ಬೆಳಗಾವಿ : ಮಹಿಳೆಯ ಸಾವು ಈಗ ಅನುಮಾನ ಹುಟ್ಟಿಸಿದೆ. ಕೊನೆಗೂ ಈ ಬಗ್ಗೆ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಶಿಂದೊಳ್ಳಿಯಲ್ಲಿ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು ಅವರು ತಾವಾಗಿಯೇ ಬಾವಿಗೆ ಬಿದ್ದಿದ್ದಾರೆಯೇ ಇಲ್ಲವೇ ಯಾರಾದರೂ ಅವರನ್ನು ತಳ್ಳಿದ್ದಾರೆಯೇ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ದೇವಸ್ಥಾನದಲ್ಲಿ 40 ಗ್ರಾಮ್ ಬೆಳ್ಳಿ ಆಭರಣ ಕಳ್ಳತನವಾಗಿದೆ. ಇದು ನಮ್ಮ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ನಡೆದ ಘಟನೆ ಏನು ?
ಶಿಂದೊಳ್ಳಿ ಗ್ರಾಮದ ಬಾವಿಯಲ್ಲಿ ಗುರುವಾರ ಬೆಳಗ್ಗೆ ಭಾರತಿ ಪೂಜಾರಿ (48) ಎಂಬುವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಶಿಂದೊಳ್ಳಿಯ ಮಸಣವ್ವ ದೇವಸ್ಥಾನಕ್ಕೆ ಗುರುವಾರ ಕಳ್ಳರು ನುಗ್ಗಿದ್ದರು. ಇದೇ ಸಂದರ್ಭದಲ್ಲಿ ಭಾರತಿ ತಮ್ಮ ದನ-ಕರುಗಳ ಸಗಣಿ ಎತ್ತಿ ತಿಪ್ಪೆಗೆ ಹಾಕಲು ತೆರಳಿದ್ದರು. ದೇವಸ್ಥಾನದಲ್ಲಿ ಕಳ್ಳತನ ನಡೆಯುತ್ತಿರುವುದನ್ನು ಗಮನಿಸಿದರು. ಇದು ಗ್ರಾಮಸ್ಥರಿಗೆ ತಿಳಿದು ನಾವು ಸಿಕ್ಕಿ ಬೀಳುತ್ತೇವೆ ಎಂಬ ಭಯದಿಂದ ಕಳ್ಳರು ಭಾರತಿ ಅವರನ್ನು ಬಾವಿಯಲ್ಲಿ ತಳ್ಳಿ ಕೊಲೆ ಮಾಡಿರಬಹುದು ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಗಣಿ ಎಸೆಯಲು ಹೋಗಿದ್ದ ಭಾರತಿ ಮನೆಗೆ ಬಾರದೆ ಇದ್ದುದ್ದರಿಂದ ಕುಟುಂಬಸ್ಥರು ಹುಡುಕಾಡಿದರು. ಕೊನೆಗೆ ದೇವಸ್ಥಾನ ಎದುರು ಸಗಣಿಬುಟ್ಟಿ ಮತ್ತು ಬಾವಿ ಬಳಿ ಪಾದರಕ್ಷೆ ಗಮನಿಸಿದರು. ಪೊಲೀಸರಿಗೆ ಮಾಹಿತಿ ಕೊಟ್ಟ ನಂತರ ಬಾವಿಯಲ್ಲಿ ಶವ ಪತ್ತೆಯಾಗಿತ್ತು. ಘಟನೆ ಬಗ್ಗೆ ಗ್ರಾಮದಲ್ಲಿ ಇದೀಗ ನಾನಾ ರೀತಿಯಲ್ಲಿ ಚರ್ಚೆ ನಡೆಯುತ್ತಿದೆ. ಒಟ್ಟಾರೆ ಇದೀಗ ಪೊಲೀಸರು ನಡೆದಿರುವ ಘಟನೆ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು ಎನ್ನುವುದು ಜನತೆಯ ಆಗ್ರಹವಾಗಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.