ಅಥಣಿ :
ಪರೋಪಕಾರಾರ್ಥಮಿದಂ ಶರೀರಂ ಎಂಬ ಮಾತಿನಂತೆ ಪರೋಪಕಾರ, ಜನ ಸೇವೆಯೇ ಮುಖ್ಯ ಧ್ಯೇಯವಾಗಿರಿಸಿಕೊಂಡು ತಮ್ಮ ರಾಜಕೀಯ ಬದುಕನ್ನು ಜನ ಸೇವೆಗಾಗಿ ಸಮರ್ಪಿಸಿಕೊಂಡವರು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರು.
ಕಷ್ಟ ಎಂದು ಹೇಳಿಕೊಂಡು ಅವರ ಬಳಿಗೆ ಯಾರೇ ಬಂದರೂ ಅಂಥವರನ್ನು ಬರಿಗೈಯಲ್ಲಿ ಹಿಂದಿರುಗಿಸದೇ, ತಮ್ಮ ಕೈಲಾದಷ್ಟು ಒಂದಿಷ್ಟು ಹಣವನ್ನು ತಕ್ಷಣವೇ ಅವರ ಕೈಗಿಟ್ಟು ಕಳುಹಿಸುವ ಉದಾರ, ಪರೋಪಕಾರ ಮನೋಭಾವದ ಕರುಣಾಮಯಿ ರಾಜಕಾರಣಿ ಎನ್ನುವ ಮಾತು ಜನಜನಿತವಾಗಿದೆ. ತಮ್ಮ ಎಷ್ಟೇ ಕೆಲಸ, ಕಾರ್ಯಗಳ ಒತ್ತಡದಲ್ಲಿದ್ದರೂ ಒಂದೆಡೆ ಜನರಿಗೆ ಆರ್ಥಿಕವಾಗಿ ನೆರವಾಗುವುದರೊಂದಿಗೆ, ಅವರ ಮನೋಬಲ ಹೆಚ್ಚಿಸುವ ಒಂದೆರಡು ಮಾತಗಳನ್ನಾಡಿ ಅವರ ಮನ ಗೆಲ್ಲುತ್ತಾರೆ. ಇಂತಹ ಸರಳ, ಸಹೃದಯಿ, ಪರೋಪಕಾರ ನಡೆಯೇ ರೈತ ಕುಟುಂಬದಲ್ಲಿ ಜನಿಸಿದ್ದ ಅವರನ್ನು ರಾಜ್ಯದ ಉಪಮುಖ್ಯಮಂತ್ರಿ ಹುದ್ದೆಯಂತಹ ಉನ್ನತ ಸ್ಥಾನಕ್ಕೇರಿಸಿದ್ದಲ್ಲದೇ, ರಾಜ್ಯ, ರಾಷ್ಟ್ರಮಟ್ಟದ ರಾಜಕೀಯದಲ್ಲೂ ಪ್ರಭಾವಿ ರಾಜಕಾರಣಿಯಾಗಿಸಿದೆ. ಈಗ ಇವರಂತೆಯೇ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿದ್ದಾರೆ ಅವರ ಹಿರಿಯ ಪುತ್ರ ಚಿದಾನಂದ ಸವದಿ.
