ಬೆಳಗಾವಿಯಿಂದ ಕಾಂಗ್ರೆಸ್ ಪಕ್ಷದ ಚೈತ್ರ ಯಾತ್ರೆ ಬುಧವಾರದಿಂದ ಆರಂಭವಾಗಲಿದೆ. ಇದು ಕಾಂಗ್ರೆಸ್ ಪಾಲಿಗೆ ಹೊಸ ಶಕೆಯಾಗಲಿದೆ. ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರಾಗಿರುವ ಡಿ.ಕೆ. ಶಿವಕುಮಾರ್ ಅವರ ಅತ್ಯಂತ ಸಮರ್ಥ ನಾಯಕತ್ವದಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಪಕ್ಷದ ರಾಜ್ಯ ನಾಯಕಿ ಹಾಗೂ ಪ್ರಭಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪಡೆ ರಾಜ್ಯದ ದೊಡ್ಡ ಜಿಲ್ಲೆಯಿಂದ ರಣಕಹಳೆ ಮೊಳಗಿಸಲಿದೆ. ಇದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ನವೋತ್ಸಾಹ ತುಂಬುವುದರಲ್ಲಿ ಯಾವುದೇ ಸಂದೇಹ ಇಲ್ಲ.
ಜನಜೀವಾಳ ವಿಶೇಷ ವರದಿ ಬೆಳಗಾವಿ : 2023 ಕರ್ನಾಟಕದ ಕಾಂಗ್ರೆಸ್ ಪಕ್ಷಕ್ಕೆ ಅಗ್ನಿಪರೀಕ್ಷೆ. ಈ ವರ್ಷ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಬೇಕು ಎಂಬ ಸನ್ಹಾಹಲ್ಲಿರುವ ಕಾಂಗ್ರೆಸ್ ಪಕ್ಷ ಇದೀಗ ಪ್ರಜಾಧ್ವನಿ ವಿಜಯಯಾತ್ರೆಗೆ ಮುನ್ನುಡಿ ಬರೆಯಲು ಹೊರಟಿದೆ.
39 ನೇ ಅಖಿಲ ಭಾರತ ಕಾಂಗ್ರೆಸ್ ಮಹಾ ಅಧಿವೇಶನಕ್ಕೆ ಬರೋಬ್ಬರಿ 99 ವರ್ಷಗಳ ಹಿಂದೆ ಸಾಕ್ಷಿಯಾದ ಬೆಳಗಾವಿಯ ಐತಿಹಾಸಿಕ ನೆಲದಿಂದ ಕಾಂಗ್ರೆಸ್ ಪಕ್ಷದ ವಿಜಯದ ಚೈತ್ರ ಯಾತ್ರೆ ಆರಂಭವಾಗಲಿದೆ. ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿರುವ ಡಿ.ಕೆ. ಶಿವಕುಮಾರ್ ಅವರ ಸಾರಥ್ಯದ ಶತಮಾನದ ಹಿನ್ನೆಲೆ ಹೊಂದಿರುವ ಪಕ್ಷ ಮರಳಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷಿ ರಥಯಾತ್ರೆಯನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ.
ಬೆಳಗಾವಿ ಕರ್ನಾಟಕದಲ್ಲೇ ಅತ್ಯಂತ ದೊಡ್ಡ ಜಿಲ್ಲೆ. ರಾಜಕೀಯವಾಗಿ ಅತ್ಯಂತ ನಿರ್ಣಾಯಕವಾದ ಜಿಲ್ಲೆಯೂ ಹೌದು. ಹೀಗಾಗಿ ಡಿ.ಕೆ. ಶಿವಕುಮಾರ್ ಅವರು ಉತ್ತರದ ನಿರ್ಣಾಯಕ ನೆಲ ಬೆಳಗಾವಿಯನ್ನು ಕಾಂಗ್ರೆಸ್ ಪಕ್ಷದ ವಿಜಯ ಯಾತ್ರೆಗೆ ಅತ್ಯಂತ ಸೂಕ್ತವಾಗಿ ವಿವೇಚನೆಯಿಂದ ಆಯ್ದುಕೊಂಡಿರುವುದು ಅವರ ಚಾಣಾಕ್ಷತೆಗೆ ಹಿಡಿದ ಕೈಗನ್ನಡಿ ಎನ್ನಬಹುದಾಗಿದೆ.
ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದ ನಂತರ ಪಕ್ಷದ ಚಿತ್ರಣವೇ ಒಟ್ಟಾರೆ ಬದಲಾಗಿದೆ. ರಾಜ್ಯದೆಲ್ಲೆಡೆ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಮಟ್ಟದ ಬಿರುಗಾಳಿಯ ಅಲೆ ಆರಂಭವಾಗಿದೆ. ಡಿ.ಕೆ. ಶಿವಕುಮಾರ್ ಅವರು ಸಂಘಟನೆಯನ್ನು ಅತ್ಯಂತ ಬಲಯುತವಾಗಿ ಕಟ್ಟಿರುವುದು ಅವರ ಸಮರ್ಥ ಮುಂದಾಳತ್ವದ ಸಂಕೇತವಾಗಿದೆ.
ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಕಟ್ಟುವ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳಿಂದ ಅಹರ್ನಿಶಿಯಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪಕ್ಷವನ್ನು ಬೇರು ಮಟ್ಟದಲ್ಲಿ ಕಟ್ಟಲು ಅವರು ಶ್ರಮಿಸುತ್ತಾ ಬಂದಿರುವುದನ್ನು ರಾಷ್ಟ್ರಮಟ್ಟದ ಕಾಂಗ್ರೆಸ್ ನಾಯಕರು ಸಹ ಗುರುತಿಸಿದ್ದಾರೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷ ಅವರ ಸಮರ್ಥ ನಾಯಕತ್ವದಲ್ಲಿ ಮತ್ತೆ ಅಧಿಕಾರ ಪಡೆಯುವ ಎಲ್ಲಾ ಸೂಚನೆಗಳು ಇವೆ. ಡಿ.ಕೆ. ಶಿವಕುಮಾರ್ ಅವರು ಪಕ್ಷ ಸಂಘಟನೆಯ ಜೊತೆ ಪ್ರಭಾವಿ ನಾಯಕರನ್ನು ಪಕ್ಷ ಕಟ್ಟುವಲ್ಲಿ ತಮ್ಮ ಜೊತೆ ಜೊತೆಗೆ ಕೊಂಡೊಯ್ಯುತ್ತಿದ್ದಾರೆ. ಯಾವುದೇ ಭಿನ್ನಮತ ಇಲ್ಲದೆ ಅತ್ಯಂತ ಸಮರ್ಥ ರೀತಿಯಲ್ಲಿ ಅವರು ಪಕ್ಷ ಕಟ್ಟುತ್ತಿರುವುದು ಗಮನಿಸಿರುವುದನ್ನು ನೋಡಿರುವ ಎದುರಾಳಿ ಪಕ್ಷಗಳು ನಡುಕಗೊಂಡಿವೆ.
ಕಾಂಗ್ರೆಸ್ ಪಕ್ಷ ದಿಗ್ಗಜ ನಾಯಕರು ಪಡೆಯನ್ನೇ ಹೊಂದಿದೆ. ಎಲ್ಲಾ ನಾಯಕರನ್ನು ಒಳಗೊಂಡು ಅವರ ಒಟ್ಟಾರೆ ಅಭಿಪ್ರಾಯವನ್ನು ಸಂಗ್ರಹಿಸಿ ಶಿವಕುಮಾರ್ ಅವರು ಪಕ್ಷವನ್ನು ನಿಬ್ಬೆರಗಾಗುವ ರೀತಿಯಲ್ಲಿ ಕಟ್ಟುತ್ತಿರುವುದು ಸೂಜಿಗವೇ ಸರಿ. ಎಲ್ಲಾ ನಾಯಕರಿಗೆ ಸಲ್ಲಬೇಕಾದ ಗೌರವವನ್ನು ನೀಡುವಲ್ಲಿ ಅವರು ವಹಿಸುವ ಮುತುವರ್ಜಿ ಅವರಲ್ಲಿನ ನಾಯಕತ್ವ ಗುಣವನ್ನು ಸಾರಿ ಹೇಳುವಂತಿದೆ.
ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಸಾರಥ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂಬ ವಾತಾವರಣ ಈಗಾಗಲೇ ರಾಜ್ಯದೆಲ್ಲೆಡೆ ಕಂಡು ಬಂದಿದೆ. ಒಟ್ಟಾರೆ ಬೆಳಗಾವಿಯಿಂದ ಆರಂಭವಾಗಲಿರುವ ಕಾಂಗ್ರೆಸ್ ಪಕ್ಷದ ಯಾತ್ರೆ ಯಶಸ್ವಿಯಾಗಲಿ ಎನ್ನುವುದು ಕೋಟ್ಯಂತರ ಕಾಂಗ್ರೆಸ್ ಕಾರ್ಯಕರ್ತರ ಅಭಿಲಾಷೆಯಾಗಿದೆ.
ಬೆಳಗಾವಿಯಿಂದ ಆರಂಭವಾಗಲಿರುವ ಪ್ರಜಾಧ್ವನಿ ಸಮಾವೇಶ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಅಧಿಕಾರಕ್ಕೆ ತರುತ್ತದೆ ಎಂಬ ವಿಶ್ವಾಸದ ಮಾತುಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತಿನ ಮುಖ್ಯಾಂಶಗಳು :‘ಹೊಸ ವರ್ಷ, ಹೊಸ ಪರ್ವ. ಬದಲಾವಣೆ ಹಾಗೂ ಕಾಂಗ್ರೆಸ್ ಪಕ್ಷದ ವಿಜಯ ಪರ್ವ ಆರಂಭವಾಗಿದೆ. ಈ ಪವಿತ್ರವಾದ ಗಳಿಗೆಯಲ್ಲಿ ಜನರಿಗಾಗಿ ಪ್ರಜಾಧ್ವನಿ ಯಾತ್ರೆ ವಿಚಾರ ತಿಳಿಸುತ್ತಿದ್ದೇವೆ.
ಜನರ ಭಾವನೆ ತಿಳಿಸಲು ಕಳೆದ ಎರಡು ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷ ಸತತವಾಗಿ ಪ್ರಯತ್ನಿಸಿದೆ. ಈ ಪ್ರಜಾಧ್ವನಿ ಯಾತ್ರೆ ಪ್ರಜೆಗಳ ಧ್ವನಿ, ಪ್ರಜೆಗಳ ಭಾವನೆ ಆಗಿದೆ. ನಾವು ಋಣಾತ್ಮಕತೆ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಸಕಾರಾತ್ಮಕತೆ ಬಗ್ಗೆ ಯೋಚಿಸುತ್ತಿದ್ದೇವೆ.
ಕಳೆದ ಮೂರೂವರೆ ವರ್ಷಗಳಿಂದ ಬಿಜೆಪಿ ಸರ್ಕಾರದ ವೈಫಲ್ಯ, ನಾವು ಜನರ ಬದುಕಿಗಾಗಿ ಏನು ಮಾಡಲು ಸಿದ್ಧವಿದ್ದೇವೆ ಎಂದು ತಿಳಿಸಿಲು ನಾವು ಈ ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೇವೆ.
ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಐತಿಹಾಸಿಕ ಸ್ಥಳ ಬೆಳಗಾವಿಯ ಗಾಂಧಿ ಬಾವಿಯಿಂದ ನಾಳೆ ಈ ಯಾತ್ರೆ ಆರಂಭವಾಗುತ್ತಿದೆ. ಗಾಂಧಿಜಿ ಅವರಿಗೆ ಗೌರವ ಸಲ್ಲಿಸಿ ಯಾತ್ರೆ ಆರಂಭಿಸುತ್ತಿದ್ದೇವೆ. ಗಾಂಧೀಜಿ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ನಾಯಕತ್ವ ವಹಿಸಿಕೊಂಡ ಪುಣ್ಯ ಭೂಮಿಯಿಂದ ಯಾತ್ರೆ ಆರಂಭಿಸಲು ತೀರ್ಮಾನಿಸಿದ್ದೇವೆ. ಬ್ರಿಟೀಷರನ್ನು ತೊಲಗಿಸಲು ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿಕೊಂಡರು. ಈಗ ಅದೇ ಪುಣ್ಯಭೂಮಿಯಿಂದ ಭ್ರಷ್ಟ ಬಿಜೆಪಿ ಸರ್ಕಾರ ತೊಲಗಿಸಲು ಯಾತ್ರೆ ಆರಂಭಿಸುತ್ತಿದ್ದೇವೆ. ಕರ್ನಾಟಕ ರಾಜ್ಯದ ಬದಲಾವಣೆ ಹಾಗೂ ವಿಜಯಕ್ಕೆ ಮುನ್ನುಡಿ ಬರೆಯುತ್ತಿದ್ದೇವೆ.
