ಬೆಳಗಾವಿ : ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಇಂದು 16 ಮೇ, 2024 ಕ್ಕೆ 40 ವರ್ಷಗಳನ್ನು ಪೂರ್ಣಗೊಳಿಸಿದ ಡಾ.ಪ್ರಭಾಕರ ಕೋರೆಯವರಿಗೆ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿಯವರು ಸಮಸ್ತ ಸಿಬ್ಬಂದಿಯೊವರೊಂದಿಗೆ ಹೂಗೂಚ್ಛ ನೀಡಿ ಅಭಿನಂದಿಸಿದರು.16 ಮೇ, 1984 ರಂದು ಕಾರ್ಯಾಧ್ಯಕ್ಷರಾಗಿ ಕೆಎಲ್ಇ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದ ಡಾ.ಕೋರೆಯವರು ಸಂಸ್ಥೆಯನ್ನು ಜಾಗತಿಕವಾಗಿ ವಿಸ್ತರಿಸಿದ್ದು ಪವಾಡ ಸದೃಶ. 38ರಷ್ಟಿದ್ದ ಅಂಗಸಂಸ್ಥೆಗಳ ಸಂಖ್ಯೆಯನ್ನು ಇಂದು 310ಕ್ಕೆ ಕೊಂಡ್ಯೊಯ್ದ ಕೀರ್ತಿ ಡಾ.ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ. ಅವರ ಈ ಅವಿಸ್ಮರಣೀಯ ಸೇವೆಯ ಸಂಭ್ರಮಾಚರಣೆಯನ್ನು ಕೆಎಲ್ಇ ಆಡಳಿತ ಮಂಡಳಿ ಹಾಗೂ ಸಮಸ್ತ ಕೆಎಲ್ಇ ಪರಿವಾರ ಶನಿವಾರ 18 ಮೇ, 2024 ರಂದು ಸಂಜೆ 5.30 ಕ್ಕೆ ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದೆ.
⏩ ನಾಲ್ದೆಸೆಯಲಿ ಕಣ್ಕುಕ್ಕುವ ನಾಲ್ಕು ದಶಕದ ಕಾರ್ಯಾಧ್ಯಕ್ಷ ಸಾಧನೆ
⏩ ಕೆ.ಎಲ್.ಇ ಕಳಸ ಡಾ.ಕೋರೆ ಅವರಿಗಿಂದು ಬದುಕಿನ ಮಹತ್ವದ ಘಟ್ಟ
⏩ *ಸಂಸ್ಥೆಯಿಂದ ಹೃದಯಸ್ಪರ್ಶಿ ಅಭಿನಂದನೆ
ಡಾ. ಪ್ರಭಾಕರ ಕೋರೆ ಅವರ ಹೆಸರು ಕೇಳದವರು ಕರುನಾಡಿನಲ್ಲೇ ವಿರಳ. ತ್ರಿದಾನಿಗಳು, ಸಪ್ತರ್ಷಿಗಳು ಹುಟ್ಟು ಹಾಕಿದ ಕೆ.ಎಲ್.ಇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹಾನ್ ನಾಯಕರಲ್ಲಿ ಡಾ. ಪ್ರಭಾಕರ ಕೋರೆ ಅವರದ್ದು ಅತ್ಯಂತ ಮಹತ್ವದ ಪಾತ್ರವಿದೆ. ಕಳೆದ ನಾಲ್ಕು ದಶಕಗಳಿಂದ ಕೆಎಲ್ಇ ಸಂಸ್ಥೆಯ ಕರ್ಣಭಾರತ್ವವನ್ನು ವಹಿಸಿ ಅದನ್ನು ಜಗದ್ವಿಖ್ಯಾತಗೊಳಿಸಿದ ಹಿರಿಮೆ ಡಾ. ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ.