ಕಳೆದ ಸೆಪ್ಟೆಂಬರ್ನಲ್ಲಿ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದ ಹಿರಿಯರಾದ ಈರಯ್ಯ ಶಿದ್ರಾಮಯ್ಯ ಮಂಗಿ ಎಂಬುವರು ಅನಾರೋಗ್ಯದಿಂದ ನಿಧನ ಹೊಂದಿದ್ದರು. ಇವರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ತಮ್ಮ ಮನೆಯ ಯಜಮಾನನ್ನು ಕಳೆದುಕೊಂಡಿದ್ದ ಈರಯ್ಯ ಅವರ ಕುಟುಂಬಕ್ಕೆ ದುಃಖದೊಂದಿಗೆ ಆರ್ಥಿಕವಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತ್ತು. ಈರಯ್ಯ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಆಗ ಚಿದಾನಂದ ಲ. ಸವದಿಯವರು ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಗುಡಿಸಿಲಿನಲ್ಲಿಯೇ ವಾಸವಿದ್ದ ಈ ಬಡಕುಟುಂಬದ ಸ್ಥಿತಿ ಕಂಡು, ಜೀವನಾವಶ್ಯಕ ವಸ್ತುಗಳಿಗಾಗಿ ಹಾಗೂ ತುರ್ತು ಮನೆ ಖರ್ಚಿಗೆಂದು 11,000 ರೂ. ನೀಡಿ ಬಂದಿದ್ದರು. ಬಳಿಕ ಅವರಿಗೆ ಅಗತ್ಯ ಸೂರಿನ ವ್ಯವಸ್ಥೆ ಕಲ್ಪಿಸಬೇಕೆಂದು ದಿ. 20-11-22 ರಂದು ಮತ್ತೆ ಅವರ ಮನೆಗೆ ಭೇಟಿ ನೀಡಿ ವೈಯಕ್ತಿಕವಾಗಿ 50,000 ರೂ. ನೆರವು ನೀಡಿದ್ದಾರೆ. ಮತ್ತೆ ಕುಟುಂಬಕ್ಕೆ ಸರ್ಕಾರದಿಂದಲೂ ಸೂಕ್ತ ಸೌಲಭ್ಯ, ನೆರವು ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಇದು ಈರಯ್ಯ ಅವರ ಕುಟುಂಬಸ್ಥರಲ್ಲಿ ನಿರಾಳ ಭಾವ ಮೂಡಿಸಿದೆ.
ಜನ ಸೇವೆಯ ಇಚ್ಛಾಶಕ್ತಿ ಇದೆ…
ನಮ್ಮ ಬಡ ಕುಟುಂಬದ ಸ್ಥಿತಿ ಕಂಡು, ನಮ್ಮ ಮನೆ ಮಗನಂತೆ ಚಿದಾನಂದ ಲ. ಸವದಿಯವರು ನಮಗೆ ಸಹಾಯ ಮಾಡಿದ್ದಾರೆ. ಅವರು ಇನ್ನೂ ಚಿಕ್ಕ ವಯಸ್ಸಿನವರಿದ್ದರೂ ದಾನ, ಧರ್ಮ, ಜನ ಸೇವೆ ಮಾಡಬೇಕು ಎನ್ನುವ ದೊಡ್ಡ ಗುಣ ಅವರದ್ದಾಗಿದೆ. ಇಂತಹ ಸಹಾಯ, ಸಹಕಾರದ ಸೇವೆ ಅವರನ್ನು ಯಾವತ್ತೂ ಕಾಪಾಡಲಿ. ಅವರಿಗೆ ಹಾಗೂ ಅವರ ಕುಟುಂಬಸ್ಥರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹೃದಯಾಂತರಾಳದಿಂದ ಹರಸುವುದರೊಂದಿಗೆ ಮೆಚ್ಚುಗೆ ಮಾತುಗಳನ್ನು ವ್ಯಕ್ತಪಡಿಸುತ್ತಾರೆ ಈರಯ್ಯ ಅವರ ಪತ್ನಿ ಜಯಶ್ರೀ ಈ. ಮಂಗಿ.
ಕೊಟ್ಟಲಗಿ ಗ್ರಾಮದ ಹಿರಿಯರು ಹಾಗೂ ಗ್ರಾಮಸ್ಥರು ಕೂಡ ಚಿದಾನಂದ ಲ. ಸವದಿಯವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಲಕ್ಷ್ಮಣ ಸಂ. ಸವದಿ ಹಾಗೂ ಅವರ ಹಿರಿಯ ಪುತ್ರ ಚಿದಾನಂದ ಲ. ಸವದಿಯವರು ನಿಜವಾಗಿ ಜನಸೇವೆ ಮಾಡಬೇಕೆಂಬ ಹಂಬಲ, ಜನಪರ ಕಾಳಜಿಯ ತುಡಿತದೊಂದಿಗೆ ಆಸಕ್ತಿ ಹಾಗೂ ಇಚ್ಛಾಶಕ್ತಿ ಹೊಂದಿ ರಾಜಕೀಯದಲ್ಲಿ ಹಗಲಿರುಳು ತಮ್ಮನ್ನು ತೊಡಗಿಸಿಕೊಂಡು ಬಂದಿದ್ದಾರೆ.
