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ರೋಹನ್ ಜಗದೀಶ್ ಅವರು, ಮಂಜುಳಾಗೆ ಮೊದಲಿನಿಂದಲೂ ಗಂಡನ ಮನೆಯವರು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿರುವ ಬಗ್ಗೆ ಆಕೆಯ ಕುಟುಂಬಸ್ಥರು ದೂರು ನೀಡಿದ್ದಾರೆ. ಪತಿ ಹಾಗೂ ಮನೆಯವರು ಕೊಲೆ ಮಾಡಿ ಇದನ್ನು ಆತ್ಮಹತ್ಯೆ ಎಂದು ಬಿಂಬಿಸುತ್ತಿರುವುದಾಗಿ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದು ಇದನ್ನು ಅನುಮಾನಾಸ್ಪದ ಸಾವಿನ ಪ್ರಕರಣ ಎಂದು ತನಿಖೆ ನಡೆಸಲಾಗುತ್ತಿದೆ. ಮದುವೆಯಾಗಿ ಏಳು ವರ್ಷದೊಳಗೆ ಮಹಿಳೆ ಮೃತಪಟ್ಟರೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ತನಿಖೆ ನಡೆಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದ್ದೇವೆ. ಕೌಟುಂಬಿಕ ಕಿರುಕುಳ ಮತ್ತು ಕೊಲೆಯ ಶಂಕೆಯಡಿ ಈ ಪ್ರಕರಣ ದಾಖಲಿಸುತ್ತಿದ್ದೇವೆ. ಆರೋಪಿಗಳ ಪತ್ತೆಗೆ ಎರಡು ತಂಡ ರಚನೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.