ಕೋಟಾ: ರಾಜಸ್ಥಾನದ ಕೋಟಾದ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಸುಮಾರು 12 ಅಡಿ ಉದ್ದದ ಹೆಬ್ಬಾವಿನ ಬಿಗಿ ಹಿಡಿತಕ್ಕೆ ಸಿಲುಕಿ ಒದ್ದಾಡಿದ ಆತಂಕಕಾರಿ ಘಟನೆ ಸೋಮವಾರ ನಡೆದಿದೆ.
ಕೃಷ್ಣ ಇಂಜಿನಿಯರಿಂಗ್ ಗುತ್ತಿಗೆ ಕಂಪನಿಯಲ್ಲಿ ಕೆಲಸ ಮಾಡುವ ನಂದ್ ಸಿಂಗ್ (53) ಎಂಬ ಕಾರ್ಮಿಕ ಬೆಳಿಗ್ಗೆ ಸುಮಾರು 11:30 ರ ಸುಮಾರಿಗೆ ವಿದ್ಯುತ್ ಸ್ಥಾವರದ ಯೂನಿಟ್-5 ರಲ್ಲಿ ಪೈಪ್ಲೈನ್ ದುರಸ್ತಿಗೆ ಹೋಗಿದ್ದರು. ಈ ಪ್ರದೇಶದಲ್ಲಿ ದಟ್ಟವಾಗಿ ಬೆಳೆದಿದ್ದ ಹುಲ್ಲು ಮತ್ತು ಪೊದೆಗಳ ನಡುವೆ ಅಡಗಿದ್ದ ಹೆಬ್ಬಾವು ದಿಢೀರನೆ ಅವರ ಮೇಲೆ ಎರಗಿ, ಅವರ ಕಾಲುಗಳನ್ನು ಸುತ್ತಿಕೊಂಡು ಬಲವಾಗಿ ಬಿಗಿ ಹಿಡಿದುಕೊಂಡಿದೆ.
ಹೆಬ್ಬಾವಿನ ಹಿಡಿತ ಎಷ್ಟು ಪ್ರಬಲವಾಗಿತ್ತೆಂದರೆ, ನಂದ್ ಸಿಂಗ್ ಅವರು ತಮ್ಮ ಕಾಲನ್ನು ಬಿಡಿಸಿಕೊಳ್ಳಲು ಸುಮಾರು 10 ನಿಮಿಷಗಳ ಕಾಲ ಹೋರಾಡಿದರು, ಆದರೆ ಹೆಬ್ಬಾವು ಅವರನ್ನು ಬಿಡಲಿಲ್ಲ. ನಂತರ ಅವರು ನೋವಿನಿಂದ ಅವರು ಜೋರಾಗಿ ಕಿರುಚಿಕೊಂಡಿದ್ದಾರೆ.
ನಂದ ಸಿಂಗ್ ಅವರ ಕಿರುಚಾಟ ಕೇಳಿದ ಸಮೀಪದ ಇತರ ಕಾರ್ಮಿಕರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಅವರು ಸುಮಾರು 10 ನಿಮಿಷಗಳ ಕಾಲ ಕೋಲುಗಳು ಮತ್ತು ಹಗ್ಗಗಳನ್ನು ಬಳಸಿ ಹೆಬ್ಬಾವಿನ ಬಿಗಿ ಹಿಡಿತದಿಂದ ನಂದ ಸಿಂಗ್ ಅವರನ್ನು ಪಾರು ಮಾಡಿದರು. ರಕ್ಷಣೆ ಮಾಡಿದ ನಂತರ, ಜನರು ಹೆಬ್ಬಾವಿಗೆ ದೊಣ್ಣೆಗಳಿಂದ ಹೊಡೆದಿದ್ದು, ಅದು ಗಾಯಗೊಂಡು ಅರೆ-ಪ್ರಜ್ಞಾವಸ್ಥೆಯಲ್ಲಿತ್ತು.
ಗಂಭೀರವಾಗಿ ಗಾಯಗೊಂಡ ನಂದ್ ಸಿಂಗ್ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಎಂ.ಬಿ.ಎಸ್. ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಈ ಘಟನೆಯ ದೃಶ್ಯಾವಳಿಗಳ ವೀಡಿಯೋ ವೈರಲ್ ಆಗಿದೆ.
ಕೋಟಾ ಸೂಪರ್ ಥರ್ಮಲ್ ಪವರ್ ಸ್ಟೇಷನ್ ಸ್ಥಾವರದ ಬಿಳಿ ನೀರಿನ ಪೈಪ್ಲೈನ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ, ಅದನ್ನು ರಿಪೇರಿ ಮಾಡಲು ಹೋದಾಗ, ಅಲ್ಲೇ ಇದ್ದ ಹೆಬ್ಬಾವು ನನ್ನ ಮೇಲೆ ದಾಳಿ ಮಾಡಿದೆ. ಕಾಲನ್ನು ಬಿಗಿಯಾಗಿ ಹಿಡಿದು ಸುಮಾರು 10 ನಿಮಿಷಗಳ ಕಾಲ ಉಸಿರುಗಟ್ಟಿಸಿದೆ. ನಂತರ ನನ್ನ ಸಹೋದ್ಯೋಗಿಗಳು ಬಂದು ಬಿಡಿಸಿದ್ದಾರೆ” ಎಂದು ನಂದ್ ಸಿಂಗ್ ಹೇಳಿದ್ದಾರೆ.
ಸ್ಥಾವರದಲ್ಲಿ ಭದ್ರತಾ ವ್ಯವಸ್ಥೆಗಳ ಕೊರತೆ
ಉಷ್ಣ ವಿದ್ಯುತ್ ಸ್ಥಾವರದ ಸುತ್ತ ದಟ್ಟವಾದ ಅರಣ್ಯವಿರುವುದರಿಂದ ಈ ಹಿಂದೆ ಹಲವು ಬಾರಿ ಚಿರತೆ, ಕರಡಿ ಮತ್ತು ಇತರ ವನ್ಯಜೀವಿಗಳು ಕಾಣಿಸಿಕೊಂಡಿವೆ. ಆದರೆ ಇಲ್ಲಿ ಯಾವುದೇ ನಿರ್ದಿಷ್ಟ ಸುರಕ್ಷತಾ ವ್ಯವಸ್ಥೆಗಳನ್ನು ಮಾಡಿಲ್ಲ ಎಂದು ಹಲವು ಕಾರ್ಮಿಕರು ದೂರಿದ್ದಾರೆ. ಹಾಗೂ ಕೂಡಲೇ ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.