ಇವರಿಗೆ ಯಾವುದೇ ಜಾತಿ ರಾಜಕಾರಣ ಮಾಡುವುದು ಗೊತ್ತಿಲ್ಲ. ಸರ್ವ ಧರ್ಮದವರನ್ನು ತಮ್ಮ ಬಂಧು ಬಾಂಧವರಂತೆ ಕಾಣುತ್ತಾರೆ. ಹೀಗಾಗಿಯೇ ಜನಸಾಮಾನ್ಯರಿಂದ ಹಿಡಿದು ಎಲ್ಲ ವರ್ಗದ ಜನರೂ ಹಲವು ಸಮಸ್ಯೆಗಳನ್ನು ಹೊತ್ತು ಅವರ ಬಳಿ ನಿತ್ಯ ಬರುತ್ತಾರೆ. ಯಾಕೆಂದರೆ, ಅವರಿಗೆ ಚೆನ್ನಾಗಿ ಗೊತ್ತಿದೆ. ಇವರು ನಮ್ಮ ಬೇಡಿಕೆ, ಸಮಸ್ಯೆಗಳಿಗೆ, ಕೋರಿಕೆಗೆ ಮನ್ನಿಸಿ ಸ್ಪಂದಿಸುತ್ತಾರೆ ಎನ್ನುವುದು. ಜನರು ಅವರ ಮೇಲಿಟ್ಟಿರುವ ಪ್ರೀತಿ, ಅಭಿಮಾನ, ವಿಶ್ವಾಸಕ್ಕೆ ತಕ್ಕಂತೆ ಅವರ ಕೆಲಸ, ಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ. ಈಗ ಈರಯ್ಯ ಅವರ ಕುಟುಂಬಕ್ಕೆ 61000 ರೂ. ನೆರವು ನೀಡಿದ್ದಾರೆ. ಈ ಹಿಂದೆಯೂ ಕೊಟ್ಟಲಗಿ ಗ್ರಾಮದ ಹಿರಿಯರಾದ ಶಿವಬಾಯಿ ಚಪ್ಪರ ಎಂಬುವರ ಪುತ್ರ ಅಪಘಾತದಲ್ಲಿ ತೀರಿಹೋಗಿದ್ದರು. ಆ ಸಮಯದಲ್ಲಿ ಸಾಂತ್ವನ ಹೇಳಲು ಬಂದಿದ್ದ ಚಿದಾನಂದ ಲ. ಸವದಿಯವರ ಮುಂದೆ ಶಿವಬಾಯಿಯವರು ತಮ್ಮ ನೋವು ತೋಡಿಕೊಂಡಿದ್ದರು. ಚಿದಾನಂದ ಸವದಿಯವರು ತಕ್ಷಣವೇ ಅವರಿಗೆ 50 ಕೆಜಿ ಅಕ್ಕಿ, 50 ಕೆಜಿ ಗೋಧಿ, 50 ಕೆಜಿ ಜೋಳ ಸೇರಿ ಇತರ ಆಹಾರ ಧಾನ್ಯಗಳೊಂದಿಗೆ ಹಲವು ಜೀವನಾವಶ್ಯಕ ವಸ್ತುಗಳನ್ನು ಒದಗಿಸಿದ್ದರು. ಅಲ್ಲದೆ, 25,೦೦೦ ರೂ. ನೀಡಿ ಮಾನವೀಯತೆ ಮೆರೆದಿದ್ದರು. ಗ್ರಾಮದ ಅಪ್ಪಾಸಾಬ ಮುಧೋಳ ಎಂಬುವವರು ಅನಾರೋಗ್ಯದಿಂದ ನಿಧನರಾಗಿದ್ದರು. ಆಗ ಅವರ ಮನೆಗೆ ಭೇಟಿ ನೀಡಿದ್ದ ಚಿದಾನಂದ ಲ. ಸವದಿಯವರು 11,000 ರೂ. ನೀಡಿದ್ದರು. ಇವರ ಪುತ್ರಿಯ ಕಾಲೇಜು ಶಿಕ್ಷಣಕ್ಕೆ ನೆರವಾಲೆಂದು 30,000/ ರೂ ನೀಡಿದ್ದಾರೆ.
