ವಯನಾಡು: ಎರಡು ದಿನಗಳ ಹಿಂದೆ ಮಹಿಳೆಯೊಬ್ಬರನ್ನು ಕೊಂದು ಹಾಕಿದ್ದ ‘ನರಭಕ್ಷಕ’ ಹುಲಿ ಕೇರಳದ ವಯನಾಡು ಜಿಲ್ಲೆಯಲ್ಲಿ ಸೋಮವಾರ ಶವವಾಗಿ ಪತ್ತೆಯಾಗಿದೆ. ಸತ್ತ ಹುಲಿಯ ಹೊಟ್ಟೆಯೊಳಗೆ ಸತ್ತ ಮಹಿಳೆಯ ಉಡುಗೆ ಮತ್ತು ಒಂದು ಜೋಡಿ ಕಿವಿಯೋಲೆಗಳು ಸಿಕ್ಕಿವೆ.
ಎರಡು ದಿನಗಳ ಹಿಂದೆ ರಾಧಾ ಎಂಬ ಆದಿವಾಸಿ ಮಹಿಳೆಯನ್ನು ಕೊಂದ ಹುಲಿ ಇದೇ ಎಂದು ಅರಣ್ಯ ಇಲಾಖೆ ಖಚಿತಪಡಿಸಿದೆ. ಕೊಲೆಯಾದ ರಾಧಾಳ ಬಟ್ಟೆ, ಕಿವಿಯೋಲೆಗಳು ಮತ್ತು ಕೂದಲು ಹುಲಿಯ ಹೊಟ್ಟೆಯಲ್ಲಿ ಪತ್ತೆಯಾಗಿವೆ ಎಂದು ಅರಣ್ಯ ಇಲಾಖೆ ಹೇಳಿದೆ.
ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯ ಪ್ರಕಾರ ಹುಲಿಯ ಕತ್ತಿನ ಮೇಲಿದ್ದ ಗಾಯಗಳೇ ಅದರ ಸಾವಿಗೆ ಕಾರಣ. ಮತ್ತೊಂದು ಹುಲಿಯೊಂದಿಗೆ ನಡೆದ ಕಾದಾಟದಲ್ಲಿ ಉಂಟಾದ ಗಾಯಗಳಿಂದ ಇದು ಮೃತಪಟ್ಟಿದೆ ಎಂಬುದು ಕಂಡುಬಂದಿದೆ.
ಈ ಗಾಯಗಳೇ ಸಾವಿಗೆ ಕಾರಣ ಎಂದು ಹೇಳಿರುವ ಮುಖ್ಯ ವನ್ಯಜೀವಿ ವಾರ್ಡನ್ ಪ್ರಮೋದ್ ಜಿ. ಅವರು, ಕಾಡಿನಲ್ಲಿ ಕಸ ಸುರಿಯುತ್ತಿದ್ದ ಜಾಗದಲ್ಲಿ ಮೊದಲು ಹುಲಿ ದುರ್ಬಲ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಎರಡು ಗಂಟೆಗಳ ಕಾಲ ಹುಲಿಯನ್ನು ಹಿಂಬಾಲಿಸಿದರು. ಬಳಿಕ ಶವವಾಗಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ವಯನಾಡು ಜಿಲ್ಲೆಯ ಪಂಚರಕೊಲ್ಲಿಯಲ್ಲಿ ರಾಧಾ ಎಂಬ ಆದಿವಾಸಿ ಮಹಿಳೆಯನ್ನು ಇದೇ ಹುಲಿ ಕೊಂದು ಹಾಕಿತ್ತು. ಅರಣ್ಯ ಇಲಾಖೆಯ ಹಂಗಾಮಿ ಅರಣ್ಯ ವೀಕ್ಷಕ ಅಪ್ಪಚ್ಚನ ಪತ್ನಿ ರಾಧಾ ಅವರು ಕಾಫಿ ಬೀಜಗಳನ್ನು ಕೊಯ್ಯಲು ಹೊರಟಿದ್ದಾಗ ಹುಲಿ ದಾಳಿ ನಡೆಸಿದೆ.
ನಿತ್ಯ ತಪಾಸಣೆಗೆ ಬಂದಿದ್ದ ಥಂಡರ್ ಬೋಲ್ಟ್ ತಂಡಕ್ಕೆ ರಾಧಾ ಮೃತದೇಹ ಪತ್ತೆಯಾಗಿದೆ. ಹುಲಿ ದೇಹ ಅರ್ಧ ತಿಂದಿತ್ತು. ಸ್ಥಳೀಯರ ಪ್ರತಿಭಟನೆ ತೀವ್ರಗೊಂಡ ನಂತರ ನರಭಕ್ಷಕ ಹುಲಿಯನ್ನು ಗುಂಡಿಕ್ಕಿ ಕೊಲ್ಲುವಂತೆ ಆದೇಶ ನೀಡಲಾಗಿತ್ತು.