ಬೆಳಗಾವಿ: ಒಂದು ಸಂಸ್ಥೆ ಆರ್ಥಿಕ ಸದೃಢವಾಗಿ ಜನರ ಮನದಲ್ಲಿ ವಿಶ್ವಾಸಕ್ಕೆ ಪಾತ್ರರಾಗಲು ಆ ಸಂಸ್ಥೆ ನೀಡುವ ಪ್ರಾಮಾಣಿಕ ಸೇವೆಯೇ ಪ್ರಮುಖ ಕಾರಣ. ಈ ನಿಟ್ಟಿನಲ್ಲಿ ಶಿವಗಿರಿ ಸೊಸೈಟಿ ಕಳೆದ 25 ವರ್ಷಗಳಿಂದ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಲಪ್ಪ ಜಗ್ಗಿನವರ ಮೆಚ್ಚುಗೆ ವ್ಯಕ್ತಪಡಿಸಿದರು.
ಶನಿವಾರ ಬೆಳಗಾವಿಯ ಮಹಾದ್ವಾರ ರಸ್ತೆಯ ಶಿವಗಿರಿ ಕೋ ಅಪ್ ಕ್ರೆಡಿಟ್ ಸೊಸೈಟಿಯಲ್ಲಿ ನಡೆದ ಸಂಘದ 26 ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಒಂದು ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಅವಶ್ಯಕವಾದ ಮಾನದಂಡಗಳನ್ನು ಹೊಂದಿರಬೇಕು. ಜೊತೆಗೆ ಆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವವರ ಸೇವೆ ಸಹಾ ಪ್ರಾಮಾಣಿಕವಾಗಿರಬೇಕು. ಸಹಕಾರ ಕ್ಷೇತ್ರದ ಪ್ರಗತಿಗೆ ದುಡಿಯುತ್ತಿರುವ ಶಿವಗಿರಿ ಸೊಸೈಟಿ ಆ ನಿಟ್ಟಿನಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವುದು ನಿಜಕ್ಕೂ ಪ್ರಶಂಸನೀಯ ಎಂದರು.
ಶಿವಗಿರಿ ಸೊಸೈಟಿಯ ಅಧ್ಯಕ್ಷ ಸುಜನ್ ಕುಮಾರ್ ಎಂ. ಮಾತನಾಡಿ, ಇಲ್ಲಿ ದೊರೆಯುವ ಸೌಲಭ್ಯಗಳನ್ನು ಯೋಗ್ಯ ರೀತಿಯಲ್ಲಿ ಬಳಸಿಕೊಂಡು ಎಲ್ಲರೂ ಸೇರಿ ಈ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸೋಣ ಎಂದು ಹೇಳಿದರು.
ಶಿವಗಿರಿ ಸೊಸೈಟಿ ಪ್ರತಿ ವರ್ಷ ಸಾಲ ಸೌಲಭ್ಯದ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸೇರಿದಂತೆ ಹತ್ತು ಹಲವು ರೀತಿಯಲ್ಲಿ ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಕಳೆದ 25 ವರ್ಷಗಳಿಂದ ಸೊಸೈಟಿ ತೆರೆಮರೆಯಲ್ಲಿ ಸಾಕಷ್ಟು ಸಾಮಾಜಿಕ ಕಳಕಳಿಯ ಉದ್ದೇಶವನ್ನು ಇಟ್ಟುಕೊಂಡು ಸೇವೆ ಸಲ್ಲಿಸುತ್ತಾ ಬಂದಿದೆ. ಗ್ರಾಹಕರ ಸೇವೆಯೊಂದಿಗೆ ಸೊಸೈಟಿ ವರ್ಷದಿಂದ ವರ್ಷಕ್ಕೆ ಲಾಭದಿಂದ ಮುನ್ನುಗುತ್ತಿದೆ. ಜನತೆಯ ಮನದಲ್ಲಿ ವಿಶ್ವಾಸ ಮೂಡಿಸಲು ಕಾರಣವಾಗಿದೆ. ಸೊಸೈಟಿ ನೀಡುತ್ತಿರುವ ಪ್ರಾಮಾಣಿಕ ಸೇವೆಯೇ ಇದಕ್ಕೆ ಕಾರಣ. ಜೊತೆಗೆ ಸೊಸೈಟಿಯ ಏಳಿಗೆ ಹಾಗೂ ಸಾಧನೆಗೆ ಸದಸ್ಯರು, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ಸಹಕಾರವೇ ಮುಖ್ಯ ಕಾರಣ ಎಂದು ಹೇಳಿದರು.