ಗ್ರಾಮದ ಕಂಬಿ ಮಲ್ಲಯ್ಯನ ದೇವರ ಮೂರ್ತಿಗೆ ನೆರವು ಕೇಳಿದಾಗ, 50,000/ ರೂ. ನೀಡಿ ತಮ್ಮ ಭಕ್ತಿ ಮೆರೆದರು. ಹೀಗೆ, ಅವರು ವೈಯಕ್ತಿಕವಾಗಿ ಗ್ರಾಮದಲ್ಲಿ ಹಾಗೂ ಅಥಣಿ ಕ್ಷೇತ್ರದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಹಾಗಾಗಿಯೇ ಅವರೆಂದರೆ ನಮಗೆ ತುಂಬಾ ಇಷ್ಟ. ಇವರ ಸಮಾಜಮುಖಿ ಕಾರ್ಯಗಳಿಂದಲೇ ಸಾಕಷ್ಟು ಜನರು, ನಾಯಕರು, ಕಾರ್ಯಕರ್ತರು, ಅಭಿಮಾನಿ ಬಳಗದ ನೆಚ್ಚಿನ ನಾಯಕರಾಗಿ ಸಾರ್ವಜನಿಕ ವಲಯದಲ್ಲಿ ಹೆಸರು ಮಾಡಿದ್ದಾರೆ. ನಾವು ಯಾವತ್ತೂ ಅವರ ಬೆನ್ನಿಗಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಎನ್ನುತ್ತಾರೆ ಕೊಟ್ಟಲಗಿ ಗ್ರಾಮದ ಹಿರಿಯರು.
ಹೆಚ್ಚುತ್ತಿದೆ ಜನಪ್ರಿಯತೆ, ಮುಗಿಬೀಳುತ್ತಿದೆ ಯುವಪಡೆ
ಈಗಾಗಲೇ ಲಕ್ಷ್ಮಣ ಸಂ. ಸವದಿಯವರು ಅಥಣಿ ಕ್ಷೇತ್ರದ ಅಭಿವೃದ್ಧಿ ಹಾಗೂ ಜನ ಸೇವಾ ಕಾರ್ಯದಿಂದ ರಾಜ್ಯದ ಜನಪ್ರಿಯ ರಾಜಕಾರಣಿಯಾಗಿ ಜನಮಾನಸದಲ್ಲಿ ನೆಲೆಯಾಗಿದ್ದಾರೆ. ಇವರ ಹಿರಿಯ ಪುತ್ರ ಚಿದಾನಂದ ಲ. ಸವದಿಯವರು ಕೂಡಾ ಅವರ ತಂದೆಯವರು ಸಾಗಿ ಬಂದ ರೀತಿಯಲ್ಲಿ ಸಾರ್ವಜನಿಕ ವಲಯದಲ್ಲಿ ಹೆಸರು ಮಾಡುತ್ತಿದ್ದಾರೆ. ಪಕ್ಷ ಸಂಘಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ನಿಮಿತ್ತ ಲಕ್ಷ್ಮಣ ಸಂ. ಸವದಿಯವರು ರಾಜ್ಯ, ಹೊರ ರಾಜ್ಯದ ಪ್ರವಾಸ ಕೈಗೊಂಡಿರುವ ಸಂದರ್ಭದಲ್ಲಿ ಅಥಣಿ ಕ್ಷೇತ್ರದ ಜನರ ನೋವು, ನಲಿವುಗಳಿಗೆ ಸ್ಪಂದಿಸಿ ಜನಮನ ಮುಟ್ಟುವಂತೆ ಹಲವಾರು ವರ್ಷಗಳಿಂದ ಕಾರ್ಯ ಮಾಡುತ್ತ ಬಂದಿದ್ದಾರೆ. ಕ್ಷೇತ್ರದಲ್ಲಿನ ಧಾರ್ಮಿಕ, ಸಾಮಾಜಿಕ, ಸಾರ್ವಜನಿಕ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರೊಂದಿಗೆ ತನು, ಮನ, ಧನದ ಸಹಾಯ ಮಾಡುತ್ತಾರೆ. ಕ್ಷೇತ್ರದ ಜನರೊಂದಿಗೆ ನೇರ ಸಂಪರ್ಕದಲ್ಲಿರುತ್ತಾರೆ. ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಜನರು ಇವರನ್ನು ಭೇಟಿ ಮಾಡುತ್ತಾರೆ. ಕೆಲವರು ಮೊಬೈಲ್ ಕರೆ ಮಾಡಿ ಮಾತನಾಡುತ್ತಾರೆ. ಎಲ್ಲರ ಕರೆಯನ್ನೂ ಸ್ವೀಕರಿಸಿ ಅವರ ಬೇಡಿಕೆ, ಸಮಸ್ಯೆಗಳನ್ನು ಆಲಿಸಿ, ಸಂಬಂಧಪಟ್ಟವರೊಂದಿಗೆ ಮಾತನಾಡಿ ಜನರ ಕೆಲಸ, ಕಾರ್ಯಗಳನ್ನು ಮಾಡಿಕೊಡುತ್ತಾರೆ.
ಸರ್ವ ಧರ್ಮಿಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಥಣಿ ಕ್ಷೇತ್ರದಲ್ಲಿ ಪಾದರಸದಂತೆ ಸಂಚರಿಸುತ್ತ, ಯವಜನರಲ್ಲಿ ಮಿಂಚಿನ ಸಂಚಲನ ಉಂಟು ಮಾಡಿದ್ದಾರೆ. ತಮ್ಮ ಹಿತ-ಮಿತವಾದ ಮಾತುಗಳಿಂದ ಜನಮನ ಮುಟ್ಟಿದ್ದಾರೆ. ಹಿರಿಯರು-ಕಿರಿಯರೆಲ್ಲ ಪ್ರೀತಿ, ಅಭಿಮಾನದಿಂದ ಇವರು ಹೋದಲ್ಲೆಲ್ಲ ಸೆಲ್ಫಿ, ಫೊಟೊ ತೆಗಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಯುವ ಜನತೆಯ ಆಶಾಕಿರಣವಾಗಿ ಯುವಪಡೆಯ ಮನಸೆಳೆದಿದ್ದಾರೆ. ಇವರೆಲ್ಲ ಪ್ರೀತಿ, ಅಭಿಮಾನದಿಂದ ಚಿದು ಅಣ್ಣಾ ಸವದಿಯಂದು ಕರೆಯುತ್ತಾರೆ. ತಮ್ಮ ನೆಚ್ಚಿನ ಯುವ ನಾಯಕನ ಪರ ಜಯಕಾರ ಹಾಕುತ್ತಿದ್ದಾರೆ. ಜನರು ತಂದೆಗೆ ತಕ್ಕ ಮಗನಂತೆ ಯುವ ನಾಯಕ ಚಿದಾನಂದ ಲ. ಸವದಿ ಹೊರಹೊಮ್ಮಿದ್ದಾರೆ ಎಂದು ತಮ್ಮ ಅಭಿಮಾನ, ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕರೋನಾ ಸಮಯದಲ್ಲಿ ಯುವ ಪಡೆ ಕಟ್ಟಿಕೊಂಡು
ಆಹಾರ ಧಾನ್ಯದ ಕಿಟ್ ವಿತರಿಸಿದ್ದ ಜನನಾಯಕ :
ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ ಸಂ. ಸವದಿಯವರು ಕರೊನಾ ಕಾಲದಲ್ಲಿ ಜನಸಾಮಾನ್ಯರು ಸಂಕಷ್ಟಕ್ಕೊಳಗಾಗಿದ್ದ ವೇಳೆ ಕೋಟ್ಯಂತರ ರೂ. ಸ್ವಂತ ಹಣದಲ್ಲಿ 1.05 ಲಕ್ಷ ಜೀವನಾವಶ್ಯಕ ವಸ್ತುಗಳನ್ನೊಳಗೊಂಡ ಆಹಾರ ಧಾನ್ಯಗಳ ಕಿಟ್ಗಳನ್ನು ಅಥಣಿ ಕ್ಷೇತ್ರದ ಪ್ರತಿಯೊಬ್ಬರ ಮನೆ ಮನೆಗೆ ತಲುಪಿಸಿದ್ದರು. ಆಗ ಚಿದಾನಂದ ಲ. ಸವದಿ ಹಾಗೂ ಅವರ ಅಭಿಮಾನಿ ಬಳಗವು ಹಗಲಿರುಳೆನ್ನದೇ ತಮ್ಮ ಜೀವಪಣಕ್ಕಿಟ್ಟು, ಆಹಾರ ಧಾನ್ಯದ ಕಿಟ್ಗಳನ್ನು ಎಲ್ಲರಿಗೂ ತಲುಪಿಸುವ ಕಾರ್ಯ ಮಾಡಿ ಭೇಷ್ ಎನ್ನಿಸಿಕೊಂಡಿತ್ತು. ಬಡವರು, ಕೂಲಿ ಕಾರ್ಮಿಕರು, ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಒಂದು ತಿಂಗಳ ಕಾಲ ನಿತ್ಯ ಮೂರರಿಂದ ನಾಲ್ಕು ಗ್ರಾಮಗಳಿಗೆ ಸಂಚಾರ ಮಾಡಿ ಆಹಾರ ಧಾನ್ಯದ ಕಿಟ್, ಸ್ಯಾನಿಟೈಸರ್, ಕರೊನಾ ಸೇನಾನಿಗಳಿಗೆ ಕೋವಿಡ್ ಕಿಟ್, ಮತ್ತಿತರ ವಸ್ತುಗಳನ್ನು ವಿತರಿಸಿದ್ದರು. ಅಲ್ಲದೆ, 1400 ಸ್ವ ಸಹಾಯ ಸಂಘಗಳ ಮೂಲಕ ಸುಮಾರು 35,೦೦೦ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಲ್ಪಿಸಿಕೊಟ್ಟಿದ್ದಾರೆ. ಕರೊನಾ ಚಿಕಿತ್ಸೆಗೆ ಸ್ವಂತ ಖರ್ಚಿನಿಂದ ಆಸ್ಪತ್ರೆ ಸ್ಥಾಪನೆ ಮಾಡಿ ನೆರವಿಗೆ ಧಾವಿಸಿದ್ದರು. ಇಂತಹ ಎಲ್ಲ ಜನಪರ ಕಾರ್ಯಗಳು ಲಕ್ಷ್ಮಣ ಸಂ. ಸವದಿ ಹಾಗೂ ಚಿದಾನಂದ ಲ. ಸವದಿಯವರನ್ನು ಹೆಚ್ಚು ಪ್ರಚಲಿತದಲ್ಲಿರುವಂತೆ ಮಾಡಿವೆ.
ನುಡಿದಂತೆ ನಡೆದರು, ಜನಮನಗೆದ್ದರು:
ಹೌದು, ಲಕ್ಷ್ಮಣ ಸಂ. ಸವದಿಯವರು ಕೊಟ್ಟ ಮಾತಿನಂತೆ ನಡೆಯುವ ರಾಜಕಾರಣಿ. ಅವರು ಅಥಣಿ ಕ್ಷೇತ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕವೇ ಅಥಣಿ ಅಭಿವೃಯತ್ತ ಮುಖ ಮಾಡಿತು.
