ಬೆಳಗಾವಿ : ಸಂಶೋಧನಾ ಚಟುವಟಿಕೆಗೆ ಧನಸಹಾಯ ಮಾಡುವ ಅನೇಕ ಸಂಸ್ಥೆಗಳು ನಮ್ಮಲ್ಲಿವೆ. ಅಂಥ ಸಂಸ್ಥೆಗಳಿಗೆ ನಮ್ಮ ಸಂಶೋಧಕರು ಸರಿಯಾದ ಉಪಕ್ರಮದಲ್ಲಿ ಸಂಶೋಧನಾ ಪ್ರಸ್ತಾವನೆ ಮತ್ತು ಅದರ ರೂಪರೇಷೆ ಸಲ್ಲಿಸದೇ ಇರುವುದರಿಂದ ಅವು ತಿರಸ್ಕೃತವಾಗುತ್ತಿವೆ. ಸಂಶೋಧನೆ ಆಳವಾಗಿ, ಗುಣಾತ್ಮಕವಾಗಿದ್ದರೆ ಅದಕ್ಕೆ ಬೇಡಿಕೆಯಿದೆ. ಸತ್ಯದ ಶೋಧನೆಯೇ ಸಂಶೋಧನೆಯ ಉಸಿರು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಹೇಳಿದರು.
ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗದಿಂದ ದಿ. 27ರಂದು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಭಾರತದಲ್ಲಿನ ಧನಸಹಾಯ ಸಂಸ್ಥೆಗಳಿಗೆ ಪರಿಣಾಮಕಾರಿ ಸಂಶೋಧನಾ ಪ್ರಸ್ತಾಪಗಳನ್ನು ರಚಿಸುವುದು ಮತ್ತು ಅದರ ರೂಪರೇಷಗಳ ವಿಧಾನಗಳ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ದೇಶಿಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧನೆಗೆ ಹೆಚ್ಚು ಮಹತ್ವ ನೀಡಿದರೆ, ವಿದೇಶಿ ಶಿಕ್ಷಣ ಸಂಸ್ಥೆಗಳು ಬೋಧನೆಗಿಂತಲೂ ಚರ್ಚೆ, ವಿಮರ್ಶೆಗೆ ಹೆಚ್ಚು ಮಹತ್ವ ನೀಡುತ್ತವೆ. ಅದು ವಿದ್ಯಾರ್ಥಿಗಳನ್ನು ಸಂಶೋಧನಾತ್ಮಕವಾಗಿ ಬೆಳೆಸುತ್ತದೆ.
ಸಂಶೋಧನೆಗಳು ಸಮಕಾಲಿನ ಜ್ಞಾನ, ತಂತ್ರಜ್ಞಾನ, ಸಮಕಾಲಿನ ಸಂವೇದನೆ, ಸಮಕಾಲಿನ ಸಮಾಜದ ಬೇಡಿಕೆ, ಸಮಾಜದ ವಿವೇಕ, ವಿಷಯದ ತಲಸ್ಪರ್ಶಿಯು ಒಳಗೊಂಡಿರಬೇಕು.
ಇಂದಿನ ಬಹುತೇಕ ಸಂಶೋಧನೆಗಳು ಪದವಿಗಾಗಿ ಇವೆ. ಯಾವುದು ಮನುಕುಲದ ಒಳಿತಿಗಾಗಿ, ಸಮಾಜದ ಉನ್ನತಿಗಾಗಿ ಸಂಶೋಧನೆಗಳಾಗುತ್ತವೆಯೋ ಅವು ಸಮಾಜದಲ್ಲಿ ಗಟ್ಟಿಯಾಗಿ ಉಳಿಯುತ್ತವೆ. ಅವು ಶಾಶ್ವತವಾದ ಸ್ಥಾನ ಪಡೆಯುತ್ತವೆ. ಸಮಕಾಲೀನ ಸಂದರ್ಭದಲ್ಲಿ ಹೆಚ್ಚಿನ ಸಂಶೋಧನೆಗಳು ಸತ್ಯದ ಪಥದಲ್ಲಿ ಸಾಗುವ ಬದಲು ಟೊಳ್ಳಿನ ದಾರಿಯಲ್ಲಿ ಸಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರೊ. ಬಸವರಾಜ ಎಸ್. ಬೆಣ್ಣಿ ಮಾತನಾಡಿ, ನಾವು ಮಾಡುವ ಸಂಶೋಧನೆಯ ಮೇಲೆ ಪ್ರೀತಿ ಇರಬೇಕು. ಆ ಪ್ರೀತಿಯೇ ನಮ್ಮನ್ನು ಅದರಲ್ಲಿ ಮುಂದುವರಿಯುವಂತೆ ಮಾಡಿ ಉತ್ತಮ ಸಂಶೋಧನೆಯ ಫಲಿತಾಂಶ ಹೊರಬರುವಂತೆ ಮಾಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ ಎಂ. ಜಿ. ಹೆಗಡೆ ಅವರು
ವಾಣಿಜ್ಯ ವಿಷಯದ ಪರಿಕಲ್ಪನೆ ಬಂದುದು ನೂರಾ ಮೂವತ್ತು ವರ್ಷಗಳ ಹಿಂದೆ. ಅದು ವಸಾಹತು ಕಾಲದ ಮನಸ್ಥಿತಿ. ಅದಕ್ಕೆ ತಕ್ಕಂತೆ ಪಠ್ಯಕ್ರಮ ಸಿದ್ಧವಾಯಿತು. ದುರ್ದೈವ ಬದಲಾದ ಕಾಲಘಟ್ಟದಲ್ಲಿ ನಾವು ಅದರ ಮಾನಸಿಕಸ್ಥಿತಿಯಿಂದ ಹೊರಬಂದಿಲ್ಲ. ಸಂಶೋಧನೆ ಎಂಬುದು ಒಂದು ನೈಸರ್ಗಿಕ ಪ್ರಕ್ರಿಯೆ. ಅದು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಇದೆ. ಅದಕ್ಕೆ ಪದವಿ, ಇನ್ನಿತರ ಉನ್ನತ ಶೈಕ್ಷಣಿಕ ಅರ್ಹತೆ ಬೇಕಿಲ್ಲ. ಆಧುನಿಕ ಸಂದರ್ಭದಲ್ಲಿ ಮನುಷ್ಯನಿಂದ ಎಲ್ಲವೂ ಸರ್ವನಾಶವಾಗುತ್ತಿರುವಾಗ ಸುಸ್ಥಿರದ ಕೂಗು ಕೇಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಮುಕುಂದ ಮುಂಡರಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಸನಾ ಯಾದವಾಡ ಪರಿಚಯಿಸಿದರು, ಉಪನ್ಯಾಸಕ ರಾಘವೇಂದ್ರ ತಳವಾರ ವಂದಿಸಿದರು, ವಿದ್ಯಾರ್ಥಿನಿಯರಾದ ಸುಪ್ರಿಯಾ ಗಿರನ್ನವರ್ ಹಾಗೂ ಬಷಿರಾ ಮಿಲಾದಿ ನಿರೂಪಿಸಿದರು. ತೇಜಸ್ವಿನಿ ಬಿರಾದಾರ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.