ಕರ್ನಾಟಕ ಅಭಿವೃದ್ಧಿಶೀಲ ರಾಜ್ಯ. ಇಡೀ ಭಾರತಕ್ಕೆ ನಮ್ಮ ಆಡಳಿತ ಮಾದರಿಯಾಗಿತ್ತು. ಇಡೀ ವಿಶ್ವದ ಉದ್ಯಮಿಗಳು ರಾಜ್ಯ ಹಾಗೂ ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆ ಮಾಡಲು ಉತ್ಸುಕರಾಗಿದ್ದರು. ಈ ರಾಜ್ಯದ ಮೂಲಕ ದೇಶವನ್ನು ನೋಡುತ್ತಿದ್ದರು. ಆದರೆ ಇಂದು ರಾಜ್ಯಕ್ಕೆ ಭ್ರಷ್ಟಾಚಾರದ ಕಳಂಕ ಬಂದಿದೆ. ಈ ಕಳಂಕವನ್ನು ನಾವು ದೂರ ಮಾಡಬೇಕು. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಾವುದೇ ವರ್ಗದವರ ಬದುಕು ಹಸನಾಗಿಲ್ಲ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದ ಬಿಜೆಪಿ ರೈತರ ಬದುಕು ಹಸನು ಮಾಡಲಿಲ್ಲ. ಯುವಕರಿಗೆ ಉದ್ಯೋಗ ನೀಡಲಿಲ್ಲ. ಹೆಣದ ಮೇಲೆ ಹಣ ಮಾಡಿದ್ದಾರೆ. ಪ್ರತಿ ಇಲಾಖೆಯಲ್ಲಿ ಎಲ್ಲಾ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆದಿದೆ.
ಬಿಜೆಪಿ ಅವರು 104 ಸ್ಥಾನ ಗಳಿಸಿದರು. ಜನಾದೇಶ ಇಲ್ಲದಿದ್ದರೂ ಅವರು ಆಪರೇಶನ್ ಕಮಲದ ಮೂಲಕ ಅಧಿಕಾರಕ್ಕೆ ಬಂದರು. ಈ ಮೂರುವರೆ ವರ್ಷಗಳ ಅಧಿಕಾರದಲ್ಲಿ ಬಿಜೆಪಿ ತಾನು ಕೊಟ್ಟ 600 ಭರವಸೆಗಳ ಪೈಕಿ 550 ಭರವಸೆಗಳನ್ನು ಈಡೇರಿಸಲಿಲ್ಲ. ನಾವು ಈ ಬಗ್ಗೆ ಕಳೆದ ಎರಡು ತಿಂಗಳಿಂದ ಪ್ರತಿನಿತ್ಯ ನಿಮ್ಮ ಹತ್ತಿರ ಉತ್ತರ ಇದೆಯಾ ಎಂದು ಕೇಳುತ್ತಿದ್ದೇವೆ. ಬಿಜೆಪಿವರು ಉತ್ತರ ನೀಡಲಾಗುತ್ತಿಲ್ಲ. ರಾಜ್ಯದ 2 ಲಕ್ಷ ಯುವಕರು ತಮಗೆ ಆಗಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಬಗ್ಗೆಯೂ ಉತ್ತರ ನೀಡಿಲ್ಲ
2 ಲಕ್ಷ ಗುತ್ತಿಗೆದಾರರು 40 % ಕಮಿಷನ್ ಕಿರುಕುಳ ತಾಳಲಾಗುತ್ತಿಲ್ಲ ಎಂದು ಧ್ವನಿ ಎತ್ತಿದ್ದಾರೆ. ಅದಕ್ಕೂ ಈ ಸರಕಾರ ಪರಿಹಾರ ನೀಡಲಿಲ್ಲ. ಎಲ್ಲ ವರ್ಗದ ಜನ ಭಯದಲ್ಲಿ ಬದುಕುತ್ತಿದ್ದಾರೆ.
