8ನೇ ತರಗತಿ ಕನ್ನಡ ವಿಷಯದಲ್ಲಿ ಕೆ.ಟಿ.ಗಟ್ಟಿ ಅವರು ಬರೆದಿದ್ದ ಸಾವರ್ಕರ್ ಅವರನ್ನು ಬಂಧಿಸಿಟ್ಟಿದ್ದ ಅಂಡಮಾನ್ ಜೈಲಿಗೆ ಭೇಟಿ ನೀಡಿದ ಕುರಿತು ಬರೆದಿದ್ದ ಪ್ರವಾಸ ಕಥನ ಆಧಾರಿತ ‘ಕಾಲವನ್ನು ಗೆದ್ದವರು’ ಪಾಠ ಸೇರ್ಪಡೆ ಮಾಡಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಆ ಪಠ್ಯವನ್ನು ಕೈಬಿಡಲು ತೀರ್ಮಾನಿಸಿದೆ. 10ನೇ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿ ಹೆಡ್ಗೆವಾರ್ ಅವರ ಭಾಷಣದ ತುಣುಕನ್ನು ಒಂದು ಅಧ್ಯಾಯವಾಗಿ ಸೇರ್ಪಡೆ ಮಾಡಲಾಗಿತ್ತು, ಅದನ್ನೂ ಈಗ ಕೈ ಬಿಡಲಾಗುತ್ತಿದೆ. ಅಲ್ಲದೆ, ಚಕ್ರವರ್ತಿ ಸೂಲಿಬೆಲೆ ಬರೆದಿರುವ ರಾಜಗುರು, ಭಗತ್ ಸಿಂಗ್ ಮತ್ತು ಸುಖದೇವ್ ಅವರ ಕುರಿತಾಗಿರುವ ಪಠ್ಯವನ್ನು ಕೈಬಿಡಲು ತೀರ್ಮಾನಿಸಲಾಗಿದೆ.
ಬೆಂಗಳೂರು :
ಈ ಹಿಂದಿನ ಬಿಜೆಪಿ ಸರಕಾರ ಶಾಲಾ ಪಠ್ಯ ಪುಸ್ತಕದಲ್ಲಿ ಸೇರಿಸಿದ್ದ ಆರ್ ಎಸ್ ಎಸ್ ಮುಖಂಡ ಹೆಗಡೇವಾರ್, ಹಿಂದೂ ಮಹಾಸಭಾ ಮುಖಂಡ ವಿ.ಡಿ.ಸಾವರ್ಕರ್ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರ ಪಠ್ಯವನ್ನು ಕೈಬಿಡಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಪಠ್ಯ ಪರಿಷ್ಕರಣೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಂತರ ಮಾರ್ಗದರ್ಶನ ನೀಡುತ್ತಿದ್ದಾರೆ. ಈಗಾಗಲೇ ಪಠ್ಯ ಶಾಲೆಗಳಿಗೆ ಹೋಗಿದೆ. ಮತ್ತೆ ಪ್ರಿಂಟ್ ಮಾಡಿ ಕಳಿಸುವುದು ಕಷ್ಟ. ಆದರೆ ಸಪ್ಲಿಮೆಂಟರಿ ಪರಿಷ್ಕರಣೆ ಮಾಡಲು ಅವಕಾಶವಿದೆ. ಯಾವುದು ಉಳಿಸಿಕೊಳ್ಳುವುದು ಎಂದು ನಿರ್ಧರಿಸಬಹುದು. ರಾಜಪ್ಪ ದಳವಾಯಿ, ಪ್ರೊ. ಚಂದ್ರಶೇಖರ್, ರಾಜೇಶ್, ಅಶ್ವಥ ನಾರಾಯಣ ಅವರ ಸಮಿತಿ 45 ಬದಲಾವಣೆ ಮಾಡಲು ಸಲಹೆ ನೀಡಿದ್ದು ಪ್ಯಾರಾಗ್ರಾಫ್, ಪದ ಬದಲಾಯಿಸಲು ಕೋರಿಕೆ ಇಡಲಾಗಿತ್ತು. ಆರರಿಂದ ಹತ್ತನೇ ತರಗತಿವರೆಗಿನ ಕನ್ನಡ, ಸಮಾಜ ಪಠ್ಯ ಪುಸ್ತಕದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಸಾವಿತ್ರಿ ಪುಲೆ, ಅಂಬೇಡ್ಕರ್ ಅವರ ನೀ ಹೋದ ಮರುದಿನ ಕವನ, ನೆಹರು ಅವರ ಮಗಳಿಗೆ ಬರೆದ ಪತ್ರ ಪಠ್ಯದಲ್ಲಿ ಸೇರಿಸಲಾಗಿದೆ. ಸಾವರ್ಕರ್ ಮತ್ತು ಸೂಲಿಬೆಲೆ ಅವರ ಪಠ್ಯವನ್ನು ತೆಗೆಯಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಯಾವುದನ್ನು ಹೇಳಿಕೊಡಬೇಕು, ಯಾವುದನ್ನು ಹೇಳಿಕೊಡಬಾರದು ಎಂದು ಶಿಕ್ಷಕರಿಗೆ ತಿಳಿಸಲಾಗುವುದು. ಅಂದಾಜು 15 ಪುಟಗಳ ಪುಸ್ತಕ ಇರಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಮಕ್ಕಳಿಗೆ ಈಗಾಗಲೇ ಪಠ್ಯ ವಿತರಿಸಲಾಗಿದೆ. ಹೀಗಾಗಿ ಅವುಗನ್ನು ವಾಪಸ್ ಪಡೆದರೆ ಮತ್ತೆ ಕೋಟ್ಯಾಂತರ ರೂಪಾಯಿ ಹಣ ವ್ಯಯಿಸಬೇಕು. ಹೀಗಾಗಿ ಸಪ್ಲಿಮೆಂಟರಿ ಪುಸ್ತಕ ನೀಡಲಾಗುತ್ತದೆ. ಶಿಕ್ಷಣ ತಜ್ಞರ ಸಲಹೆ ಪಡೆದು ಸಪ್ಲಿಮೆಂಟರಿ ಪುಸ್ತಕ ನೀಡಲಾಗುತ್ತದೆ. ಇದರ ಜೊತೆಗೆ ಮಕ್ಕಳಿಗೆ ಯಾವ ಪಾಠ ಮಾಡಬೇಕು ಅನ್ನೋ ಮಾರ್ಗಸೂಚಿಯನ್ನು ಶಿಕ್ಷಕರಿಗೆ ನೀಡಲಾಗುತ್ತದೆ ಎಂದು ಮಧುಬಂಗಾರಪ್ಪ ಹೇಳಿದ್ದಾರೆ.
6 ರಿಂದ 10 ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ ಎಂದು ಮಧುಬಂಗಾರಪ್ಪ ಹೇಳಿದ್ದಾರೆ. ನಮ್ಮ ಮಕ್ಕಳಿಗೆ ಯಾವ ಪಠ್ಯ ಅಗತ್ಯವಿದೆ ಅನ್ನೋದನ್ನು ಮಾತ್ರ ಇರಿಸಲಾಗಿದೆ. ಅನಗತ್ಯ ಪಠ್ಯಗಳನ್ನು ತೆಗೆಯಲಾಗಿದೆ. ತೆಗೆದ ಪಠ್ಯದ ಜಾಗದಲ್ಲಿ ಅಂಬೇಡ್ಕರ್, ನೆಹರೂ ಪಠ್ಯಗಳನ್ನು ಸೇರಿಸಲಾಗಿದೆ ಎಂದಿದ್ದಾರೆ.
ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದಬೇಕು. ಇದಕ್ಕಾಗಿ ವಿಶೇಷ ಒತ್ತು ನೀಡಲಾಗಿದೆ ಎಂದು ಮಧುಬಂಗಾರಪ್ಪ ಹೇಳಿದ್ದಾರೆ. ಇಂದು ನಡೆದ ಸಂಪುಟ ಸಭೆಯಲ್ಲಿ ಶಾಲೆಯಲ್ಲಿ ಸಂವಿಧಾನ ಪೀಠಿಕೆ ಓದು ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ. ರಾಷ್ಟ್ರಗೀತೆ, ನಾಡಗೀತೆ ಜೊತೆಗೆ ಸಂವಿಧಾನ ಪೀಠಿಕೆ ಓದಲು ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಪಠ್ಯ ಪರಿಷ್ಕರಣೆಗೆ ಬಿಜೆಪಿ ಆಕ್ರೋಶ ಹೊರಹಾಕಿದೆ. ಟಿಪ್ಪು ಪಾಠ ಯಾಕೆ ಬೇಕು, ಕಾಂಗ್ರೆಸ್ ತುಷ್ಠೀಕರಣ ರಾಜಕಾರಣ ಮಾಡುತ್ತಿದೆ. ಮೇಲುಕೋಟೆಯಲ್ಲಿ ಟಿಪ್ಪು ದೌರ್ಜನ್ಯಕ್ಕೆ ದೀಪಾವಳಿ ಮಾಡುತ್ತಿಲ್ಲ. ಆದರೆ ಒಂದು ಸಮುದಾಯ ಒಲೈಕೆಗಾಗಿ ಕಾಂಗ್ರೆಸ್ ಈ ರೀತಿಯ ನಾಟಕ ಆಡುತ್ತಿದೆ. ಇದು ಸಿದ್ದರಾಮಯ್ಯ ಸರ್ಕಾರದ ದ್ರೋಹದ ಕೆಲಸ ಎಂದು ಬಿಜೆಪಿ ನಾಯಕ ರವಿ ಕುಮಾರ್ ಹೇಳಿದ್ದಾರೆ.