ಸೊಸೈಟಿ ಪ್ರಸ್ತುತ ಸಾಲಿನಲ್ಲಿ 16,59,662 ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇಕಡಾ 11 ರಷ್ಟು ಲಾಭಾಂಶ ಘೋಷಣೆ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.
ಸೊಸೈಟಿಯ ಉಪಾಧ್ಯಕ್ಷ ಸುನಿಲ್ ಆರ್. ಪೂಜಾರಿ ಮಾತನಾಡಿ,ಸೊಸೈಟಿಯಿಂದ ದೊರೆಯುವ ಸಾಲ ಸೌಲಭ್ಯಗಳನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಳ್ಳಬೇಕು. ನಾವು ಬೆಳೆಯುವುದರ ಜೊತೆಗೆ ಸೊಸೈಟಿಯನ್ನು ಇನ್ನಷ್ಟು ಬಲಪಡಿಸಲು ಸಹಕರಿಸಬೇಕು ಎಂದು ತಿಳಿಸಿದರು.
ಸೊಸೈಟಿಯ ಕಾನೂನು ಸಲಹೆಗಾರ ಮಂಜಯ್ಯ ಎಂ. ಶೆಟ್ಟಿ ಅವರು ಸಂಸ್ಥೆ ನಡೆದು ಬಂದ ಹಾದಿ ಮತ್ತು ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ
ಸಮೃದ್ದಿ ಸತೀಶ ಮೂಲ್ಯ ಅವರಿಗೆ ಗೌರವಿಸಲಾಯಿತು.
ಸೊಸೈಟಿಯಲ್ಲಿ ಆರಂಭದಿಂದ ಇಂದಿನವರೆಗೂ ವ್ಯವಹಾರ ಮಾಡುತ್ತಿರುವ ಹಿರಿಯ ಸದಸ್ಯರಾದ ಅಶೋಕ ಬುಡವಿ ಮತ್ತು ಅನಸೂಯ ಆರ್. ಚೌಗುಲೆ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಸ್ವಸಹಾಯ ಗುಂಪುಗಳ ಕ್ರಿಯಾಶೀಲ ಸದಸ್ಯೆಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಆಡಳಿತ ಮಂಡಳಿ ನಿರ್ದೇಶಕರಾದ ಬಾಳಪ್ಪ ಕಾಳೆನಟ್ಟಿ, ಸುಂದರ ಕೋಟ್ಯಾನ್, ಮಾಧವ ಕೋಟ್ಯಾನ್, ರಮೇಶ ಬಸನಾಯಕ, ಸುರೇಶ ಜತ್ತನ, ಬೇಬಿ ಆರ್.ಪೂಜಾರಿ, ಸಲಹಾ ಸಮಿತಿ ಸದಸ್ಯರಾದ ಹರೀಶ ಪೂಜಾರಿ, ಲಕ್ಷ್ಮೀ ಎಸ್. ಪೂಜಾರಿ ಮತ್ತುಸಿಬ್ಬಂದಿ ವರ್ಗದವರು ಹಾಗೂ ಪಿಗ್ಮಿ ಸಂಗ್ರಹಕರು ಹಾಜರಿದ್ದರು. ಸೊಸೈಟಿಯ ಕಾರ್ಯನಿರ್ವಾಹಕ ಚಂದ್ರು ಎಚ್ ಪೂಜಾರಿ ನಿರೂಪಿಸಿ, ವಂದಿಸಿದರು.