ಅಥಣಿ :
ಯಾವುದೇ ವ್ಯಕ್ತಿಗೆ ಸ್ವಾಭಿಮಾನಕ್ಕೆ ಧಕ್ಕೆ ಉಂಟಾದಲ್ಲಿ ಸುಮ್ಮನಿರಲು ಸಾಧ್ಯವಾಗಲಾರದು, ಸುಮ್ಮನಿದ್ದ ನನ್ನನ್ನು ಕೆರಳಿಸುವ ಕಾರ್ಯ ನಿರಂತರ ನಡೆದರೆ ಏನು ತಾನೇ ಮಾಡಲು ಸಾಧ್ಯ ಅವರಿಗೆ ಉತ್ತರಿಸಬೇಕಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಅವರು ಸ್ಥಳೀಯ ನೂರಾನಿ ಹಾಲ್ ನಲ್ಲಿ ಜರುಗಿದ ಮುಸ್ಲಿಂ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡುತ್ತಿದ್ದರು.
ನನ್ನ ಮೇಲಿನ ಪ್ರೀತಿಯಿಂದ ಹಲವಾರು ಸಮಾಜದ ಮುಖಂಡರು ಸುಮ್ಮನೆ ಕುಳಿತು ಕೊಳ್ಳಲು ಬಿಡದೆ ನಿಮ್ಮ ಮುಂದೆ ಬಂದು ನಿಲ್ಲುವಂತೆ ಮಾಡಿದೆ. ಇಂದು ನೀವು ತೋರಿರುವ ಪ್ರೀತಿ ವಿಶ್ವಾಸಕ್ಕೆ ತಲೆಬಾಗಿರುವೆ. ನನಗೆ ಬೆಂಬಲ ವ್ಯಕ್ತ ಪಡಿಸಿದ ತಮ್ಮೆಲ್ಲರಿಗೂ ಒಂದು ಭರವಸೆ ಕೊಡುವೆ. ಮುಂಬರುವ ದಿನಮಾನಗಳಲ್ಲಿ ನಿಮ್ಮ ಕಣ್ಣೀರು ಒರೆಸುವ ಕೆಲಸ ಮಾಡುವೆ ಹೊರತಾಗಿ ಕಣ್ಣೀರು ತರುವ ಕೆಲಸ ಎಂದು ಮಾಡಲಾರೆ ಎಂದು ವಾಗ್ದಾನ ಮಾಡಿದರು.
ಇನ್ನು ಕೆಲವೆ ದಿನಗಳಲ್ಲಿ ಇನ್ನು ಹಲವಾರು ಸಮುದಾಯದ ಮುಖಂಡರ ಜೊತೆಗೆ ಚರ್ಚಿಸಿ ಅವರೆಲ್ಲರೂ ನೀವು ಸ್ಪರ್ಧೆ ಮಾಡಬೇಕು ಎಂದರೆ ಮಾತ್ರ ಪಕ್ಷದ ಟಿಕೆಟ್ ಕೇಳುವೆ,ತಾಲೂಕಿನ ಎಲ್ಲ ಸಮುದಾಯದ, ಪಕ್ಷದ ಪ್ರಮುಖರ, ಕಾರ್ಯಕರ್ತರ ಅಭಿಪ್ರಾಯದಂತೆ ನಡೆದುಕೊಳ್ಳುವೆ. ಅಲ್ಲದೇ ಪಕ್ಷದ ವರಿಷ್ಠರು ನನ್ನ ಕೈಬಿಡುವುದಿಲ್ಲ ಎಂಬ ವಿಶ್ವಾಸ ನಂಬಿಕೆ ನನಗಿದೆ. ನಾನು ಎಂದು ಚಿಲ್ಲರೆ ರಾಜಕಾರಣ ಮಾಡಿಲ್ಲ. ರಾಜಕಾರಣಿಗಳಿಗೆ ಜನರ ಒಳತಿಗಾಗಿ ದೂರದೃಷ್ಟಿ ಇಟ್ಟುಕೊಂಡು ರಾಜಕಾರಣ ಮಾಡಬೇಕು,ಸ್ವ ಹಿತಕ್ಕಾಗಿ ರಾಜಕಾರಣ ಮಾಡಿದರೆ ಯಾವುದೇ ಪ್ರಯೋಜನವಾಗಲಾರದು.
ನಾವುಗಳು ಯಾವುದೇ ಒಂದು ಸಮುದಾಯದ ಓಲೈಕೆಯಿಂದ ರಾಜಕಾರಣ ಮಾಡಲಾಗದು. ಎಲ್ಲ ಸಮುದಾಯಗಳನ್ನು ಜೊತೆಗೂಡಿಸಿಕೊಂಡು ಹೋದಲ್ಲಿ ಮಾತ್ರ ಯಶಸ್ವಿ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಾಗಲಿದೆ ಎಂದರು.
ಯುನಸ್ ಮುಲ್ಲಾ,ಅತೀಕ ಮೋಮಿನ,ಮೋಹಸಿನ ಮುಜಾಹಿಂದ,ಆಸಿಫ ತಾಂಬೋಳಿ,ಫರೀದ ಅವಟಿ,ರಸೂಲ ನದಾಫ,ನೂರಾಹಮ್ಮದ ಡೊಂಗರಗಾಂವ,ಸುಹಿಲ್ ಖಾಜಿ,ಸಲೀಮ್ ಮುಲ್ಲಾ,ಇರ್ಷದ ಮನಗೂಳಿ,ರಶೀದ ಸಾತಬಚ್ಚೆ ಸೇರಿದಂತೆ ಅನೇಕರಿದ್ದರು.