ಬರಡು ಭೂಮಿಗೆ ಕೃಷ್ಣೆಯ ನೀರು ಹರಿಸಿದರು. ಶೇ. 75ಕ್ಕಿಂತ ಹೆಚ್ಚಿನ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದರು. ಈ ಮೂಲಕ ಅಥಣಿ ಜನಮನದಲ್ಲಿ ಆಧುನಿಕ ಭಗೀರಥರೆನಿಸಿದರು. ತಾಲೂಕಿನಲ್ಲಿ ಪ್ರಮುಖವಾಗಿ ಶೈಕ್ಷಣಿಕ ಕ್ಷೇತ್ರದ ಏಳ್ಗೆಗಾಗಿ ಸರ್ಕಾರಿ ಪ್ರೌಢ ಶಾಲೆಗಳು, ಸರ್ಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳು, ಸರ್ಕಾರಿ ಐಟಿಐ, ಡಿಪ್ಲೊಮಾ ಕಾಲೇಜು ಸ್ಥಾಪಿಸುವುದರೊಂದಿಗೆ ಇತರ ಶೈಕ್ಷಣಿಕ ಬೆಳವಣಿಗೆಗೆ ಪೂರಕ ಕಾರ್ಯಗಳ ಮೂಲಕ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲ ಕಲ್ಪಿಸಿದ್ದಾರೆ. ಪಟ್ಟಣದಲ್ಲಿ ಹೈಟೆಕ್ ಬಸ್ ನಿಲ್ದಾಣ, ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಸ್ಥಾಪನೆ, ತಾಲೂಕಿನ ಎಲ್ಲ ಪ್ರದೇಶಕ್ಕೂ ನೀರಾವರಿ ಸೌಲಭ್ಯ ಕಲ್ಪಿಸಲು ಇತ್ತೀಚೆಗೆ 140 ಕೋಟಿ. ರೂ. ವೆಚ್ಚದ ಕೆರೆಗಳ ತುಂಬುವ ಮೊದಲನೆ ಹಂತದ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಕೊಕಟನೂರ ಗ್ರಾಮದಲ್ಲಿ ಪಶು ವೈದ್ಯಕೀಯ ಕಾಲೇಜು ಸ್ಥಾಪನೆ, ರೈತರ ಮಕ್ಕಳ ಅನುಕೂಲಕ್ಕಾಗಿ ಅಥಣಿಗೆ ಕೃಷಿ ಕಾಲೇಜ್ ಮಂಜೂರು, ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ 35 ಕೋಟಿ ರೂ. ವೆಚ್ಚದಲ್ಲಿ ಕೊಟ್ಟಲಗಿ-ಅಥಣಿ ರಸ್ತೆಗೆ ಚಾಲನೆ, ಅಥಣಿ ಪಟ್ಟಣದಲ್ಲಿ ಹೈಟೆಕ್ ಸಿ.ಸಿ. ರಸ್ತೆಗಳು, ಇತ್ತೀಚೆಗೆ ಅಥಣಿ ಪಟ್ಟಣಕ್ಕೆ ಮಂಜೂರಾದ 73.5 ಕೋಟಿ ರೂ. ವೆಚ್ಚದ 24 ×7 ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಯೋಜನೆ ಸೇರಿದಂತೆ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ತಮ್ಮ ಸತತ ಪ್ರಯತ್ನದಿಂದ ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ನಿರತರಾಗಿದ್ದಾರೆ. ಹೀಗೆ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ. ಹೀಗಾಗಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಚಿದಾನಂದ ಲ. ಸವದಿಯವರು ಕೂಡ ಜನರಿಗೆ ಕೊಟ್ಟ ಮಾತಿನಂತೆಯೇ ಅವರಿಗೆ ನೆರವು ನೀಡುತ್ತ, ನುಡಿದಂತೆ ನಡೆಯುವ ಮೂಲಕ ಅವರ ತಂದೆಯವರು ನಡೆದು ಬಂದ ದಾರಿಯಲ್ಲೇ ಹೆಜ್ಜೆ ಹಾಕುತ್ತ ಸಾಗಿದ್ದಾರೆ. ಇಂತಹ ನಡೆಯೇ ಅವರನ್ನು ಜನಮನಕ್ಕೆ ಇನ್ನಷ್ಟು ಹತ್ತಿರವಾಗುವಂತೆ ಮಾಡಿದೆ.
