ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದ 50 ಲಕ್ಷ ರೂ. ಅನುದಾನ ದುರ್ಬಳಕೆ ವಿರುದ್ಧ ಬೆಳಗಾವಿ ಕನ್ನಡ ಸಂಘಟನೆಗಳು ನಡೆಸಿದ್ದ ಹೋರಾಟಕ್ಕೆ ಜಯ ಸಿಕ್ಕಿದ್ದು ಈ ಹಣ ದುರ್ಬಳಕೆ
ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ರಾಜ್ಯ ಸರಕಾರ ಆದೇಶ ನೀಡಿದೆ.
ಸಮಾನ ಮನಸ್ಕ 12 ಕನ್ನಡ ಪರ ಸಂಘಟನೆಗಳು ಗಡಿ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನಿಶ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ತ್ರಿಲೋಕಚಂದ್ರ ಅವರಿಗೆ ದೂರು ನೀಡಿದ್ದವು.
ಬೆಳಗಾವಿ ಜಿಲ್ಲಾಧಿಕಾರಿಗಳು ಈ ಅನುದಾನವನ್ನು
ಕನ್ನಡ ಸಂಘಟನೆಗಳ ಸಲಹೆ- ಸೂಚನೆಗಳನ್ನು ಧಿಕ್ಕರಿಸಿ, ಅನುದಾನ ಬಿಡುಗಡೆಯ ಸಂದರ್ಭದಲ್ಲಿ ಸರಕಾರ ವಿಧಿಸಿದ್ದ ಶರತ್ತುಗಳನ್ನು ಉಲ್ಲಂಘಸಿ ಕಾರ್ಯಕ್ರಮವನ್ನು
ಆಯೋಜಿಸಿದ್ದರು. ಈ ಕಾರ್ಯಕ್ರಮದ ಬಗ್ಗೆ ಬೆಳಗಾವಿ ಜನತೆಗೆ, ಮಾಧ್ಯಮಕ್ಕೆ ಎರಡು ದಿನಗಳ ಮೊದಲಷ್ಟೇ
ಗೊತ್ತಾಗಿತ್ತು. ಕಾರ್ಯಕ್ರಮಕ್ಕೆ ಸಚಿವರು, ಶಾಸಕರು ಬಂದಿರಲಿಲ್ಲ.
ಈ ದುರ್ಬಳಕೆಯನ್ನು ತೀವ್ರವಾಗಿ ವಿರೋಧಿಸಿದ್ದ ಸಮಾನ ಮನಸ್ಕ ಕನ್ನಡ ಸಂಘಟನೆಗಳು ರಾಜ್ಯ ಸರಕಾರಕ್ಕೆ ದೂರುಗಳ ಪ್ರವಾಹವನ್ನೇ ಹರಿಸಿದ್ದವು.
ದೂರುಗಳ ಬಗ್ಗೆ ಕ್ರಮ ಕೈಕೊಂಡ ರಾಜ್ಯ ಸರಕಾರಕ್ಕೆ ಸಮಾನ ಮನಸ್ಕ ಕನ್ನಡ ಸಂಘಟನೆಗಳು ಅಭಿನಂದನೆ ಮತ್ತು ಧನ್ಯವಾದ ತಿಳಿಸಿವೆ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ
ತಿಳಿಸಿದ್ದಾರೆ.