ಪ್ರಭಾಕರ ಕೋರೆ ಅವರು ನಾಲ್ಕು ದಶಕಗಳ ಹಿಂದೆ ಇದೇ ದಿನ (ಮೇ 16) ಕೆಎಲ್ ಇ ಸಂಸ್ಥೆಯ ಚುಕ್ಕಾಣಿಯನ್ನು ಹಿಡಿದಿದ್ದರು. ಅಂದು ಕೆಎಲ್ ಇ ಸಂಸ್ಥೆ ಬೆಳಗಾವಿ ಸೇರಿದಂತೆ ದಕ್ಷಿಣ ಮಹಾರಾಷ್ಟ್ರದಲ್ಲಿ ಕೆಲವೇ ಕೆಲವು ಸಂಸ್ಥೆಗಳನ್ನು ಮಾತ್ರ ಹೊಂದಿತ್ತು. ಆದರೆ, ಇಂದು ಕೆಎಲ್ ಇ ಸಂಸ್ಥೆ ಎನ್ನುವುದು ಕರ್ನಾಟಕ, ಮಹಾರಾಷ್ಟ್ರ ಮಾತ್ರವಲ್ಲ, ದೇಶದ ಇತರ ರಾಜ್ಯಗಳು ಹಾಗೂ ರಾಷ್ಟ್ರದ ರಾಜಧಾನಿಯಲ್ಲೂ ಅಂಗಸಂಸ್ಥೆಯನ್ನು ಹೊಂದಿದೆ.
ಹೊರದೇಶಗಳನ್ನು ಕೆಎಲ್ ಇ ಸಂಸ್ಥೆ ಬೇರು ಬಿಟ್ಟಿದ್ದು ; ಆರೋಗ್ಯ ಹಾಗೂ ಶಿಕ್ಷಣದ ಮೂಲಕ ಇಂದು ವಿಶ್ವಾದ್ಯಂತ ತನ್ನ ಕಂಪು ಪಸರಿಸುತ್ತಿದೆ. ಕೆಎಲ್ಇ ಸಂಸ್ಥೆಗೆ ನೂರು ವರ್ಷಗಳ ಭವ್ಯ ಹಿನ್ನೆಲೆ ಇದೆ. ಆದರೆ ಅದನ್ನು ಕಟ್ಟಿ ಬೆಳೆಸುವಲ್ಲಿ ಅತ್ಯಂತ ಸಮರ್ಥವಾಗಿ ದುಡಿದ ಶ್ರೇಯಸ್ಸು ಮುತ್ಸದ್ಧಿ ನಾಯಕ ಡಾ.ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ. ಕಳೆದ ನಾಲ್ಕು ದಶಕಗಳಿಂದ ಅವರು ಹಗಲಿರುಳು ಸಂಸ್ಥೆಯನ್ನು ಯಾವ ರೀತಿಯಲ್ಲಿ ಮುನ್ನಡೆಸಿದರೆ ಸಂಸ್ಥೆಯ ಬೆಳವಣಿಗೆ ಸಾಧ್ಯ ಎನ್ನುವುದನ್ನು ಚಿಂತಿಸಿ ಆ ನಿಟ್ಟಿನಲ್ಲಿ ಶ್ರಮಿಸಿ ಇಂದು ಇದನ್ನು ಮಹಾನ್ ಸಂಸ್ಥೆಯನ್ನಾಗಿ ಕಟ್ಟಿ ಬೆಳೆಸಿದ್ದಾರೆ. ಬೆಳಗಾವಿ ಕೇಂದ್ರಿತವಾಗಿ ಆರಂಭಗೊಂಡ ಕೆಎಲ್ ಇ ಇಂದು ವಿಶ್ವದಲ್ಲೇ ಮಹೋನ್ನತ ಸಂಸ್ಥೆಯಾಗಿ ಬೆಳೆದು ನಿಂತು ಮುನ್ನುಗುತ್ತಿದೆ. ಕೆಎಲ್ ಇ ಎಂದರೆ ಭಾರತ ಮಾತ್ರ ಏಕೆ ? ಹೊರದೇಶದಲ್ಲೂ ಅಪಾರ ಬೇಡಿಕೆ ಇದೆ. ಹೊರದೇಶದ ವಿದ್ಯಾರ್ಥಿಗಳು ಸಂಸ್ಥೆ ನೀಡುವ ಶ್ರೇಷ್ಠ ಗುಣಮಟ್ಟದ ಶಿಕ್ಷಣ ಪಡೆಯಲು ಆಗಮಿಸುವುದು ವಿಶೇಷ. ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಹತ್ತು ಹಲವು ದೇಶಗಳಿಂದ ವಿದ್ಯಾರ್ಥಿಗಳ ಪ್ರವಾಹವೇ ಕೆಎಲ್ ಇ ಸಂಸ್ಥೆ ಕಡೆ ಹರಿದು ಬರುತ್ತಿರುವುದು ಗಮನಿಸಬೇಕಾದ ಸಂಗತಿಯಾಗಿದೆ.
