ದರ್ಭಾಂಗ :
ಬಿಹಾರದ ದರ್ಭಾಂಗ ಜಿಲ್ಲೆಯ ಕೆರೆಯೊಂದು ಭೂಮಾಫಿಯಾಗೆ ಸಿಲುಕಿದ್ದು, ಕೆಲ ಪ್ರಭಾವಿಗಳು ಇಡೀ ಕೆರೆಯನ್ನು ಮುಚ್ಚಿಸುತ್ತಿದ್ದಾರೆ.
ಸಾರ್ವಜನಿಕರ ಅನುಕೂಲಕ್ಕಾಗಿ ಇರುವ ಕೆರೆಯನ್ನು ಮಣ್ಣನಿಂದ ಮುಚ್ಚಿಸಲಾಗುತ್ತಿದೆ. ರಾತ್ರೋರಾತ್ರಿ ಟ್ರಕ್ಗಳು ಕೆರೆಯ ಬಳಿ ಬಂದು ಮಣ್ಣು ಸುರಿದು ಹೋಗುತ್ತಿವೆ. ಹೀಗೆಯೇ ಆದರೆ, ಹನಿ ನೀರು ಇರದಂತೆ ಇಡೀ ಕೆರೆಯನ್ನು ಒತ್ತುವರಿ ಮಾಡಿಕೊಳ್ಳುತ್ತಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ದರ್ಭಾಂಗ ಜಿಲ್ಲೆಯಲ್ಲಿ ಕೆಲ ವರ್ಷಗಳಿಂದ ಭೂಮಿಗೆ ಒಳ್ಳೆಯ ಬೆಲೆ ಸಿಗುತ್ತಿದೆ. ಇದರಿಂದಾಗಿ ಭೂ ಮಾಫಿಯಾದಲ್ಲಿ ತೊಡಗಿರುವವರು ಕೆರೆಯನ್ನು ಅತಿಕ್ರಮಣ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
10-15 ದಿನಗಳಿಂದ ಮಣ್ಣಿನಿಂದ ಕೆರೆಯನ್ನು ಮುಚ್ಚಿಸಲಾಗುತ್ತಿದೆ ಎಂದು ಸ್ಥಳೀಯರು ದೂರು ನೀಡಿದ್ದಾರೆ. ಭೂಮಿಗೆ ಬಂಗಾರದ ಬೆಲೆ ಬಂದ ಕಾರಣ ಕೆರೆಯ ಒತ್ತುವರಿಗೆ ಸಂಚು ರೂಪಿಸಲಾಗಿದೆ. ರಾತ್ರಿ ವೇಳೆಯೇ ಮಣ್ಣು ತಂದು ಸುರಿಯಲಾಗುತ್ತಿದೆ. ಇದಕ್ಕೂ ಮೊದಲು ಮಣ್ಣು ಸುರಿಯುವ ಕೆಲಸವನ್ನು ತಡೆಯಲಾಗಿತ್ತು. ಈಗ ಮತ್ತೆ ಮುಂದುವರಿದಿದೆ ಎಂದು ಸಬ್ ಡಿವಿಷನಲ್ ಪೊಲೀಸ್ ಆಫೀಸರ್ (ಎಸ್ಡಿಪಿಒ) ಅಮಿತ್ ಕುಮಾರ್ ಮಾಹಿತಿ ನೀಡಿದ್ದಾರೆ.
ದಂಧೆ ಕೋರರು ಈಗಾಗಲೇ ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ. ಕೆರೆಯ ಅಂಗಳದಲ್ಲಿ ಗುಡಿಸಲುಗಳನ್ನು ನಿರ್ಮಿಸುವುದು, ಅಲ್ಲಿಯೇ ಠಿಕಾಣಿ ಹೂಡುವುದು, ರಾತ್ರಿ ವೇಳೆ ಮಣ್ಣು ಸುರಿಯುವುದು ಸೇರಿ ಇಡೀ ಕೆರೆಯನ್ನು ಅತಿಕ್ರಮಣ ಮಾಡಿಕೊಳ್ಳಲು ಹಲವು ರೀತಿಯಲ್ಲಿ ಸಂಚು ರೂಪಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಸ್ಥಳೀಯರ ದೂರಿನ ಬಳಿಕ ಕೆರೆಯಲ್ಲಿ ಮಣ್ಣು ಸುರಿಯುವುದನ್ನು ತಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಲಮೂಲವಿದ್ದ ಜಾಗದಲ್ಲಿ ಏಕಾಏಕಿ ಗುಡಿಸಲನ್ನು ನಿರ್ಮಿಸಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಭೂ ಮಾಫಿಯಾ ಗ್ಯಾಂಗ್ ಈ ಕೃತ್ಯ ಎಸಗಿರಬೇಕೆಂಬುದು ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿ ಯಾರೂ ಇರಲಿಲ್ಲ.
ಸ್ಥಳೀಯರ ಮಾಹಿತಿ ಪ್ರಕಾರ, ಈ ಕೊಳ ಸಾರ್ವಜನಿಕ ಸ್ವತ್ತಾಗಿದ್ದು, ಇದನ್ನು ಮೀನು ಸಾಕಾಣೆ ಹಾಗೂ ಇತರ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. ಆದರೆ ದರ್ಭಾಂಗ್ ನಲ್ಲಿ ಭೂಮಿಯ ಬೆಲೆ ಹೆಚ್ಚಳವಾಗುತ್ತಿದ್ದಂತೆಯೇ ಭೂ ಮಾಫಿಯಾ ಇದೀಗ ಜಲಮೂಲದ ಮೇಲೆ ದೃಷ್ಟಿ ನೆಟ್ಟಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಆರಂಭದಲ್ಲಿ ಕೊಳವನ್ನು ಮಣ್ಣಿನಿಂದ ಮುಚ್ಚಲು ಶುರು ಮಾಡಿದ ಸಂದರ್ಭದಲ್ಲಿ ಸ್ಥಳೀಯರು ವಲಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಬಳಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೆಲಸವನ್ನು ನಿಲ್ಲಿಸಿದ್ದರು. ಆದರೆ ಭೂ ಮಾಫಿಯಾ ರಾತ್ರೋರಾತ್ರಿ ಕಾರ್ಯನಿರ್ವಹಿಸುವ ಮೂಲಕ ಇಡೀ ಕೊಳವನ್ನೇ ತುಂಬಿಸಿ ಗುಡಿಸಲು ಕಟ್ಟಿರುವುದಾಗಿ ವರದಿ ವಿವರಿಸಿದೆ.
ಬಿಹಾರದಲ್ಲಿ ಇತ್ತೀಚೆಗೆ ಊಹಿಸಲು ಸಾಧ್ಯವಿಲ್ಲದಂತಹ ನಡೆದ ಕೆಲವು ಕಳವು ಘಟನೆಗಳಿಂದ ಹೆಚ್ಚು ಸುದ್ದಿಯಲ್ಲಿತ್ತು. 2022ರ ನವೆಂಬರ್ ನಲ್ಲಿ ರೈಲಿನ ಡೀಸೆಲ್ ಎಂಜಿನ್ ಅನ್ನು ಕಳವು ಮಾಡಿದ ಘಟನೆ ನಡೆದಿತ್ತು. ಅದೇ ರೀತಿ ರೋಹ್ಟಾಸ್ ಜಿಲ್ಲೆಯಲ್ಲಿ 60 ಅಡಿ ಉದ್ದದ ಕಬ್ಬಿಣದ ಸೇತುವೆಯನ್ನು ಕಳವು ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದರು.