ಬೆಳಗಾವಿ : ಭಾರತದ ನಾರಿಯರು ಶೌರ್ಯ, ಸಾಹಸದ ಮೂಲಕ ಸಂಸ್ಕೃತಿಯ ರಕ್ಷಣೆಗಾಗಿ ಜೀವನವನ್ನು ಪಣಕ್ಕಿಟ್ಟು ಹೋರಾಡಿದರು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಅಭಿಪ್ರಾಯಪಟ್ಟರು.
ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂ. ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠ, ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘ, ಕರ್ನಾಟಕ ಇವರ ಸಹಯೋಗದಲ್ಲಿ “ಭರತ ವರ್ಷದ ಮೂವರು ವೀರನಾರಿಯರು” ಎಂಬ ವಿಷಯದ ಕುರಿತು ಕುವೆಂಪು ಸಭಾಂಗಣದಲ್ಲಿ ಸೆ. 16ರಂದು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಭಾರತದಲ್ಲಿ ಪುರುಷರಿಗೆ ಹೋಲಿಸಿದಾಗ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಪ್ರಮಾಣ ಕಡಿಮೆ. ಆದರೆ ಹೋರಾಡಿದ ವೀರವನಿತೆಯರ ಸಾಹಸ, ತ್ಯಾಗ, ಅಪರಿಮಿತವಾದುದು. ಅದು ಪುರುಷರಷ್ಟೇ ಸಮಾನವಾದ ಹೋರಾಟವಾಗಿತ್ತು.
ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ , ನಾಯಕತ್ವದ ರೂವಾರಿಗಳಾಗಿ, ರಾಷ್ಟ್ರದ ಒಳಿತಿಗಾಗಿ, ಶ್ರಮಿಸಿದವರು ನಮ್ಮ ವೀರವನಿತೆಯರು. ಅವರಲ್ಲಿ ತಮ್ಮ ಜೀವನವನ್ನೇ ಪಣಕಿಟ್ಟವರು ವೀರನಾರಿಯರಾದ ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ಹಾಗೂ ರಾಣಿ ಅಹಲ್ಯಾಬಾಯಿ ಹೋಳ್ಕರ ಅವರು. ಇವರು ದಿವ್ಯತ್ರಯರಾಗಿ ಭಾರತದ ಚಾರಿತ್ರಿಕ ಪುಟಗಳಲ್ಲಿ ಶಾಶ್ವತವಾಗಿ ನೆಲೆಯಾದರು. ನಮ್ಮ ಈ ನೆಲದ ಸಂಸ್ಕೃತಿ, ಧರ್ಮಕ್ಕಾಗಿ, ಸಮಾಜದ ಒಳಿತಿಗಾಗಿ ಹೋರಾಡುವವರಿಗೆ ಸದಾ ಸ್ಪೂರ್ತಿದಾಯಕರಾದರು. ಈ ಮಾತೆಯರ ಸ್ಪೂರ್ತಿಯಿಂದ ಅದೆಷ್ಟೋ ವನಿತೆಯರು ಯುದ್ಧ ಭೂಮಿಯಲ್ಲಿ ಬಂದು ಹೋರಾಡಲು ಸಾಧ್ಯವಾಗದಿದ್ದಾಗ ಹೋರಾಡುತ್ತಿರುವ ಪುರುಷರ ಹಿಂದೆ ಶಕ್ತಿಯಾಗಿ ನಿಂತರು. ಇದರಿಂದಾಗಿಯೇ ಈ ನೆಲದ ಸಂಸ್ಕೃತಿ, ಅನ್ಯಾಯದ ವಿರುದ್ಧ ಹೋರಾಡಲು ಎಲ್ಲರೂ ಮುಂದೆ ಬಂದರು. ಇಂತಹ ಧೀರ ಮಾತೆಯರು ಸದಾ ಪ್ರಾತಃ ಸ್ಮರಣೀಯರಾಗಿ ಭಾರತೀಯರ ಮನ-ಮನೆಯಲ್ಲಿ ಉಳಿದರು. ವಿದ್ಯಾರ್ಥಿಗಳು ಇಂಥವರ ಯಶೋಗಾಥೆಯನ್ನು ಮತ್ತೆ ಮತ್ತೆ ಮೆಲುಕು ಹಾಕುವುದು ಸಮಕಾಲೀನ ಸಂದರ್ಭದಲ್ಲಿ ಅವಶ್ಯಕವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಧ್ಯಾನದ ಮುಖಾಂತರ ದೃಷ್ಟಿಯ ಕಡೆಗೆ ಸೆಳೆದು, ಪ್ರಸ್ತುತ ದಿನಮಾನದ ಸಮಸ್ಯೆಗಳು, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ಆ ಉದ್ದೇಶದಿಂದ ಈ ಮೂವರು ವೀರನಾರಿಯರ ಹೋರಾಟದ ಕುರಿತು ಚಿಂತನ ಮಂಥನಗಳನ್ನು ನಡೆಸುತ್ತಿದ್ದೇವೆ. ಆ ನಿಟ್ಟಿನಲ್ಲಿ ಅಧ್ಯಯನ ಪೀಠಗಳು ತುಂಬಾ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾವೆ ಎಂದರು.
ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ನಾಗರತ್ನಾ ಪರಾಂಡೆ ಅವರು, ಮೂವರು ವೀರನಾರಿಯರ ಕೌಟುಂಬಿಕ ಹಿನ್ನೆಲೆ, ಜೀವನ ಚರಿತ್ರೆ, ರಾಜಕೀಯ ಇತಿಹಾಸ ಹಾಗೂ ರಾಷ್ಟ್ರದ ಆರ್ಥಿಕತೆಗೆ ಅವರ ಕೊಡುಗೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಐ,ಕ್ಯೂ,ಎ,ಸಿ. ನಿರ್ದೇಶಕ ಪ್ರೊ. ಜೆ. ಮಂಜಣ್ಣ ಅವರು ವೀರನಾರಿಯರ ಹೋರಾಟದ ಸಂದರ್ಭದ ಕುರಿತು ಮಾತನಾಡಿದರು. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ಪದ್ಮಶಾಲಿ ಅವರು ಇಂದಿನ ಪೀಳಿಗೆಗೆ ರಾಷ್ಟ್ರಕ್ಕಾಗಿ ಹೋರಾಡಿದ ವೀರ ವನಿತೆಯರನ್ನು ಪರಿಚಯಿಸಬೇಕಿದೆ ಎಂದರು.
ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ಬಿ. ಎಸ್. ನಾವಿ ಮಾತನಾಡಿ, ವೀರವನಿತೆಯರ ಬದುಕಿನ ಚಿತ್ರಣವನ್ನು ವಿದ್ಯಾರ್ಥಿಗಳಿಗೆ ತಿಳಿಸುವುದರ ಮೂಲಕ ಅವರಲ್ಲಿ ದೇಶಭಕ್ತಿ ಜಾಗೃತಗೊಳಿಸುತ್ತಿದ್ದೇವೆ ಎಂದರು.
ಭೌತಶಾಸ್ತ್ರದ ವಿಭಾಗದ ಪ್ರೊ. ಬಾಲಚಂದ್ರ ಹೆಗಡೆ ಹಾಗೂ ವಿವಿಧ ವಿಭಾಗದ ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಶೋಧನಾ ವಿದ್ಯಾರ್ಥಿನಿ ಸ್ನೇಹಾ ಗುಜಾರ ನಿರೂಪಿಸಿ , ವಂದಿಸಿದರು.