ನವದೆಹಲಿ:
ಕನ್ನಡ ಚಿತ್ರ ‘ಕಾಂತಾರ’ದಲ್ಲಿ ‘ವರಾಹರೂಪಂ’ ಹಾಡನ್ನು ಪ್ರದರ್ಶಿಸಬಾರದು ಎಂದು ಕೇರಳ ಹೈಕೋರ್ಟ್ ವಿಧಿಸಿದ್ದ ಷರತ್ತನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಸಡಿಲಿಸಿದೆ.
ಕಾಂತಾರ ಸಿನಿಮಾದಲ್ಲಿ ‘ವರಾಹ ರೂಪಂ’ ಹಾಡು ಬಳಕೆ ನಿರ್ಬಂಧಿಸಿ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಾಗ ಕೇರಳ ಹೈಕೋರ್ಟ್ ವಿಧಿಸಿದ್ದ ಜಾಮೀನು ಷರತ್ತಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ವಿಧಿಸಿದೆ. ‘ಕಾಂತಾರ’ ಚಿತ್ರ ನಿರ್ಮಾಪಕರು ಚಿತ್ರದಿಂದ ‘ವರಾಹ ರೂಪ’ ಹಾಡನ್ನು ತೆಗೆದುಹಾಕುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಧ್ಯಂತರ ಪರಿಹಾರದಲ್ಲಿ ತಿಳಿಸಿದೆ.
ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ರಿಷಬ್ ಶೆಟ್ಟಿ ಮತ್ತು ವಿಜಯ್ ಕಿರಗಂದೂರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ, ನ್ಯಾಯಮೂರ್ತಿಗಳಾದ ಪಿ. ಎಸ್. ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ನಡೆಸಿತು.
ಫೆಬ್ರವರಿ 12 ಮತ್ತು 13ರಂದು ಅರ್ಜಿದಾರರು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಅರ್ಜಿದಾರರು ಬಂಧಿಸಲ್ಪಟ್ಟರೆ ವಿಚಾರಣಾಧೀನ ನ್ಯಾಯಾಲಯವು ವಿಧಿಸುವ ಷರತ್ತಿಗೆ ಒಳಪಟ್ಟು ಅವರನ್ನು ಬಿಡುಗಡೆ ಮಾಡಬೇಕು. ಐದನೇ ಷರತ್ತಿಗೆ ನಾವು ತಡೆಯಾಜ್ಞೆ ನೀಡಿದ್ದೇವೆ” ಎಂದು ಪೀಠವು ಆದೇಶದಲ್ಲಿ ಹೇಳಿತು.
ವರಾಹರೂಪಂ ಹಾಡು ಎರಡು ಮೊಕದ್ದಮೆಗಳಲ್ಲಿ ಮೂಲ ವಿಷಯವಾಗಿದ್ದು, ನವರಸಂ ಹಾಡಿನ ಹಕ್ಕುಸ್ವಾಮ್ಯ ಹೊಂದಿದ್ದ ‘ಮಾತೃಭೂಮಿ ಮುದ್ರಣ ಮತ್ತು ಪ್ರಕಾಶನ ಸಂಸ್ಥೆ’ ಹಾಗೂ ನವರಸಂ ಹಾಡನ್ನು ಸಂಯೋಜಿಸಿದ್ದ ಕೇರಳದ ಜನಪ್ರಿಯ ಸಂಗೀತ ತಂಡ ‘ಥೈಕ್ಕುಡಂ ಬ್ರಿಜ್’ ಮೊಕದ್ದಮೆ ಹೂಡಿವೆ.
ರಿಷಬ್ ಶೆಟ್ಟಿ ಮತ್ತು ವಿಜಯ ಕಿರಗಂದೂರು ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಾಗ ನ್ಯಾಯಮೂರ್ತಿ ಎ. ಬದ್ರುದ್ದೀನ್ ಅವರಿದ್ದ ಕೇರಳ ಹೈಕೋರ್ಟ್ನ ಏಕಸದಸ್ಯ ಪೀಠವು ಮಧ್ಯಂತರ ಆದೇಶ ಅಥವಾ ಅಂತಿಮ ಆದೇಶದವರೆಗೆ ಅರ್ಜಿದಾರರಾದ ರಿಷಬ್ ಶೆಟ್ಟಿ ಮತ್ತು ನಿರ್ಮಾಪಕರು ವರಾಹ ರೂಪಂ ಹಾಡನ್ನು ಒಳಗೊಂಡ ʼಕಾಂತಾರʼ ಚಲನಚಿತ್ರವನ್ನು ಪ್ರದರ್ಶಿಸುವಂತಿಲ್ಲ. ಹಕ್ಕುಸ್ವಾಮ್ಯ ಕುರಿತಂತೆ ಸಂಬಂಧಪಟ್ಟ ಸಿವಿಲ್ ನ್ಯಾಯಾಲಯ ತೀರ್ಮಾನಿಸಬೇಕು ಎಂದು ನಿರ್ದಿಷ್ಟ ಜಾಮೀನು ಷರತ್ತು ವಿಧಿಸಿದ್ದರು. ಇದನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.
ವರಾಹ ರೂಪಂ ಗೀತೆಯಲ್ಲಿ ನವರಸಂ ಸಂಗೀತ ಬಳಿಸಿರುವುದಕ್ಕೆ ಸಂಬಂಧಿಸಿದಂತೆ ಹಕ್ಕು ಸ್ವಾಮ್ಯ ಕಾಯಿದೆ ಸೆಕ್ಷನ್ 63 ರ ಅಡಿ ರಿಷಬ್ ಶೆಟ್ಟಿ ಮತ್ತು ವಿಜಯ್ ಕಿರಗಂದೂರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.