ಬೆಂಗಳೂರು :ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಬೆನ್ನಲ್ಲೇ ಈ ಹಿಂದಿನ ಸರ್ಕಾರದ ಹಲವು ಯೋಜನೆ, ಹಲವು ಕಾಯ್ದೆಗಳಿಗೆ ಕತ್ತರಿ ಹಾಕುತ್ತಿದೆ. ಇದರ ಮುಂದುವರಿದ ಭಾಗವಾಗಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ಘೋಷಿಸಿದೆ. ಬಿಜೆಪಿ ಸೇರಿಸಿದ್ದ ಪಠ್ಯಗಳನ್ನು ತೆಗೆದು ಹಾಕಲು ನಿರ್ಧರಿಸಿರುವ ಸಿದ್ದರಾಮಯ್ಯ ಸರ್ಕಾರ, ಇದೀಗ ಬಿಜೆಪಿ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಗೆ ಕೊಕ್ ನೀಡಲು ಸಂಪುಟ ಸಭೆಯ ಅನುಮೋದನೆ ಪಡೆಯಲಾಗಿದೆ. ಬಿಜೆಪಿಯ ಮಹತ್ವಾಕಾಂಕ್ಷಿಯ ಮತಾಂತರ ನಿಷೇಧ ಕಾಯ್ದೆಗೆ ಇದೀಗ ಕಾಂಗ್ರೆಸ್ ಸರ್ಕಾರ ಬ್ರೇಕ್ ಹಾಕಿದೆ.
ಈ ಬಾರಿಯ ಚನಾವಣೆಯಲ್ಲಿ ಕಾಂಗ್ರೆಸ್, ಮತಾಂತರ ನಿಷೇಧ ಕಾಯ್ದೆ ವಾಪಸ್, ಗೋ ಹತ್ಯಾ ನಿಷೇಧ ಕಾಯ್ದೆ ವಾಪಸ್, ಹಿಜಾಬ್ ನಿಷೇಧ ಆದೇಶಗಳನ್ನು ವಾಪಸ್ ಪಡೆಯುವುದಾಗಿ ಹೇಳಿತ್ತು.ಇಂದು ನಡದ ಸಂಪುಟ ಸಭೆಯಲ್ಲಿ ಹಲವು ನಿರ್ಧಾರಗಳನ್ನ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಮತಾಂತರ ನಿಷೇಧ ಕಾಯ್ದೆ ಪ್ರಮುಖವಾಗಿದೆ. ಬಿಜೆಪಿ ಆಡಳಿತದಲ್ಲಿ ಜಾರಿಗೆ ತಂದಿರುವ ಜನವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುತ್ತೇವೆ ಎಂದು ಸಚಿವ ಹೆಚ್ಕೆ ಪಾಟೀಲ್ ಹೇಳಿದ್ದಾರೆ.
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿತ್ತು. ಈ ಮೂಲಕ ಷಡ್ಯಂತ್ರದ ಮೂಲಕ, ಬಲವಂತದ, ಆಮಿಷದ ಮತಾಂತರಕ್ಕೆ ಕಡಿವಾಣ ಹಾಕಲು ಮುಂದಾಗಿತ್ತು. ಬಿಜೆಪಿ ಆಡಳಿತದಲ್ಲಿ ತಂದಿದ್ದ ಈ ಮತಾಂತರ ನಿಷೇಧ ಕಾಯ್ದೆಗೆ ಕೊಕ್ ನೀಡಿ, ಕೆಲ ಬದಲಾವಣೆ ಮಾಡಲಾಗುವುದು ಎಂದು ಹೆಚ್ಕೆ ಪಾಟೀಲ್ ಹೇಳಿದ್ದಾರೆ.
ಕೆಲವು ಬದಲಾವಣೆ ಮೂಲಕ ಮತಾಂತರ ನಿಷೇಧ ಕಾಯ್ದೆ ವಿಧೇಯಕ ತರಲು ಸಂಪುಟ ಸಭೆ ತಿರ್ಮಾನ ಮಾಡಿದೆ ಎಂದು ಹೆಚ್ಕೆ ಪಾಟೀಲ್ ಹೇಳಿದ್ದಾರೆ. ಕಾಂಗ್ರೆಸ್ ಸಂಪುಟ ಸಭೆ ತೀರ್ಮಾಗಳು ಹೊರಬರುತ್ತಿದ್ದಂತೆ ಬಿಜೆಪಿ ಆಕ್ರೋಶ ಹೊರಹಾಕಿದೆ.