ನವದೆಹಲಿ: ವಿಚ್ಛೇದನ ಪ್ರಕರಣಗಳಲ್ಲಿ ನ್ಯಾಯಾಲಯವು
ಪತ್ನಿಯನ್ನು ಉದ್ದೇಶಿಸಿ ‘ಇಟ್ಟುಕೊಂಡವಳು’ ಎಂಬಂತಹ ಬೈಗುಳದ ಪದಗಳನ್ನು ಬಳಸುವುದು ಸ್ತಿದ್ವೇಷದ ಮನಃಸ್ಥಿತಿ. ಇದು 21ನೇ ವಿಧಿಯಲ್ಲಿ ಹೇಳಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆ ಮತ್ತು ಸಂವಿಧಾನದ ಆಶಯಕ್ಕೂ ವಿರುದ್ಧವಾದುದು’ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.
ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ ವಿಚ್ಛೇದನ ಪಡೆದು, ಪತಿಯಿಂದ ಜೀವನಾಂಶ ಪಡೆದುಕೊಳ್ಳುವ ಸಂಬಂಧ ಪತ್ನಿಯು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ, ಅಹಸಾನುದ್ದೀನ್ ಅಮಾನುಲ್ಲಾ ಮತ್ತು ಅಗಸ್ಟೀನ್ ಜಾರ್ಜ್ ಮಸಿ ಅವರುಗಳಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
‘2004ರಲ್ಲಿ ಪ್ರಕರಣವೊಂದರ ತೀರ್ಪಿನಲ್ಲಿ ಬಾಂಬೆ ಹೈಕೋರ್ಟ್, ‘ಇಟ್ಟುಕೊಂಡವಳು’ ಎಂಬ ಉಲ್ಲೇಖವನ್ನು ಮಾಡಿದೆ. ಇದು ತಪ್ಪು. ಇದು ಮಹಿಳೆಯ ಘನತೆಗೆ ಧಕ್ಕೆ ತರುವಂತ ಮಾತುಗಳಾಗಿವೆ. ಹೈಕೋರ್ಟ್ವೊಂದು ಇಂಥ ಪದಗಳನ್ನು ಬಳಿಸಿರುವುದು ಆಶ್ಚರ್ಯ ತಂದಿದೆ. ವಿಚ್ಛೇದನಕ್ಕೆ ಸಂಬಂಧಿಸಿ ಪತಿಯ ಕುರಿತು ಇದೇ ಹೈಕೋರ್ಟ್ ಇಂಥದ್ದೇ ಪದಗಳನ್ನು ಬಳಸುತ್ತದೆಯೇ’ ಎಂದು ಪೀಠ ಪ್ರಶ್ನಿಸಿದೆ.