ಜನಮನದಲ್ಲಿ ತೀವ್ರ ಕುತೂಹಲ..
ನಮ್ಮ ಸಾಹುಕಾರ್…ನಮ್ಮ ಹೆಮ್ಮೆ…..ಇದು ಅಥಣಿ ತಾಲೂಕಿನ ಜನರು ತಾವು ಪ್ರೀತಿಸಿ, ಆರಾಧಿಸಿ, ರಾಜ್ಯ ಹಾಗೂ ರಾಷ್ಟ್ರಮಟ್ಟದ ರಾಜಕೀಯ ರಂಗದಲ್ಲಿ ಬೆಳೆಸಿದ ಜನಮೆಚ್ಚಿದ ನಾಯಕ ಲಕ್ಷ್ಮಣ ಸಂ. ಸವದಿಯವರ ಕುರಿತು ತುಂಬು ಅಭಿಮಾನದಿಂದ ಹೇಳುವ ಮನದಾಳದ ಮಾತು.
ಅಥಣಿ ಯುವ ಜನತೆಯ ಆಶಾಕಿರಣ..ಚಿದುಅಣ್ಣಾ ಲ. ಸವದಿ..
ಇದು ಯುವಕರು ತಮ್ಮ ನೆಚ್ಚಿನ ಯುವ ನಾಯಕನ ಕುರಿತು ವ್ಯಕ್ತಪಡಿಸುವ ಅಭಿಮಾನದ ಮಾತು. ಜನಮನ ಗೆದ್ದಿರುವ ಈ ಇಬ್ಬರು ನಾಯಕರ ಪರ ಅವರ ಅಸಂಖ್ಯಾತ ಅಭಿಮಾನಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಬೆಂಬಲದ ಕೂಗು, ಅಬ್ಬರದ ಅಲೆ ಕಂಡು ಬರುತ್ತಿದೆ. ಇತ್ತೀಚೆಗೆ ಅಥಣಿಯಲ್ಲಿ ನಡೆದ ತಳವಾರ ಸಮಾಜದ ಬೃಹತ್ ಸಮಾವೇಶದಲ್ಲಿ ಅವರ ಅಭಿಮಾನಿಗಳು ”
ಅಥಣ್ಯಾಗ್ ಸವದಿ, ದಿಲ್ಲ್ಯಾಗ್ ಮೋದಿ..ದಿಲ್ಯಾಗ್ ಮೋದಿ..ರಾಜ್ಯಕ್ ಸವದಿ ಎಂದು ಘೋಷಣೆ ಮೊಳಗಿಸಿದ್ದೇ ಸಾಕ್ಷಿಯಾಗಿದೆ. ಇದು ಈಗ ಮತ್ತಷ್ಟು ಸದ್ದು ಮಾಡುತ್ತಿದ್ದು, ಜನಮನದಲ್ಲಿ ಮಿಂಚಿನ ಸಂಚಲನವನ್ನೇ ಉಂಟು ಮಾಡಿದೆ. ಸಾಮಾಜಿಕ ಜಾಲತಾಣದಲ್ಲೂ ಇವರ ಪರ ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದು ಅಥಣಿ ಕ್ಷೇತ್ರವಷ್ಟೇ ಅಲ್ಲ, ರಾಜ್ಯದ ಜನತೆ ಹಾಗೂ ರಾಜಕೀಯ ವಲಯದಲ್ಲೂ ತೀವ್ರ ಕುತೂಹಲಕ್ಕೆಡೆ ಮಾಡಿದೆ.