ರಾಜ್ಯದಲ್ಲಿ 83,190 ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. 1258 ಕಂಪನಿಗಳು ಬಾಗಿಲು ಹಾಕುವ ಪರಿಸ್ಥಿತಿ ಬಂದಿದೆ. ಬಂಡವಾಳ ಹೂಡಿಕೆದಾರರು ನೆರೆ ರಾಜ್ಯಕ್ಕೆ ವಲಸೆ ಹೋಗುತ್ತಿದ್ದಾರೆ. ಇದು ರಾಜ್ಯಕ್ಕೆ ಅಪಮಾನಕರ ಸಂಗತಿ. ಪಿಎಸ್ಐ, ಜೆಇಇ, ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಹಗರಣ ಮಾಡಿ ಅನ್ಯಾಯ ಎಸಗಲಾಗಿದೆ. ಐಪಿಎಸ್, ಐಎಎಸ್ ಅಧಿಕಾರಿಗಳು ಜೈಲು ಸೇರುವ ಇತಿಹಾಸವನ್ನು ಬಿಜೆಪಿ ಸೃಷ್ಟಿಸಿದೆ.
ರೈತರ ಆದಾಯ ಡಬಲ್ ಮಾಡುತ್ತೇವೆ, ಬೆಂಬಲ ಬೆಲೆ ನೀಡುತ್ತೇವೆ ಎಂದರು. ಆದರೆ ಏನಾಯ್ತು? ರೈತನಿಗೆ ಬೆಂಬಲ ಬೆಲೆ ನಿಗದಿ ಮಾಡಲಿಲ್ಲ. ಕೇಂದ್ರ ಸರ್ಕಾರ ಕರಾಳ ಕಾಯ್ದೆ ರದ್ದು ಮಾಡಿದರೂ ರಾಜ್ಯದಲ್ಲಿ ಮಾಡಲಿಲ್ಲ. ಇದರ ಬಗ್ಗೆ ಪ್ರಶ್ನೆ ಮಾಡಿ ಪ್ರತಿಭಟನೆ ಮಾಡಿದರೆ ನಮ್ಮ ಮೇಲೆ ಕೇಸ್ ಹಾಕುತ್ತಾರೆ. ನಾವು ಈ ಕೇಸ್ ಗಳಿಗೆ ಹೆದರುವುದಿಲ್ಲ.
ಬಿಜೆಪಿಯ ಪಾಪದ ಪುರಾಣವನ್ನು ಜನರ ಮುಂದೆ ಇಡಬೇಕು, ಮುಂದೆ ನಾವು ಮಾಡುವ ಬದಲಾವಣೆ ಜನರಿಗೆ ತಿಳಿಸಲು ಗ್ಯಾರಂಟಿ ಯಾತ್ರೆ ಮಾಡುತ್ತೇವೆ. ನಾವು ನಮ್ಮ ಭರವಸೆಗಳಿಗೆ ಗ್ಯಾರಂಟಿ ನೀಡುತ್ತೇವೆ. ಕಾರಣ, ನಾವು ಬಸವಣ್ಣನವರ ನಾಡಿನಲ್ಲಿದ್ದು ನಾವು ನುಡಿದಂತೆ ನಡೆಯುತ್ತೇವೆ.
ಇಂದು ಈ ಯಾತ್ರೆಯ ಲೋಗೋವನ್ನು ಅನಾವರಣ ಮಾಡುತ್ತೇವೆ. ಬಿಜೆಪಿ ಪಾಪದ ಪುರಾಣವನ್ನು ಜನರ ಮುಂದಿಟ್ಟು, ಜನರ ಹೃದಯ ಗೆದ್ದು ಬದಲಾವಣೆ ತರಲು ಮುಂದಾಗಿದ್ದೇವೆ.