ಈ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಭಾಕರ ಕೋರೆ ಅವರು ವಹಿಸಿದ ಪರಿಶ್ರಮವಂತೂ ಇತರ ಸಂಸ್ಥೆಗಳಿಗೆ ಅನುಕರಣೀಯ ಎನಿಸಿದೆ. ವಿಧಾನ ಪರಿಷತ್ ಸದಸ್ಯರಾಗಿ, ರಾಜ್ಯಸಭಾ ಸದಸ್ಯರಾಗಿ ರಾಜಕೀಯ ಕ್ಷೇತ್ರದಲ್ಲೂ ಉತ್ತುಂಗ ಸೇವೆ ಸಲ್ಲಿಸಿರುವ ಪ್ರಭಾಕರ ಕೋರೆಯವರು ಕೆಎಲ್ ಇ ಸಂಸ್ಥೆಯನ್ನು ಮುನ್ನಡೆಸುವ ಜೊತೆಜೊತೆಗೆ ಸಾಮಾಜಿಕ ಸೇವೆಯಲ್ಲೂ ಅಹರ್ನಿಸಿಯಾಗಿ ತೊಡಗಿಸಿಕೊಂಡಿದ್ದಾರೆ. ತಮಗೆ ಇರುವ ರಾಜಕೀಯ ಪ್ರಭಾವದಿಂದ ಅತಿರಥ ಮಹಾನಾಯಕರನ್ನೇ ಬೆಳಗಾವಿಗೆ ಕರೆತಂದು ಕೆಎಲ್ ಇಯ ಸಾಧನೆಯನ್ನು ಪರಿಚಯಿಸಿದ್ದಾರೆ. ಯುವಕರಾಗಿದ್ದರೆ ಕೆಎಲ್ಇ ಸಂಸ್ಥೆಯ ನಾಯಕತ್ವವನ್ನು ಪಡೆದುಕೊಂಡ ಅವರು ಇಂದು ಇದನ್ನು ಜಗತ್ತಿನ ಸಂಸ್ಥೆಯನ್ನಾಗಿ ಬೆಳೆಸಿದ ಪರಿ ಎಂಥವರನ್ನು ಒಂದು ಕ್ಷಣ ಹುಬ್ಬೇರಿಸುವಂತೆ ಮಾಡುತ್ತದೆ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರಭಾಕರ ಕೋರೆಯವರು ತ್ರಿದಾನಿಗಳು, ಸಪ್ತರ್ಷಿಗಳು ಹುಟ್ಟು ಹಾಕಿದ್ದ ಕೆಎಲ್ ಇ ಸಂಸ್ಥೆಯನ್ನು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಬೆಳೆಸಿರುವುದು ಸಣ್ಣ ಸಾಧನೆಯಲ್ಲ.
ಲೇಖಕರು✒️ಎಸ್.ಜೆ. ಏಳುಕೋಟಿ