ಬೆಳಗಾವಿ : ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಭೀಕರ ಕೊಲೆ ಪ್ರಕರಣ ವರದಿಯಾಗಿದೆ. ಬೆಳಗ್ಗೆ 11:30 ರ ಸುಮಾರಿಗೆ ಘಟನೆ ನಡೆದಿದೆ. ರೈತ ಗಲ್ಲಿಯಲ್ಲಿರುವ ಮನೆಯಲ್ಲಿ ಈ ಕೊಲೆ ನಡೆದಿದೆ.
ಮೃತರು 43 ವರ್ಷದ ರೇಣುಕಾ ಪದ್ಮುಕಿ ಎಂದು ಗುರುತಿಸಲಾಗಿದೆ. ಅವರು ಕಲ್ಯಾಣ ನಗರದ ನಿವಾಸಿ. ಅವರು ಆರೋಪಿಯ ಅತ್ತೆ.
ಆರೋಪಿ ಶುಭಮ್ ದತ್ತ ಬಿರ್ಜೆ ವಯಸ್ಸು 24 ರೈತಗಲ್ಲಿ ನಿವಾಸಿ. ಘಟನೆಗೆ ಸಂಬಂಧಿಸಿ ಒಟ್ಟು 3 ಆರೋಪಿಗಳನ್ನು ಬಂಧಿಸಲಾಗಿದೆ. ಶುಭಂ ಬಿರ್ಜೆ, ಆತನ ತಾಯಿ ಸುಜಾತಾ ಬಿರ್ಜೆ ಮತ್ತು ತಂದೆ ದತ್ತ ಬಿರ್ಜೆ ಬಂಧಿತರು.
ಪ್ರಾಥಮಿಕ ತನಿಖಾ ಮಾಹಿತಿಯ ಪ್ರಕಾರ, ದಂಪತಿ ಸುಮಾರು 7 ತಿಂಗಳ ಹಿಂದೆ ವಿವಾಹವಾಗಿದ್ದರು. ಆರೋಪಿಯ ಪತ್ನಿ 3 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು ಮತ್ತು ಅವನು ಅವಳನ್ನು ನೋಡಿಕೊಳ್ಳುತ್ತಿರಲಿಲ್ಲ. ಆದ್ದರಿಂದ ಅತ್ತೆ ಮಧ್ಯಪ್ರವೇಶಿಸಿ ಆಕೆಯ ಆರೈಕೆ ಮತ್ತು ಚಿಕಿತ್ಸೆಗೆ ಅವಕಾಶ ನೀಡಬೇಕಾಯಿತು. ಈ ವಿಷಯವಾಗಿ ಆತನ ಕುಟುಂಬ ಮತ್ತು ಹುಡುಗಿಯ ಕುಟುಂಬಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಮಂಗಳವಾರ ಮಕರ ಸಂಕ್ರಾಂತಿ ಹಬ್ಬ ಇದೆ. ಆ ಕಾರಣಕ್ಕೆ ತಮ್ಮ ಮಗಳಿಗೆ ಬೆಳಗ್ಗೆ 11ರ ಸುಮಾರಿಗೆ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಊಟ ಕೊಡಲು ಬಂದಿದ್ದರು. ಆಗ ಶುಭಂ ನೀನು ನಮ್ಮ ಮನೆಗೆ ಏಕೆ ಬರ್ತೀಯಾ ಎಂದು ಜಗಳ ಆರಂಭಿಸಿದ್ದಾನೆ. ಮಾತಿಗೆ ಮಾತು ವಿಕೋಪಕ್ಕೆ ಹೋಗಿದೆ. ಆಗ ಆರೋಪಿಯು ಮೃತ ವ್ಯಕ್ತಿಗೆ ಚಾಕುವಿನಿಂದ ಇರಿದಿದ್ದಾನೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.