ರಾಜ್ಯದ ಎಲ್ಲ ಜನರು ತಮ್ಮ ಕೈಯನ್ನು ನಮ್ಮ ಕೈ ಜತೆ ಜೋಡಿಸಿ. ಒಗ್ಗಟ್ಟಿನಿಂದ ಬದಲಾವಣೆ ಮಾಡೋಣ ಎಂದು ಕೇಳಿಕೊಳ್ಳುತ್ತೇನೆ. ಆ ಮೂಲಕ ಕೈ ಜೋಡಿಸಿ ಕರುನಾಡಿಗಾಗಿ. ನಿಮ್ಮ ಹಕ್ಕು ನಮ್ಮ ಹೋರಾಟ. ಈ ಬಗ್ಗೆ ವೆಬ್ ಸೈಟ್ ಆರಂಭಿಸಿದ್ದು, prajadhwani.com ಗೆ ಹಾಗೂ ದೂರವಾಣಿ ಸಂಖ್ಯೆ 9537 224 224ಕ್ಕೆ ಕರೆ ಮಾಡಿ ನಿಮ್ಮ ಅಭಿಪ್ರಾಯವನ್ನು ಕಳುಹಿಸಿಕೊಡಿ.’
ಪಕ್ಷದ ಮೊದಲ ಟಿಕೆಟ್ ಪಟ್ಟಿ ಯಾವಾಗ ಬಿಡುಗಡೆ ಮಾಡುತ್ತೀರಿ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ‘ಟಿಕೆಟ್ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಸಂಕ್ರಾಂತಿ ಹಬ್ಬದ ದಿನವೂ ಸಭೆ ಸೇರುತ್ತಿದ್ದೇವೆ. ಚರ್ಚೆ ಮಾಡಿದ ನಂತರ ಟಿಕೆಟ್ ಪಟ್ಟಿ ಬಿಡುಗಡೆ ಮಾಡುತ್ತೇವೆ’ ಎಂದು ಉತ್ತರಿಸಿದರು.
ಪ್ರಜಾಧ್ವನಿ ಸಮಾವೇಶ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಲಿದೆ. ಬಿಜೆಪಿಯ ಜನವಿರೋಧಿ ನೀತಿಗಳನ್ನು ರಾಜ್ಯದ ಜನತೆಯ ಮುಂದಿಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಪ್ರಜಾಧ್ವನಿ ಯಾತ್ರೆ ಕಾಂಗ್ರೆಸ್ ಪಕ್ಷದ ವಿಜಯ ಪರ್ವವಾಗಲಿದೆ. –ಲಕ್ಷ್ಮೀ ಹೆಬ್ಬಾಳಕರ್, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರು.
ಪಕ್ಷದ ಮುಖಂಡರೆಲ್ಲ ಕಳೆದ ಮೂರು ವರ್ಷಗಳಿಂದ ಜನರ ಬೇಡಿಕೆ, ನಿರೀಕ್ಷೆಗಳನ್ನು ಸರಕಾರಕ್ಕೆ ತಿಳಿಸುವ ಪ್ರಯತ್ನ ಮಾಡುತ್ತ ಬಂದಿದ್ದೇವೆ. ಸರಕಾರ ಜನರ ಯಾವ ನಿರೀಕ್ಷೆಗಳನ್ನೂ ಈಡೇರಿಸಲು ಬದ್ಧವಾಗಿಲ್ಲ. ಪ್ರಸ್ತುತ ಪ್ರಜಾಧ್ವನಿ ಯಾತ್ರೆಯ ಮೂಲಕ ಸರಕಾರದ ಜನ ವಿರೋಧಿ ಧೋರಣೆಗಳ ಬಗ್ಗೆ ಜನರಿಗೆ ತಿಳಿಸುತ್ತೇವೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಜನರ ಆಶೀರ್ವಾದ ದೊಡ್ಡ ಮಟ್ಟದಲ್ಲಿ ಲಭಿಸಲಿದೆ.-ಚನ್ನರಾಜ ಹಟ್ಟಿಹೊಳಿ, ವಿಧಾನ ಪರಿಷತ್ ಸದಸ್ಯರು.