ರಾಮದುರ್ಗ: ಇಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ರಾಮದುರ್ಗದ ತಾಲೂಕಿನ ರೈಲು ಹೋರಾಟ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಹೋರಾಟದ ಮೂಲಕವೇ ರೈಲು ಮಾರ್ಗ ಪಡೆದುಕೊಳ್ಳುವುದು ಸೇರಿದಂತೆ ಅನೇಕ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.
ಲೋಕಾಪುರದಿಂದ ಸವದತ್ತಿ ಮೂಲಕ ಧಾರವಾಡಕ್ಕೆ ಹೋಗುವ ರೈಲು ಮಾರ್ಗದಲ್ಲಿ ರಾಮದುರ್ಗ ತಾಲೂಕನ್ನು ಬೇರ್ಪಡಿಸಿ ಅನ್ಯಾಯ ಮಾಡುವ ಸುಳಿವು ಲಭ್ಯವಾದ ಹಿನ್ನೆಲೆಯಲ್ಲಿ ಇಲ್ಲಿನ ರೈಲು ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿತು.
ಬೆಳಗಾವಿ ಜಿಲ್ಲೆಯ ಸುಪ್ರಸಿದ್ದ ಧಾರ್ಮಿಕ ಕ್ಷೇತ್ರ ಸವದತ್ತಿಗೆ ಈಗಾಗಲೇ 2019 ರಲ್ಲಿಯೇ ರೈಲು ಮಾರ್ಗದ ಸಮೀಕ್ಷೆ ಕಾರ್ಯ ಪೂರ್ಣಗೊಂಡು ಲೋಕಾಪುರದಿಂದ ರಾಮದುರ್ಗ, ಸವದತ್ತಿ ಮೂಲಕ ಧಾರವಾಡಕ್ಕೆ ಹೋಗುವ ರೈಲು ಮಾರ್ಗದ ಅಂದಾಜು ಪತ್ರಿಕೆ ಸಹ ಸಿದ್ದವಾಗಿದೆ.
ರಾಮದುರ್ಗ ತಾಲೂಕು ಸಹ ಒಂದು ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ. ಗೊಡಚಿ ವೀರಭದ್ರೇಶ್ವರ ದೇವಸ್ಥಾನ, ಶಬರಿ ಕೊಳ್ಳ, ಶಿವನ ಮೂರ್ತಿ ಸೇರಿದಂತೆ ಅನೇಕ ವೀಕ್ಷಣೆಯ ತಾಣಗಳು ರಾಮದುರ್ಗದಲ್ಲಿವೆ. ಇದನ್ನು ಹೊರತುಪಡಿಸಿ ಎರಡು ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಜನರಿಗೆ ರೈಲು ಮಾರ್ಗದ ಅವಶ್ಯಕತೆಯೂ ಹೆಚ್ಚಿದೆ. ಹೀಗಿರುವಾಗ ಕೆಲವರ
ಕುಚೇಷ್ಟೆಯಿಂದಾಗಿ ರಾಮದುರ್ಗವು ರೈಲು ಅವಕಾಶದಿಂದ ವಂಚಿತವಾಗಲಿದೆ ಎಂಬ ಅನುಮಾವನ್ನು ಸಭಿಕರು ವ್ಯಕ್ತ ಪಡಿಸಿದರು.
ಈ ಹಿಂದೆ 2019ರಲ್ಲಿ ನಡೆಸಿರುವ ಸಮೀಕ್ಷೆ ಪ್ರಕಾರವೇ ಲೋಕಾಪುರ ರಾಮದುರ್ಗ ಮಾರ್ಗವಾಗಿ ಸವದತ್ತಿ ಮತ್ತು ಧಾರವಾಡಕ್ಕೆ ರೈಲು ಮಾರ್ಗ ನಿರ್ಮಿಸಬೇಕು ಎಂದು ಪಕ್ಷಾತೀತವಾಗಿ ಹೋರಾಟ ಆರಂಭಿಸಬೇಕು ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಮದುರ್ಗ ತಾಲೂಕಿನ ಅಭಿವೃದ್ಧಿಗಾಗಿ ಹೋರಾಟದ ಮೂಲಕ ರೈಲು ಮಾರ್ಗಕ್ಕಾಗಿ ಒತ್ತಾಯಿಸಲು ಅ.22 ರಂದು ಮತ್ತೊಮ್ಮೆ ಸಭೆ ನಡೆಸಿ ಸೂಕ್ತ ಸಲಹೆಗಳನ್ನು ಪಡೆದು ಹೋರಾಟ ನಡೆಸುವ ಕುರಿತು ನಿರ್ಧರಿಸಿದರು.
ಕಾರ್ಮಿಕ ಮುಖಂಡ ಗೈಬು ಜೈನೆಖಾನ, ಪ್ರದೀಪ ಪಟ್ಟಣ, ಮಹ್ಮದ್ಶಫಿ ಬೆಣ್ಣಿ, ಎಂ.ಕೆ. ಯಾದವಾಡ, ದಾದಾಪೀರ ಕೆರೂರ, ಡಿ.ಎಫ್. ಹಾಜಿ, ಮಹ್ಮದ್ಬೇಗ ನಿಗದಿ, ರೈತ ಮುಖಂಡ ಮಲ್ಲಿಕಾರ್ಜುನ ರಾಮದುರ್ಗ, ಜಿ.ಬಿ. ರಂಗನಗೌಡರ, ಸಂಜು ಕಪಾಲಿ ಇದ್ದರು.